Friday, May 24, 2024
Homeಮನರಂಜನೆಸಿನಿಮಾದಲ್ಲೂ ಅಪ್ಪ-ಮಗಳಾದ ದುನಿಯಾ ವಿಜಯ್ ಮತ್ತು ಪುತ್ರಿ

ಸಿನಿಮಾದಲ್ಲೂ ಅಪ್ಪ-ಮಗಳಾದ ದುನಿಯಾ ವಿಜಯ್ ಮತ್ತು ಪುತ್ರಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸಿದ್ದ ಸಾರಥಿ ಚಿತ್ರವನ್ನು ನಿರ್ಮಿಸಿದ್ದ ಕೆ.ವಿ.ಸತ್ಯಪ್ರಕಾಶ್ ಅವರು ಹನ್ನೆರಡು ವರ್ಷಗಳ ನಂತರ ಸಾರಥಿ ಫಿಲಂಸ್ ಮೂಲಕ ನೂತನ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಣಕ್ಕೆ ಸತ್ಯಪ್ರಕಾಶ್ ಅವರ ಪುತ್ರ ಸೂರಜ್ ಗೌಡ ಅವರು ಸಾಥ್ ನೀಡುತ್ತಿದ್ದಾರೆ.

ಜಂಟಲ್ ಮ್ಯಾನ್, ಗುರುಶಿಷ್ಯರು ಚಿತ್ರಗಳ ನಿರ್ದೇಶಕ ಹಾಗೂ ಕಾಟೇರ ಚಿತ್ರದ ಲೇಖಕ ಜಡೇಶ ಕೆ. ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್ ನಾಯಕರಾಗಿ ನಟಿಸುತ್ತಿರುವ 29ನೇ ಚಿತ್ರ ವಿ ಕೆ 29 ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಮಹಾಲಕ್ಷ್ಮೀಪುರದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಆರಂಭವಾಯಿತು.

ಶಾಸಕ ಗೋಪಲಯ್ಯ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು. ನಿರ್ದೇಶಕ ತರುಣ್ ಸುೀರ್ ಆಕ್ಷನ್ ಕಟ್ ಹೇಳಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ(ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಜಡೇಶ ಕೆ. ಹಂಪಿ, ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ. ಕೋಲಾರ ಭಾಗದಲ್ಲಿ ನಡೆಯುವ ಕಥೆಯಾಗುವುದರಿಂದ ಸಂಭಾಷಣೆ ಕೋಲಾರದ ಭಾಷೆಯಲ್ಲೇ ಇರುತ್ತದೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ.

ಅವರು ಕೋಲಾರದವರೆ ಆಗಿರುವುದು ವಿಶೇಷ.ಇದು 90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶಿವರಾಮ ಕಾರಂತರ ಚೋಮನ ದುಡಿಯ ಚೋಮನ ಪಾತ್ರ ಈ ಚಿತ್ರಕ್ಕೆ ಸ್ಪೂರ್ತಿ. ಹಾಗಂತ ಚೋಮನ ದುಡಿ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ಹಾಕಲಾಗುತ್ತಿದೆ. ಉಳಿದಂತೆ ಕೋಲಾರ, ಮೈಸೂರಿನಲ್ಲೂ ಚಿತ್ರೀಕರಣ ನಡೆಯಲಿದೆ. ನಾಯಕ ವಿಜಯ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಈ ಚಿತ್ರದ ವಿಶೇಷವೆಂದರೆ ತಂದೆ – ಮಗ ನಿರ್ಮಿಸುತ್ತಿದ್ದಾರೆ. ತಂದೆ – ಮಗಳು ಅಭಿನಯಿಸುತ್ತಿದ್ದೇವೆ. ನನ್ನ ಮಗಳು ರಿತನ್ಯ, ಮುಂಬೈನ ಅನುಪಮ್ ಖೇರ್ ಇನ್ಸ್ಟಿಟ್ಯೂಟ್ನಲ್ಲಿ ಅಭಿನಯದ ಕುರಿತು ಕಲಿತು ಬಂದಿದ್ದಾಳೆ. ಈ ಚಿತ್ರದಲ್ಲೂ ನನ್ನ ಮಗಳ ಪಾತ್ರದಲ್ಲೇ ಅಭಿನಯಿಸುತ್ತಿದ್ದಾಳೆ. ನಾನು ಚಿತ್ರರಂಗಕ್ಕೆ ಬಂದು ಮೂವತ್ತು ವರ್ಷ ಹಾಗೂ ನಾಯಕನಾಗಿ ಹದಿನೆಂಟು ವರ್ಷಗಳಾಗಿದೆ. ಈ ಸಂದರ್ಭದಲ್ಲಿ ನನ್ನ ಮಗಳು ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾಳೆ. ಒಬ್ಬ ತಂದೆ ಮಗಳಿಗಾಗಿ ಏನೆಲ್ಲಾ ಕೊಡಬಹುದು? ಸ್ಕ್ರಿಪ್ಟ್ ನಲ್ಲೂ ಅರ್ಧಭಾಗಕೊಡಬಹುದು ಎಂದರು ದುನಿಯಾ ವಿಜಯ್.

ಮೊದಲ ಚಿತ್ರ ಅಪ್ಪನ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ. ಈ ಚಿತ್ರದಿಂದ ನನ್ನ ಹೆಸರನ್ನು ರಿತನ್ಯ ಎಂದು ಬದಲಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಪೊ್ರೀತ್ಸಾಹ ನನಗಿರಲಿ ಎಂದರು ರಿತನ್ಯ(ಮೋನಿಕಾ).ಜಡೇಶ್ ಅವರ ಕಥೆ ಇಷ್ಟವಾಯಿತು. ಕೇವಲ ಇಪ್ಪತ್ತು ದಿನಗಳಲ್ಲಿ ಚಿತ್ರ ಆರಂಭವಾಯಿತು. ನಿರ್ಮಾಣದಲ್ಲಿ ನನ್ನ ಜೊತೆಗೆ ಮಗ ಸೂರಜ್ ಗೌಡ ಇದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ನಿರ್ಮಾಪಕ ಸತ್ಯಪ್ರಕಾಶ್ ತಿಳಿಸಿದರು.

RELATED ARTICLES

Latest News