Sunday, May 12, 2024
Homeರಾಜ್ಯಮಾಜಿ ಸಿಎಂ ಡಿ.ವಿ.ಸದಾನಂದಗೌಡರಿಗೆ `ಕೈ' ಗಾಳ.!

ಮಾಜಿ ಸಿಎಂ ಡಿ.ವಿ.ಸದಾನಂದಗೌಡರಿಗೆ `ಕೈ’ ಗಾಳ.!

ಬೆಂಗಳೂರು,ಮಾ.18- ಕೇಂದ್ರದ ಮಾಜಿ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾಗಿ ಮತ್ತೊಮ್ಮೆ ಸ್ರ್ಪಧಿಸುವ ಇಂಗಿತದಲ್ಲಿದ್ದ ಡಿ.ವಿ.ಸದಾನಂದಗೌಡ ನಾಳೆ ಪತ್ರಿಕಾಗೋಷ್ಠಿ ಕರೆದಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆದಿರುವ ಸದಾನಂದಗೌಡ, ತಮ್ಮ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಪ್ರಕಟಿಸುವ ಸಾಧ್ಯತೆ ಇದೆ.

ಇದರ ಬೆನ್ನಲ್ಲೇ ನನಗೆ ಕಾಂಗ್ರೆಸ್ ಸೇರುವಂತೆ ಕೆಲವು ನಾಯಕರು ಸಂಪರ್ಕಿಸಿರುವುದು ನಿಜ. ಈ ಬಗ್ಗೆ ಕುಟುಂಬದವರ ಜೊತೆ ನಾನು ಚರ್ಚಿಸಿ ತೀರ್ಮಾನಿಸಬೇಕೆಂದು ಡಿವಿಎಸ್ ಹೇಳಿರುವುದು ಬಿಜೆಪಿ ತೊರೆದು ಕೈನತ್ತ ಮುಖ ಮಾಡಿದ್ದರಾ ಎಂಬ ಅನುಮಾಗಳು ವ್ಯಕ್ತವಾಗಿದೆ. ನನ್ನನ್ನು ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿರುವುದು ನಿಜ. ಇನ್ನು ಕಾಂಗ್ರೆಸ್ ನಾಯಕರು ಚರ್ಚೆ ಮಾಡಿದ್ದರೂ ನಾನು ಯಾವುದೇ ನಿರ್ಧಾರವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ನನ್ನ ನಿರ್ಧಾರಗಳನ್ನು ನನ್ನ ಕುಟುಂಬದ ಸದಸ್ಯರ ಜತೆ ಚರ್ಚಿಸಬೇಕು. ನಂತರ, ನಾನು ಮುಂದಿನ ತೀರ್ಮಾನವನ್ನು ಬಹಿರಂಗವಾಗಿ ಹೇಳುತ್ತೇನೆ ಎಂದರು.

ನನ್ನ ಪಕ್ಷದ ಪ್ರಮುಖರೊಬ್ಬರು ನನ್ನ ಜೊತೆಗೆ ಸಮಾಲೋಚನೆ ಮಾಡಿದ್ದಾರೆ. ನಿನ್ನೆ ನಮ್ಮ ಮನೆಗೆ ಆಗಮಿಸಿ, ಮಾತುಕತೆ ನಡೆಸಿದ್ದಾರೆ. ಅವರು ಹೇಳಿರುವ ಮಾತನ್ನು ನಾನು ಈಗ ಹೇಳಲು ಆಗುವುದಿಲ್ಲ. ನಿಮಗೆ ಏನೇ ಸುದ್ದಿ ಬಂದರೂ ಅರ್ಧ ಘಂಟೆ, ಒಂದು ಘಂಟೆ ಮಾತ್ರ. ನಾಳೆ ಎಲ್ಲವನ್ನೂ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಆಗಮನದ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪರ ಬಂಡಾಯ ವಿಚಾರವಾಗಿ ಮಾತನಾಡಿದ ಡಿವಿಎಸ್, ನಾನು ಈಶ್ವರಪ್ಪರ ಬಳಿ ಮಾತನ್ನಾಡಿದ್ದೇನೆ. ನಾನು ಅವರಿಗೆ ಹೇಳಿದ್ದೆ. ಯಾರಿಗೆಲ್ಲಾ ಅನ್ಯಾಯ ಆಗಿದೆಯೋ, ಅವರೆಲ್ಲಾ ಒಂದುಗೂಡಿ ಹೈಕಮಾಂಡ್ ನಾಯಕರ ಬಳಿ ಹೋಗೋಣ ಎಂದಿದ್ದೆ. ಆದರೆ ಈಶ್ವರಪ್ಪನವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಅದು ಅವರ ನಿಲುವು. ಅವರ ನಿಲುವು ಬಗ್ಗೆ ನಾನೇನು ಹೇಳುವುದಿಲ್ಲ. ನಾನು ನಾಳೆ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಉತ್ತರದಲ್ಲಿ ಶೇ.100 ನನ್ನ ಹೆಸರು ಮಾತ್ರ ಬಂತು. ದೆಹಲಿ ಹಾಗೂ ಸ್ಥಳೀಯವಾಗಿ ಒಂದಷ್ಟು ವಿದ್ಯಮಾನ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ನಿಮಗೇ ಟಿಕೆಟ್ ಎಂದೇಳಿ ಕೊನೇ ಕ್ಷಣದಲ್ಲಿ ನನ್ನ ರಕ್ಷಣೆಗೆ ಬರಲಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ನನಗೆ ಆಗಿರುವ ಅನ್ಯಾಯದ ಬಗ್ಗೆ ಕೆಲವೊಂದು ಮನದಾಳದ ವಿಚಾರಗಳನ್ನು ಹೇಳಿಕೊಳ್ಳಬೇಕಿದೆ. ಅದಕ್ಕಾಗಿ ನಾಳೆ ಸುದ್ದಿಗೋಷ್ಠಿ ಕರೆಯುತ್ತೇನೆ. ನಾಳೆ ಯಾವ ನಿರ್ಣಯ ಎಂದು ಈಗಲೇ ಹೇಳಿಬಿಟ್ಟರೆ, ನಾಳೆಗೆ ಏನೂ ಉಳಿಯೊಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೆ, ತಿಳಿದೂ ತಿಳಿದು ಹೀಗೆ ಮಾಡಿರುವುದು ಬೇಜಾರಾಗಿದೆ ಎಂದು ಬೆಂಗಳೂರಿನಲ್ಲಿ ಸದಾನಂದಗೌಡ ಹೇಳಿದರು.

ಈ ಹಿಂದೆ ಬೆಂಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸದಾನಂದಗೌಡರು ಕೆಲ ತಿಂಗಳ ಹಿಂದೆ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳುವುದಾಗಿ ಘೋಷಣೆ ಮಾಡಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪುನಃ ಇದೇ ಕ್ಷೇತ್ರದಿಂದ ಮತ್ತೊಮ್ಮೆ ಸ್ರ್ಪಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ವರಿಷ್ಠರು ಈ ಕ್ಷೇತ್ರಕ್ಕೆ ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಅವರಿಗೆ ಅಸಮಾಧಾನ ಉಂಟು ಮಾಡಿತ್ತು.

ಪ್ರಧಾನಿ ಮೋದಿ ಭಾಷಣವನ್ನು ಕನ್ನಡದಲ್ಲೇ ಕೇಳಿಸಲು AI ಮೊರೆ ಹೋದ ಬಿಜೆಪಿ

ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಸದಾನಂದ ಗೌಡ ಅವರು ಹೈಕಮಾಂಡ್ ನಿರ್ಧಾರಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸೌಜನ್ಯಕ್ಕಾದರೂ ವರಿಷ್ಠರು ನನ್ನ ಅಭಿಪ್ರಾಯ ಕೇಳಲಿಲ್ಲ ಎಂದು ಆಪ್ತರ ಬಳಿ ತಮ್ಮ ನೋವು ತೋಡಿಕೊಂಡಿದ್ದರು. ಇದೀಗ ಏಕಾಏಕಿ ಸದಾನಂದಗೌಡ ಅವರು ತಮ್ಮ ನಿಲುವು ಬದಲಾಯಿಸಿದ್ದಾರೆ. ಈ ಬೆಳವಣಿಗೆಗಳ ನಡುವೆ ಅವರನ್ನು ಕಾಂಗ್ರೆಸ್‍ಗೆ ಸೆಳೆಯಲು ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಖಾಡಕ್ಕೆ ಇಳಿದಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವೇಳೆ ಡಿವಿಎಸ್ ಕಾಂಗ್ರೆಸ್‍ಗೆ ಸೇರ್ಪಡೆಯಾದರೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದಲೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಂಭವವಿದೆ. ಹೀಗಾಗಿ ಮಂಗಳವಾರ ನಡೆಯಲಿರುವ ಪತ್ರಿಕಾಗೋಷ್ಠಿ ಎಲ್ಲರ ಕುತೂಹಲವನ್ನು ಕೆರಳಿಸಿದೆ.

RELATED ARTICLES

Latest News