ಬೆಂಗಳೂರು,ಏ.24- ಹಿಂದೆಂದೂ ಕಾಣದ ಜಿದ್ದಾಜಿದ್ದಿನ ಕಣವಾಗಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆಯಲಿದ್ದು, ಘಟಾನುಘಟಿ ನಾಯಕರ ರಾಜಕೀಯ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ. ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಆಯೋಗ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದೆ.
ಇಂದು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಕೊನೆ ಕ್ಷಣದಲ್ಲಿ ಮತದಾರರನ್ನು ಓಲೈಸಲು ಕಣದಲ್ಲಿರುವ ಅಭ್ಯರ್ಥಿಗಳು ನಾನಾ ಕಸರತ್ತುಗಳನ್ನು ನಡೆಸಿದ್ದಾರೆ. ನಾಳೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಅವಕಾಶವಿದ್ದು, ಕೊನೆ ಕ್ಷಣದಲ್ಲಿ ನಡೆಯಬಹುದಾದ ಅಕ್ರಮಗಳನ್ನು ತಡೆಗಟ್ಟಲು ಆಯೋಗ ಬಿಗಿಭದ್ರತೆ ಕೈಕೊಂಡಿದೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ದಿಗ್ಗಜರು ಸುಡುವ ಬಿಸಲನ್ನೂ ಲೆಕ್ಕಿಸದೆ ಭರ್ಜರಿ ರೋಡ್ ಶೋ, ಸಮಾವೇಶ ನಡೆಸಿದ್ದಾರೆ. ನಾಳೆ ಮತಗಟ್ಟೆ ಅಧಿಕಾರಿಗಳಿಗೆ ನಿಗದಿಪಡಿಸಿರುವ ಕೇಂದ್ರಗಳಲ್ಲಿ ಇವಿಎಂ, ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ. ಈ ಬಾರಿ ಮತ ಕೇಂದ್ರಗಳಲ್ಲಿ ಮತಗಟ್ಟೆಗಳಲ್ಲಿ ಯಾರೂಕೂಡ ಮೊಬೈಲ್ ಬಳಕೆ ಮಾಡದಂತೆ ಆಯೋಗ ನಿರ್ಬಂಧ ಹಾಕಿದೆ.
ಬೂತ್ಗಳಿಗೆ ಬರುವ ಪ್ರತಿಯೊಬ್ಬರನ್ನು ಕೂಲಂಕಷವಾಗಿ ತಪಾಸಣೆ ನಡೆಸಿಯೇ ಒಳಬಿಡಬೇಕು. ಮತದಾನ ಮಾಡಿದ ನಂತರ ಇವಿಎಂ ಬಳಿ ಫೋಟೋ ಕ್ಲಿಕ್ಕಿಸುವುದು, ಸೆಲಿ ತೆಗೆದುಕೊಳ್ಳುವುದನ್ನು ತಪ್ಪಿಸಲು ಮತ ಕೇಂದ್ರದೊಳಗೆ ಮೊಬೈಲ್ ಬಳಕೆ ಮಾಡುವಂತಿಲ್ಲ ಎಂದು ಆಯೋಗ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.ಈ ಬಾರಿಯ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಮೇಲೆ ಪ್ರಚಾರ ನಡೆಸಿದರೆ, ಪ್ರತಿಯಾಗಿ ಬಿಜೆಪಿ ಪ್ರಧಾನಿ ನರೇಂದ್ರಮೋದಿ ಗ್ಯಾರಂಟಿ ಮೂಲಕ ಮತಯಾಚನೆ ಮಾಡಿದೆ.
ಕೇಂದ್ರದಿಂದ ತೆರಿಗೆ ಅನ್ಯಾಯವಾಗಿರುವುದನ್ನು ಕಾಂಗ್ರೆಸ್ ಹೆಚ್ಚು ಪ್ರಸ್ತಾಪಿಸಿ ಜಾಹಿರಾತು ಮೂಲಕ ಬಿಜೆಪಿಗೆ ಠಕ್ಕರ್ ಕೊಟ್ಟಿದೆ. ಇದಕ್ಕೂ ತಿರುಗೇಟು ಕೊಟ್ಟಿರುವ ಬಿಜೆಪಿ, ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾಗಿರುವ ಅನುದಾನವನ್ನು ಅಂಕಿಸಂಖೆಗಳ ಮೂಲಕ ಕಾಂಗ್ರೆಸ್ನಿಂದಲೇ ಅನ್ಯಾಯವಾಗಿದೆ ಎಂಬುದನ್ನು ಬಿಂಬಿಸುತ್ತಿದೆ.
ಪ್ರಚಾರದ ವೇಳೆ ಈ ಬಾರಿ ನಾಯಕರು, ಹೆಗ್ಗಿಲ್ಲದೆ ನಾಲಿಗೆ ಹರಿದುಬಿಟ್ಟಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ಗೆ ಹೋಲಿಸಿದ್ದು, ತುಷ್ಟೀಕರಣ, ಮಂಗಳಸೂತ್ರ, ಒಬಿಸಿ, ಎಸ್ಸಿ-ಎಸ್ಟಿ ಮೀಸಲಾತಿ ರದ್ದು ಸೇರಿದಂತೆ ಕೆಲವು ಭಾವನಾತ್ಮಕ ವಿಷಯಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಕಾಂಗ್ರೆಸ್ ಕೂಡ ಬಿಜೆಪಿಗೆ ಏಟಿಗೆ ಎದಿರೇಟು ಎಂಬಂತೆ ಪ್ರತಿದಿನ ಒಂದಿಲ್ಲೊಂದು ವಿಷಯಗಳನ್ನು ಮುಂದಿಟ್ಟುಕೊಂಡು ಮತದಾರರ ಮನಮುಟ್ಟುವ ಪ್ರಯತ್ನ ನಡೆಸಿದೆ.ಇನ್ನು ಈ ಚುನಾವಣೆಯು ಜೆಡಿಎಸ್ಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಸ್ರ್ಪಸಿರುವ ಮೂರು ಕ್ಷೇತ್ರಗಳನ್ನು ಉಳಿಸಿಕೊಳ್ಳಲು ದಳಪತಿಗಳು ಶಕ್ತಿಮೀರಿ ಬೆವರು ಹರಿಸಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರಮೋದಿ ಅವರ ಜೊತೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮೈಸೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಮಾಡಿದ ಭಾಷಣ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದೆ. ಇದು ಕಾರ್ಯಕರ್ತರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕು.
ಬಿಜೆಪಿ ಸಾರಥ್ಯ ವಹಿಸಿರುವ ಬಿ.ವೈ.ವಿಜಯೇಂದ್ರರಿಗೂ ಪ್ರತಿಷ್ಠೆಯ ಕಣವಾಗಿದ್ದು, ಮೊದಲ ಹಂತದಲ್ಲೇ ಹೆಚ್ಚಿನ ಸ್ಥಾನ ಗೆಲ್ಲಲು ಶಕ್ತಿ ಮೀರಿ ಪ್ರಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರು-ಕೊಡಗಿನಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಭಾರೀ ಜಿದ್ದಾಜಿದ್ದಿನ ಹಣಾಹಣಿ ಏರ್ಪಟ್ಟಿದ್ದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮತ್ತು ಹೆಸರಾಂತ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ನಡುವೆ ಹಣಾಹಣಿ ಇದೆ.
ಉಳಿದಂತೆ ಸ್ಪರ್ಧಾ ಕಣದಲ್ಲಿ ಮಾಜಿ ಸಚಿವ ವಿ.ಸೋಮಣ್ಣ, ಮುದ್ದಹನುಮೇಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಯದುವೀರ ಕೃಷ್ಣದತ್ತ ಪಡೆಯರ್ ಸೇರಿದಂತೆ ಹಲವರು ಇದ್ದಾರೆ.
ಒಟ್ಟು ಅಭ್ಯರ್ಥಿಗಳು -247
ಪುರುಷರ -226
ಮಹಿಳೆಯರು -21
ಒಟ್ಟು ಲೋಕಸಭಾ ಕ್ಷೇತ್ರಗಳು 14
ಕಾಂಗ್ರೆಸ್ -14
ಬಿಜೆಪಿ – 11
ಜೆಡಿಎಸ್ -3
ಒಟ್ಟು ಮತದಾರರು: 2,88,08,182
ಪುರುಷರು- 1,44,17,530
ಮಹಿಳೆಯರು – 1,43,87,585
ತೃತೀಯ ಲಿಂಗಿಗಳು- 3,067
ಸೇವಾ ಮತದಾರರು – 11,160
ಯುವ ಮತದಾರರು(18-19) – 5,99,444
ದಿವ್ಯಾಂಗ ಮತದಾರರು – 2,76, 042
85 ವರ್ಷ ಮೇಲ್ಪಟ್ಟವರು – 3,40,856
ಸಾಗರೋತ್ತರ ಮತದಾರರು- 2,849
ಮತದಾನ ನಡೆಯುವ ಕ್ಷೇತ್ರಗಳು:
ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣಕನ್ನಡ, ಚಿತ್ರದುರ್ಗ( ಎಸ್ಸಿ ಮೀಸಲು ಕ್ಷೇತ್ರ), ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ (ಎಸ್ಸಿ ಮೀಸಲು ಕ್ಷೇತ್ರ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ( ಎಸ್ಸಿ ಮೀಸಲು ಕ್ಷೇತ್ರ)
ಜಿದ್ದಾಜಿದ್ದಿನ ಕ್ಷೇತ್ರಗಳು:
ಬೆಂಗಳೂರು ಗ್ರಾಮಾಂತರ
ಮಂಡ್ಯ
ಮೈಸೂರು-ಕೊಡಗು
ಚಾಮರಾಜನಗರ
ಹಾಸನ
ಅಖಾಡಕ್ಕಿಳಿದಿರುವ ಪ್ರಮುಖರು:
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಡಾ. ಸಿ.ಎನ್.ಮಂಜುನಾಥ್, ಸಂಸದ ಡಿ.ಕೆ. ಸುರೇಶ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್, ಪ್ರಜ್ವಲ್ ರೇವಣ್ಣ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಡಾ. ಕೆ.ಸುಧಾಕರ್, ಗೋವಿಂದ ಕಾರಜೋಳ, ಮುದ್ದಹನುಮೇಗೌಡ, ಕೋಟಾ ಶ್ರೀನಿವಾಸ್ಪೂಜಾರಿ, ಜಯಪ್ರಕಾಶ್ ಹೆಗಡೆ, ರಾಜೀವ್ ಗೌಡ, ತೇಜಸ್ವಿ ಸೂರ್ಯ, ಸೌಮ್ಯ ರೆಡ್ಡಿ, ಪ್ರಜ್ವಲ್ ರೇವಣ್ಣ, ಶ್ರೇಯಸ್ ಪಟೇಲ್ ಮತ್ತಿತರರು.