Monday, May 6, 2024
Homeರಾಜಕೀಯಮೋದಿ ಆಡಳಿತದಲ್ಲಿ ಮಾಂಗಲ್ಯ ಮಾಡಿಸಿಕೊಳ್ಳಲೂ ಸಾಧ್ಯವಾಗದಷ್ಟು ಚಿನ್ನದ ಬೆಲೆ ಏರಿಕೆಯಾಗಿದೆ : ಡಿಕೆಶಿ

ಮೋದಿ ಆಡಳಿತದಲ್ಲಿ ಮಾಂಗಲ್ಯ ಮಾಡಿಸಿಕೊಳ್ಳಲೂ ಸಾಧ್ಯವಾಗದಷ್ಟು ಚಿನ್ನದ ಬೆಲೆ ಏರಿಕೆಯಾಗಿದೆ : ಡಿಕೆಶಿ

ಬೆಂಗಳೂರು,ಏ.24- ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಚಿನ್ನದ ಬೆಲೆ ಗಗನಕ್ಕೆ ಮುಟ್ಟಿದ್ದು, ಬಡವರು ಮಾಂಗಲ್ಯ ಮಾಡಿಸಿಕೊಳ್ಳಲೂ ಸಾಧ್ಯವಾಗದಂತಹ ಪರಿಸ್ಥಿತಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ವಿಶ್ವಕರ್ಮ ಸಮುದಾಯದ ಪ್ರಮುಖ ನಾಯಕ ಕೆ.ಪಿ.ನಂಜುಂಡಿ ಹಾಗೂ ಇತರೆ ನಾಯಕರನ್ನು ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, 2014 ರಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆ 2800 ರೂ.ಗಳಿತ್ತು. ಈಗ 7,500 ರೂ. ಗಳಾಗಿವೆ. ಕನಿಷ್ಟ ಮಾಂಗಲ್ಯ ಮಾಡಿಸಿಕೊಳ್ಳಲೂ ಸಾಧ್ಯವಾಗದೆ ಬಡವರು ಸಮಸ್ಯೆಗೆ ಸಿಲುಕಿದ್ದಾರೆ ಎಂದು ಹೇಳಿದರು.

ಕೆ.ಪಿ.ನಂಜುಂಡಿಯವರು ಕಾಂಗ್ರೆಸ್ ಸೇರುತ್ತಿರುವುದೇಕೆ ಎಂಬ ಕುರಿತು ತಮ್ಮಲ್ಲಿ ಹೇಳಿಕೊಂಡಿದ್ದು, ನಮ್ಮ ಸಮುದಾಯಕ್ಕೆ ಮಾಂಗಲ್ಯ, ಮಾಂಗಲ್ಯ ಸರ ಮಾಡಿಕೊಡುವ ಅವಕಾಶವನ್ನು ದೇವರು ಕೊಟ್ಟಿದ್ದಾರೆ. ಪ್ರಸ್ತುತ ಬೆಲೆ ಏರಿಕೆಯಿಂದಾಗಿ ಮಾಂಗಲ್ಯ ಸರ ಮಾಡಿಸಿಕೊಳ್ಳಲಾಗದೆ ಸಂಕಟ ಪಡುತ್ತಿರುವ ತಾಯಂದಿರ ಗೋಳು ನೋಡಲಾಗುತ್ತಿಲ್ಲ. ಈ ವಿಷಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳದ ತಾವು ಪಕ್ಷದಲ್ಲಿ ಉಳಿಯಬಾರದು ಎಂದು ಕಾಂಗ್ರೆಸ್ ಸೇರುತ್ತಿರುವುದಾಗಿ ಹೇಳಿದರು.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಸೇರಿದಂತೆ ವಿವಿಧ ಯೋಜನೆಗಳಿಂದ ತಿಂಗಳಿಗೆ 2 ಸಾವಿರ ರೂ. ಉಳಿತಾಯವಾಗುತ್ತಿದೆ. ಈಗ ತಾಯಂದಿರು ಸಣ್ಣಪುಟ್ಟ ಒಡವೆ ಖರೀದಿಗಳಿಗೆ ಮುಂದಾಗುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಇಂತಹ ಒಂದು ನಿರ್ಧಾರವನ್ನೂ ತೆಗೆದುಕೊಳ್ಳಲಿಲ್ಲ ಎಂದು ಕೆ.ಪಿ.ನಂಜುಂಡಿ ಹೇಳಿದ್ದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೆ.ಪಿ.ನಂಜುಂಡಿ ಅವರು ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ ಹಿಂದುಳಿದ ವರ್ಗದಲ್ಲಿ ಅತ್ಯಂತ ಉತ್ತಮ ಸಂಘಟಕರಾಗಿದ್ದಾರೆ. ಅವರನ್ನು ಕಾಂಗ್ರೆಸ್‍ಗೆ ಮರಳಿ ಕರೆತರಬೇಕೆಂಬುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಒತ್ತಾಸೆಯಾಗಿತ್ತು. ಹೈಕಮಾಂಡ್‍ನ ಸೂಚನೆ ಮೇರೆಗೆ ತಾವು ಆರಂಭದಿಂದಲೂ ನಂಜುಂಡಿ ಅವರನ್ನು ಕಾಂಗ್ರೆಸ್‍ಗೆ ಬರುವಂತೆ ಆಹ್ವಾನ ನೀಡಿದ್ದಾಗಿ ಹೇಳಿದರು.

ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರೇ ಖುದ್ದು ಆಗಮಿಸಿ ನಂಜುಂಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ನಂಜುಂಡಿ ಅವರೊಂದಿಗೆ ವಿಶ್ವಕರ್ಮ ಸಮುದಾಯದ ಅಧ್ಯಕ್ಷರು ಸೇರಿದಂತೆ ಹಲವು ಮುಖಂಡರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.

ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಬಿಜೆಪಿ ಅಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ರಾಜಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಬಹಿರಂಗವಾಗಿ ಹೇಳಿದ್ದಾರೆ. ಎಸ್‍ಸಿ, ಎಸ್‍ಟಿ, ಓಬಿಸಿಗಳ ಮೀಸಲಾತಿಯನ್ನು ಕಿತ್ತು ಹಾಕುವ ಹುನ್ನಾರವಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದಲ್ಲಿ ಎಸ್‍ಸಿ, ಎಸ್‍ಟಿಯವರು ಕಾರ್ಯದರ್ಶಿ ಹುದ್ದೆಗೆ ನೇಮಕವಾಗಲು ಅವಕಾಶ ಸಿಗುವುದಿಲ್ಲ. ಜಂಟಿ ಕಾರ್ಯದರ್ಶಿಗಳಿಗಿಂತ ಮೇಲ್ಪಟ್ಟ ಹುದ್ದೆಗಳಿಗೆ ಮೋದಿಯವರು ಖಾಸಗಿ ವಲಯದಿಂದ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ವಿಶ್ವಕರ್ಮ, ಕೋಲಿ, ಈಡಿಗದಂತಹ ಸೂಕ್ಷ್ಮ ಸಮುದಾಯಗಳಿಗೆ ಅವಕಾಶವೇ ಸಿಗುವುದಿಲ್ಲ.

ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಲ್ಲಿ 73 ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡಿದ್ದಾರೆ. ಅದರಿಂದ ಹಿಂದುಳಿದ ವರ್ಗಗಳಿಗೆ ಸಿಗುತ್ತಿದ್ದ ಶೇ.27 ರಷ್ಟು ಮೀಸಲಾತಿ ಗ್ಯಾರಂಟಿ ರದ್ದುಗೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಒಟ್ಟಾರೆ ಕಾರ್ಯದರ್ಶಿ ಹುದ್ದೆಗಳಲ್ಲಿ ಒಬ್ಬರೇ ಒಬ್ಬರು ಹಿಂದುಳಿದ ವರ್ಗಕ್ಕೆ ಸೇರಿದವರಿದ್ದಾರೆ. ಇನ್ನು ಎಸ್‍ಸಿ, ಎಸ್‍ಟಿ, ಆದಿವಾಸಿಗಳ ಹಕ್ಕುಗಳ ವಿಷಯದಲ್ಲಂತೂ ಕೇಳುವಂತೆಯೇ ಇಲ್ಲ. ಹಿಂದುಳಿದ ವರ್ಗಗಳ ಆದಾಯ ಮಿತಿಯನ್ನು ಮೋದಿ ಸರ್ಕಾರ ಪರಿಷ್ಕರಣೆ ಮಾಡಿಲ್ಲ. 13 ಲಕ್ಷ ಬ್ಯಾಕ್‍ಲಾಗ್ ಹುದ್ದೆಗಳು ಖಾಲಿ ಉಳಿದಿವೆ. ಹೀಗಾಗಿ ಸಮುದಾಯವಾರು ಭಾರೀ ಅನ್ಯಾಯವಾಗಿದೆ ಎಂದು ವಿವರಿಸಿದರು.

RELATED ARTICLES

Latest News