Friday, November 22, 2024
Homeರಾಜ್ಯಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಮನೆ ಸೇರಿ 10 ಕಡೆ ಇಡಿ ದಾಳಿ

ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಮನೆ ಸೇರಿ 10 ಕಡೆ ಇಡಿ ದಾಳಿ

ಬೆಂಗಳೂರು,ಜ.8- ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ನಡೆದ ನೇಮಕಾತಿ ಆಕ್ರಮ ಪ್ರಕರಣ ಸಂಬಂಧ ಮಾಲೂರು ಶಾಸಕ ಹಾಗೂ ಕೊಚಿಮಲ್ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡರ ನಿವಾಸದ ಮೇಲೆ ಇಂದು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಾಲೂರಿನ ಕೊಮ್ಮನಹಳ್ಳಿಯಲ್ಲಿರುವ ಇವರ ಮನೆ, ಹುತ್ತೂರು ಹೋಬಳಿಯಲ್ಲಿರುವ ಕೋಚಿಮುಲ್ ಕಚೇರಿ ಮತ್ತು ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕೆ.ವೈ.ನಂಜೇಗೌಡ ಅವರ ಬೆಂಗಳೂರು ನಿವಾಸ, ಮಾಲೂರು ಕೋಚಿಮುಲ್ ಕಚೇರಿ ಸೇರಿದಂತೆ ಒಟ್ಟು ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಲಾಗಿದ್ದು, ಕೋಚಿಮುಲ್ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ನಂಜೇಗೌಡ ಅವರ ಆಪ್ತ ಸಹಾಯಕ ಹರೀಶ್, ಕೋಚಿಮುಲ್ ಹಾಲು ಒಕ್ಕೂಟದ ಎಂ.ಡಿ.ಗೋಪಾಲಮೂರ್ತಿ, ಆಡಳಿತ ವಿಭಾಗದ ವ್ಯವಸ್ಥಾಪಕ ನಾಗೇಶ್ ಸೇರಿ ವಿವಿಧ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ.

ಭಾರತೀಯ ಮೂಲದ ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪ ಆತಂಕಕಾರಿ: ಲೀ

ನೇಮಕಾತಿ ಅವ್ಯವಹಾರದ ಸದ್ದು:
ಇತ್ತೀಚೆಗೆ ಕೋಚಿಮುಲ್ ನೇಮಕಾತಿ ವಿಚಾರದಲ್ಲಿ ಸಾಕಷ್ಟು ಅವ್ಯವಹಾರದ ಸದ್ದು ಮಾಡಿತ್ತು. ನೇಮಕಾತಿ ವೇಳೆ ಲಕ್ಷಾಂತರ ರೂ. ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿತ್ತು. ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಮತ್ತೊಂದು ಶಿಫಾರಸ್ಸು ಆಧಾರದ ಮೇಲೆ ನೇಮಕಾತಿ ಹಗರಣ ನಡೆದಿರುವ ವಾಸನೆ ಬರುತ್ತಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪಟ್ಟಿಯೊಂದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಖಾಲಿಯಿರುವ 81 ಹುದ್ದೆಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು, ಇದಾದ ನಂತರ ಲಿಖಿತ ಪರೀಕ್ಷೆ ಸಹ ನಡೆದಿದ್ದು, ಇನ್ನೇನು ಸಂದರ್ಶನ ಮುಗಿದಿದ್ದು ಅಂತಿಮ ಪಟ್ಟಿ ಇನ್ನೆರೆಡು ದಿನಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಇಲ್ಲಿ ಕೆಲಸ ಬೇಕೆಂದರೆ ಖಡ್ಡಾಯವಾಗಿ ಒಕ್ಕೂಟದ ನಿರ್ದೇಶಕರು ಹಾಗೂ ಶಾಸಕರು ಕೆಲವು ಶಿಫಾರಸ್ಸು ಇರಬೇಕು ಎನ್ನುವ ಅಭ್ಯರ್ಥಿಗಳ ಹೆಸರ ಮುಂದೆ ಶಿಫಾರಸ್ಸು ಮಾಡಿರುವ ಮುಖಂಡರ ಹೆಸರಿರುವ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದ ಹಿನ್ನೆಲೆಯಲ್ಲಿ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಶಂಕೆ ಕೇಳಿ ಬಂದಿತ್ತು.

ಇನ್ನು ಶಿಫಾರಸ್ಸುಗಳ ಪಟ್ಟಿಯಲ್ಲಿ ಒಕ್ಕೂಟದ ನಿರ್ದೇಶಕರು ಸೇರಿ ಡಿಸಿಎಂ ಡಿಕೆ ಶಿವಕುಮಾರ್, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕೆಲ ನಿರ್ದೇಶಕರ ಹೆಸರು ಬರೆಯಲಾಗಿದೆ.

ಮೋದಿ ಟೀಕಿಸಿದ ಮಾಲ್ಡೀವ್ಸ್‌ಗೆ ತಿಳಿ ಹೇಳಿದ ಭಾರತ

ಒಂದೊಂದು ಹುದ್ದೆಗೆ ಸುಮಾರು 40ರಿಂದ 60 ಲಕ್ಷ ರೂ. ಪಡೆಯಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಒಟ್ಟು 81 ಹುದ್ದೆಗಳಿಗೆ ಸುಮಾರು 44 ಕೋಟಿಯಷ್ಟು ಸಂಗ್ರಹ ಮಾಡಲಾಗಿದೆ ಎನ್ನುವ ಆರೋಪವಿದೆ. ಸಾಮಾಜಿಕ ಜಾಲತಾಣದಲ್ಲಿ ಆಯ್ಕೆಯಾದ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ಡಾ.ಕೆ.ಸುಧಾಕರ್ ಈ ಕುರಿತು ಭಾರೀ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆರೋಪ ಮಾಡಿದ್ದರು.

RELATED ARTICLES

Latest News