Homeರಾಜ್ಯಶನಿವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ..?

ಶನಿವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ..?

ಬೆಂಗಳೂರು, ಜು.29- ಸಚಿವ ಸಂಪುಟ ವಿಸ್ತರಣೆಯ ಕುರಿತ ಹಗ್ಗ-ಜಗ್ಗಾಟ ದೆಹಲಿಯಲ್ಲಿ ಮತ್ತೂ ಮುಂದುವರೆದಿದ್ದು, ಬಹುತೇಕ ಇಂದು ಸಂಜೆಯೊಳಗಾಗಿ ಚರ್ಚೆಗಳು ಅಂತಿಮಗೊಂಡು ಶುಕ್ರವಾರ ಅಥವಾ ಶನಿವಾರ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಆಗಸ್ಟ್‌ 13ರಿಂದ ವಿಧಾನಮಂಡಲದ ಅಧಿವೇಶನ ನಿಗಧಿಯಾಗಿದ್ದು ಅದಕ್ಕೂ ಮೊದಲು ಕನಿಷ್ಠ 10 ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಿ ಸಚಿವರು ಇಲಾಖೆಯನ್ನು ಅರ್ಥೈಸಿ ಕೊಳ್ಳಬೇಕಿದೆ. ಅಲ್ಲದೇ ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಹಿಂದೆದೂ ಇಲ್ಲದಷ್ಟು ಚರ್ಚೆಗಳು, ಪರಿಶೀಲನೆಗಳು, ಪರಿಷ್ಕರಣೆಗಳು ನಡೆಯುತ್ತಿವೆ.

ಕಳೆದ ಒಂದು ತಿಂಗಳಿನಿಂದಲೂ ಇದು 7ನೇ ಸುತ್ತಿನ ಸಭೆಯಾಗಿದೆ. ಇನ್ನೂ ಎರಡು ಸುತ್ತಿನ ಚರ್ಚೆಗಳು ಬಾಕಿಯಿದ್ದು, ಬಹುತೇಕ ಇಂದು ಮುಕ್ತಾಯವಾಗಬಹುದು ಅಥವಾ ನಾಳೆಗೂ ಮುಂದೂಡಬಹುದು ಎಂದು ಹೇಳಲಾಗುತ್ತಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ನಿಗದಿ ಪಡಿಸಿರುವ ಮಾನದಂಡಗಳನ್ನು ಆಧರಿಸಿ ಸಂಭವನೀಯರ ಪಟ್ಟಿಯನ್ನು ಅಖೈರುಗೊಳಿಸಲು ರಾಜ್ಯ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಸರಿಸುಮಾರು 15ಕ್ಕಿಂತಲೂ ಹೆಚ್ಚು ಮಂದಿ ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬುದು ಭಾರೀ ತಲೆನೋವಿನ ಸಂಗತಿಯಾಗಿದೆ.

ಹಿರಿಯರನ್ನು ಒಂದು ಕಡೆ ನಿಲ್ಲಿಸಿ ಹೊಸಬರಿಗೆ ಮಣೆ ಹಾಕಿದಾಗ, ಬಂಡಾಯ ಚಟುವಟಿಕೆಗಳು ಹೆಚ್ಚಾಗಬಹುದು ಎಂಬ ಆತಂಕವಿದೆ. ಹೊಸಬರ ಆಯ್ಕೆ ವಿಷಯದಲ್ಲಿ ಭೌಗೋಳಿಕ ಮತ್ತು ಸಾಮಾಜಿಕ ಆಧ್ಯತೆಗಳ ಲೆಕ್ಕಾಚಾರವಷ್ಟೇ ಅಲ್ಲದೇ ಪಕ್ಷ ಸಂಘಟನೆ ಮತ್ತು ಜನಪ್ರಿಯತೆಯನ್ನು ಪರಿಗಣಿಸಲಾಗುತ್ತಿದೆ.

ಚುನಾವಣಾ ರಣನೀತಿ ಸಲಹೆಗಾರರೊಬ್ಬರು ನೀಡಿರುವ ವರದಿಯ ಪ್ರಕಾರ ಕ್ರಿಯಾಶೀಲ ಯುವಕರಿಗೂ ಆಧ್ಯತೆ ನೀಡಬೇಕಿದೆ. ಆದರೆ ಈ ಸಂದರ್ಭದಲ್ಲಿ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವುದು ಸವಾಲಿನ ಕೆಲಸ ಎನ್ನಲಾಗುತ್ತಿದೆ.

ಲಿಂಗಾಯುತ ಸಮುದಾಯದಲ್ಲಿ ಹಲವಾರು ಮಂದಿ ಕ್ರಿಯಾಶೀಲ ಯುವ ಶಾಸಕರಿದ್ದಾರೆ. ಆದರೆ ಪಕ್ಷದ ಮೇಲೆ ಭಾರೀ ಪ್ರಭಾವ ಬೀರುವ ಹಿರಿಯರ ಸಂಖ್ಯೆಯೂ ಹೆಚ್ಚಿದೆ. ಹಿಂದುಳಿದ ವರ್ಗಗಳಲ್ಲಿ ಪ್ರಮುಖ ಜನಸಂಖ್ಯೆ ಹೊಂದಿರುವ ಜಾತಿಗಳ ಮುಖಂಡರಿಗೆ ಮಣೆ ಹಾಕಬೇಕು. ಏಕಕಾಲದಲ್ಲಿ ಅವಕಾಶ ವಂಚಿತ ಸಮುದಾಯದವರನ್ನು ಪರಿಗಣಿಸಬೇಕೆಂಬ ಪ್ರಯತ್ನಗಳು ನಡೆಯುತ್ತಿವೆ.

ಸಂಪುಟ ವಿಸ್ತರಣೆಗೆ ವಿಳಂಬವಾದಷ್ಟು ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ದೆಹಲಿಯಲ್ಲಿ 65 ರಿಂದ 70 ಸಂಖ್ಯೆಯಷ್ಟು ಶಾಸಕರು, 10ಕ್ಕೂ ಹೆಚ್ಚು ಮಂದಿ ವಿಧಾನಪರಿಷತ್‌ ಸದಸ್ಯರು ಠಿಕಾಣಿ ಹೂಡಿದ್ದಾರೆ. ಮೊದಲ ಬಾರಿ ಆಯ್ಕೆಯಾದ ಶಾಸಕರೂ ಕೂಡ ತಮ ಕೌಟುಂಬಿಕ ಹಿನ್ನೆಲೆ, ಸಾಮಾಜಿಕ ಸ್ಥಿತಿಗತಿ ಮತ್ತು ಸಮುದಾಯ ಆಧಾರಿತವಾಗಿ ಸಚಿವ ಸ್ಥಾನ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ.

ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್‌, ಬಿ.ಕೆ.ಹರಿಪ್ರಸಾದ್‌ ಅವರು ಕುಂತಲ್ಲಿ-ನಿಂತಲ್ಲಿ ಶಾಸಕರ ದಂಡೇ ಮುತ್ತಿಕೊಳ್ಳುತ್ತಿದೆ. ಎಐಸಿಸಿ ನಾಯಕರಾದ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣದೀಪ್‌ ಸಿಂಗ್‌ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್‌ ಅವರು ಸಂಸತ್‌ನ ಕಲಾಪಗಳಲ್ಲಿ ಭಾಗವಹಿಸಿದ್ದರಿಂದ ಶಾಸಕರಿಗೆ ಸಮಯ ನೀಡುತ್ತಿಲ್ಲ.

ಈವರೆಗೂ ಮೂರು ಬಾರಿ ದೆಹಲಿ ಪ್ರವಾಸಕೈಗೊಂಡಿರುವ ರಾಜ್ಯ ನಾಯಕರು ಒಮೆ ಮಾತ್ರ ರಾಹುಲ್‌ಗಾಂಧಿ ಅವರ ಜೊತೆ ಚರ್ಚೆ ನಡೆಸಿದ್ದಾರೆ. ಉಳಿದಂತೆ ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ ಅವರ ಜೊತೆಯಲ್ಲೇ ಸಮಾಲೋಚನೆಗಳಾಗಿವೆ. ಇಂದು ಲೋಕಸಭೆಯ ವಿರೋಧ ಪಕ್ಷದ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಸಂಜೆ ಸಭೆ ನಡೆಯುವ ಸಾಧ್ಯತೆ ಇದೆ.

ರಾಹುಲ್‌ಗಾಂಧಿ ಪರೀಕ್ಷಾ ಅಕ್ರಮಗಳನ್ನು ತಡೆಯುವ ಸಲುವಾಗಿ ತಿದ್ದುಪಡಿ ಮಸೂದೆಯ ಮೇಲೆ ಲೋಕಸಭೆಯಲ್ಲಿಂದು ಚರ್ಚೆಯಲ್ಲಿ ಭಾಗವಹಿಸಬೇಕಿದೆ. ರಾಜಕೀಯವಾಗಿ ಬೇರೆ ಯಾವುದೇ ಬೆಳವಣಿಗೆಗಳು ಆಗದೆ ಇದ್ದರೆ, ಸಂಜೆ ರಾಜ್ಯ ನಾಯಕರು ರಾಹುಲ್‌ ಗಾಂಧಿ ಅವರ ಜೊತೆ ಚರ್ಚೆ ಮಾಡಲು ಸಾಧ್ಯವಾಗಬಹುದು. ಇಲ್ಲದೇ ಹೋದರೆ ಚರ್ಚೆ ನಾಳೆಗೆ ಮುಂದೂಡಿಕೆಯಾಗಲಿದೆ.

ಗುರು ಪೂರ್ಣಿಮೆ ಅಂಗವಾಗಿ ತವರು ರಾಜ್ಯ ಮಧ್ಯಪ್ರದೇಶಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ತೆರಳಿದ್ದಾರೆ. ಗುರುವಾರ ಅವರು ಮರಳುವ ಸಾಧ್ಯತೆ ಇದೆ. ಇಂದು ಅಥವಾ ನಾಳೆಯ ವೇಳೆಗೆ ಹೈಕಮಾಂಡ್‌ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದರೆ, ಶುಕ್ರವಾರವೇ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಶನಿವಾರ ಪ್ರಮಾಣವಚನ ಸ್ವೀಕಾರವಾದರೆ ಸಂಸತ್‌ನ ಕಲಾಪ ಬಿಡುವಿರುವುದರಿಂದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News