-ವೈಷ್ಣವಿ
ಹೊಸ ವರ್ಷ 2026 ಅನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾಯ್ತು. ಆದರೆ ಕಳೆದ ವರ್ಷದ ಕಡೆ ಗಮನ ಹರಿಸಿದರೆ ಸ್ಯಾಂಡಲ್‌ವುಡ್‌ನಲ್ಲಿ 230ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಿದ್ದರೂ, ಸ್ಟಾರ್ ನಟರುಗಳ ಚಿತ್ರಗಳ ಸಂಖ್ಯೆ ಹೆಚ್ಚಾಗಿರದೆ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಕಳೆದ ವರ್ಷ ಸ್ಟಾರ್ ನಟರುಗಳ ಸಿನಿಮಾ ದರ್ಶನವಾಗಿದ್ದೇ ರಿಷಭ್ ಶೆಟ್ಟಿ ಅಭಿನಯದ ಕಾಂತರ ಚಾಪ್ಟರ್-1ರ ಮೂಲಕ.ಈ ಸಿನಿಮಾವು ಕಾಂತರಾ ಸಿನಿಮಾದ ಪ್ರೀಕ್ವೆಲ್ ಆಗಿದ್ದು ವಿಶ್ವದೆಲ್ಲೆಡೆ ಗಮನ ಸೆಳೆದು 850 ಕೋಟಿಗೂ ಹೆಚ್ಚು ವಹಿವಾಟು ನಡೆಸಿ ನಿರ್ಮಾಪಕರಿಗೆ ಭರ್ಜರಿ ಬೆಳೆ (ಹಣದ ಸುರಿಮಳೆ) ತಂದಿದ್ದಲ್ಲದೆ ಪರಭಾಷಿಗರು ಕೂಡ ಸ್ಯಾಂಡಲ್ ವುಡ್ ನತ್ತ ತಿರುಗಿನೋಡುವಂತೆ ಮಾಡಿತ್ತು.
ಇನ್ನು ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ದುನಿಯಾ ವಿಜಯ್ ಅಭಿನಯದ ಮಾರುತ, ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಡೆವಿಲ್, ಕಿಚ್ಚ ಸುದೀಪ್ ಅಭಿನಯದ ಮಾರ್ಕ್, ರಿಯಲ್ ಸ್ಟಾರ್ ಉಪೇಂದ್ರ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ನ 45 ಸಿನಿಮಾವು ಚಂದನವನದ ಮೆರಗನ್ನು ಹೆಚ್ಚಿಸಿತು. ಆದರೆ ಗೋಲ್ಡನ್ ಸ್ಟಾರ್ ಗಣೇಶ್, ರಾಂಕಿಂಗ್ ಸ್ಟಾರ್ ಯಶ್ , ಡೈನಾಮಿಕ್ ಪ್ರಿನ್‌್ಸ ಧ್ರುವಸರ್ಜಾರ ಒಂದೇ ಒಂದು ಸಿನಿಮಾವು ಬಿಡುಗಡೆ ಆಗದೆ ಅಭಿಮಾನಿಗಳಲ್ಲಿ ಬೇಸರ ಮೂಡಿದ್ದು , 2026ರಲ್ಲಿ ಬಹುತೇಕ ಎಲ್ಲ ಸ್ಟಾರ್ ನಟರ ಸಿನಿಮಾ ಬಿಡುಗಡೆ ಆಗುವ ಮೂಲಕ ಅಭಿಮಾನಿಗಳನ್ನು ರಂಜಿಸುವುದು ನಿಶ್ಚಿತವಾಗಿದೆ.
ಟಾಕ್ಸಿಕ್ ಅಬ್ಬರ:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ 2025ರಲ್ಲೇ ಬಿಡುಗಡೆ ಆಗುವ ಅಂದಾಜಿತ್ತಾದರೂ ರಾಕಿ ಭಾಯ್ ಬಾಲಿವುಡ್ ನಲ್ಲಿ ಲ್ ಬ್ಯುಜಿಯಾಗಿದ್ದರಿಂದ ಅಭಿಮಾನಿಗಳು ಚಿತ್ರ ನೋಡಲು ಕಾಯುವಂತಾಗಿದೆ. ಆದರೆ ಈ ವರ್ಷ ಯಶ್ ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಗಲಿದೆ. ಒಂದೆಡೆ ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾ ಬಿಡುಗಡೆಗೊಂಡರೆ, ಟಾಕ್ಸಿಕ್ ಕೂಡ ತೆರೆಗೆ ಅಪ್ಪಳಿಸಲಿದೆ. ಈ ಸಿನಿಮಾಕ್ಕೆ ಯಶ್ ಕಥೆ ಒದಗಿಸಿರುವುದು ಚಿತ್ರದ ಕ್ರೇಜ್ ಹೆಚ್ಚಿಸಿದೆ.
ಕೆಡಿ ಆಗಮನ:
ಮಾರ್ಟಿನ್ ಸಿನಿಮಾದ ಧ್ರುವಸರ್ಜಾ ಅವರ ಬಹುನಿರೀಕ್ಷಿತ ಸಿನಿಮಾ ಕೆಡಿ ಕೂಡ ಈ ವರ್ಷ ಬೆಳ್ಳಿಪರದೆಗಳ ಮೇಲೆ ರಾರಾಜಿಸಲಿದ್ದು, ಜೋಗಿ ಪ್ರೇಮ್ ಹಾಗೂ ಧ್ರುವ ಕಾಂಬಿನೇಷನ್ ಹೇಗೆ ವರ್ಕೌಟ್ ಆಗಿದೆ ಎಂಬುದನ್ನು ನೋಡುವ ಕುತೂಹಲ ಮೂಡಿದೆ. ಈಗಾಗಲೇ ಈ ಸಿನಿಮಾದ ಟ್ರೈಲರ್, ಟೀಸರ್ ಹಾಗೂ ಹಾಡುಗಳು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ಲ್ಯಾಂಡ್‌ಲಾರ್ಡ್ ಗೆಟಪ್‌ನಲ್ಲಿ ದುನಿಯಾ ವಿಜಿ:
ನಿಂಗವ್ವ ನಿಂಗವ್ವ ಹಾಡು ಹಾಗೂ ಟೀಸರ್ ಮೂಲಕವೇ ಸ್ಯಾಂಡಲ್ ವುಡ್‌ನಲ್ಲಿ ಭಾರೀ ಸದ್ದು ಮಾಡಿರುವ ದುನಿಯಾ ವಿಜಯ್ ಹಾಗೂ ರಚಿತಾರಾಮ್ ಕಾಂಬಿನೇಷನ್ ನ ಲ್ಯಾಂಡ್ ಲಾರ್ಡ್ ಸಿನಿಮಾವು 2026ರ ಬಹುನಿರೀಕ್ಷಿತ ಸಿನಿಮಾವಾಗಿದ್ದು, ಜನವರಿ 23ಕ್ಕೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ.
ಶಿವಣ್ಣ- ಧನಂಜಯ್ ರ ಉತ್ತರಕಾಂಡ:
2025ರ ಡಿಸೆಂಬರ್ ನಲ್ಲಿ 45 ಸಿನಿಮಾ ಮೂಲಕ ಚಂದನವನದ ವೇಗ ಹೆಚ್ಚಿಸಿದ್ದ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ 2026ರ ಡಾಲಿ ಧನಂಜಯ್ ಕಾಂಬಿನೇಷನ್ ನ ಉತ್ತರಕಾಂಡ ಸಿನಿಮಾ ಮೂಲಕ ಮೋಡಿ ಮಾಡಲಿದ್ದಾರೆ. ಈ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನವಿದೆ. ಅಲ್ಲದೆ ರೆಟ್ರೋ ಮಾದರಿಯಲ್ಲಿ ಹೇಮಂತ್ ರಾವ್ ಹಾಗೂ ಶಿವಣ್ಣನ ಕಾಂಬಿನೇಷನ್‌ನ 666 ಆಪರೇಷನ್ ಡ್ರೀಮ್ ಥಿಯೇಟರ್ ಕೂಡ 2026ರಬಹು ನಿರೀಕ್ಷೆಯ ಚಿತ್ರಗಳ ಸಾಲಿನಲ್ಲಿದೆ.
ಬಿಲ್ಲಾ ರಂಗಬಾಷಾ ಅವತಾರದಲ್ಲಿ ಸುದೀಪ್:
2025ರಲ್ಲಿ ಮಾರ್ಕ್ ಸಿನಿಮಾ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ಕಿಚ್ಚ ಸುದೀಪ್ 2026ರಲ್ಲಿ ಬಿಲ್ಲಾ ರಂಗಬಾಷಾನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ನಂತರ ಅನೂಪ್ ಭಂಡಾರಿ ಹಾಗೂ ಸುದೀಪ್ ಜೊತೆಯಾಗಿರುವುದು ಈ ಸಿನಿಮಾದ ಹೈಲೈಟ್.
ವರ್ಷದ ಆರಂಭದಲ್ಲೆ ತೆರೆಕಂಡಿರುವ ತೀರ್ಥರೂಪು ತಂದೆಯವರಿಗೆ, ಯುವರಾಜ್ ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಷನ್ ನ ಸಿನಿಮಾ, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್ ಜೋಡಿಯ ಯೂನಿವರ್ಸ್ ಸಿನ್ಸಿಯರ್ಲಿ ರಾಮ್, ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ ಸಿನಿಮಾಗಳು ಕೂಡ 2026ರಲ್ಲಿ ಚಂದನವನದ ಕಂಪನ್ನು ಹೆಚ್ಚಿಸಲಿದೆ.
