Friday, November 22, 2024
Homeರಾಜ್ಯಭಾನುವಾರವೂ ಬಿಡುವಿಲ್ಲದೆ ರಾಜಕೀಯ ನಾಯಕರ ಮತಬೇಟೆ

ಭಾನುವಾರವೂ ಬಿಡುವಿಲ್ಲದೆ ರಾಜಕೀಯ ನಾಯಕರ ಮತಬೇಟೆ

ಬೆಂಗಳೂರು,ಏ.14- ಲೋಕಸಭಾ ಚುನಾವಣೆಯ ಕಣ ರಂಗೇರುತ್ತಿದ್ದು, ಘಟಾನುಘಟಿ ನಾಯಕರು ರಂಗ ಪ್ರವೇಶ ಮಾಡಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದ್ದಾರೆ. ಭಾನುವಾರ ರಜಾದಿನವಾದರೂ ಕೂಡ ಲೆಕ್ಕಿಸದೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರು ಹಲವಾರು ಕಡೆ ಬಹಿರಂಗ ಸಮಾವೇಶ, ರೋಡ್ ಶೋಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಘೋಷಣೆ ಬಳಿಕ ಪ್ರಥಮ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮೈಸೂರಿನಲ್ಲಿ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.

ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮತಯಾಚನೆ ಮಾಡಿದರು. ಬಳಿಕ ಮಂಗಳೂರಿಗೆ ತೆರಳಿ ರೋಡ್ ಶೋ ನಡೆಸಿದರು. ಇತ್ತ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಗು, ತುಮಕೂರು ಮತ್ತು ಮೈಸೂರು ಜಿಲ್ಲೆಗಳ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದ್ದು, ಕೊಡಗು, ತುಮಕೂರು ಜಿಲ್ಲೆಗಳ ಬಹಿರಂಗ ಸಮಾವೇಶಗಳಲ್ಲಿ ಭಾಗಿಯಾಗಿದ್ದರು. ಇಬ್ಬರೂ ನಾಯಕರು ಹೆಲಿಕಾಪ್ಟರ್‍ನಲ್ಲಿ ಮಿಂಚಿನ ವೇಗದಲ್ಲಿ ಸಂಚಾರ ನಡೆಸಿದ್ದಾರೆ. ಮಡಿಕೇರಿಯಿಂದ ತುಮಕೂರಿನ ಕೆ.ಬಿ.ಕ್ರಾಸ್‍ಗೆ, ತುಮಕೂರಿನಿಂದ ಮೈಸೂರಿಗೆ ಕಾಂಗ್ರೆಸ್ ನಾಯಕರನ್ನು ಹೊತ್ತ ಹೆಲಿಕಾಪ್ಟರ್ ಸಂಚಾರ ನಡೆಸಿದೆ.

ರಾತ್ರಿ ಡಿ.ಕೆ.ಶಿವಕುಮಾರ್ ಮೈಸೂರಿನಿಂದ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ತೆರಳಲಿದ್ದಾರೆ. ನಾಳೆ ಜಿದ್ದಾಜಿದ್ದಿನ ರಣಕಣವಾಗಿರುವ ಬೆಳಗಾವಿಯಲ್ಲಿ ಡಿ.ಕೆ.ಶಿವಕುಮಾರ್ ರಣಕಹಳೆ ಊದಲಿದ್ದಾರೆ.

ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ 10 ದಿನಗಳು ಮಾತ್ರ ಉಳಿದಿವೆ. ಮೊದಲ ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರ ಓಲೈಕೆಗೆ ಉರಿಬಿಸಿಲಿನಲ್ಲೂ ನಾಯಕರು ಬೆವರಿಳಿಸುತ್ತಿದ್ದಾರೆ. ಅಭ್ಯರ್ಥಿಗಳು ಮನೆಮನೆ ಪ್ರಚಾರ, ರೋಡ್‍ಶೋಗಳಲ್ಲಿ ಮತಯಾಚನೆ ನಡೆಸುತ್ತಿದ್ದಾರೆ.

ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ.ಅವಧಿ ಕಡಿಮೆ ಇರುವುದರಿಂದಾಗಿ ರಾಜ್ಯ, ರಾಷ್ಟ್ರೀಯ ನಾಯಕರು, ಸ್ಟಾರ್ ಪ್ರಚಾರಕರು ಹಗಲಿರುಳೆನ್ನದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

RELATED ARTICLES

Latest News