Saturday, May 4, 2024
Homeರಾಜ್ಯಚುನಾವಣಾ ಅಕ್ರಮ : ಈವರೆಗೆ 400 ಕೋಟಿ ದಾಟಿದ ಜಪ್ತಿಯಾದ ಸಂಪತ್ತು

ಚುನಾವಣಾ ಅಕ್ರಮ : ಈವರೆಗೆ 400 ಕೋಟಿ ದಾಟಿದ ಜಪ್ತಿಯಾದ ಸಂಪತ್ತು

ಬೆಂಗಳೂರು, ಏ.22- ಪ್ರಸಕ್ತ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋಟಿ ಕೋಟಿ ನಗದು, ಕೆ.ಜಿ.ಗಟ್ಟಲೆ ಚಿನ್ನ, ಬೆಳ್ಳಿ, ಲೀಟರ್ಗಟ್ಟಲೆ ಮದ್ಯ ಜಪ್ತಿಯಾಗಿದೆ. ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಮಾ.16ರಿಂದ ನಿನ್ನೆಯವರೆಗೆ ರಾಜ್ಯದಲ್ಲಿ 403.40 ಕೋಟಿ ರೂ. ಮೊತ್ತದ ನಗದು, ಮದ್ಯ, ಡ್ರಗ್ಸ್, ಚಿನ್ನ, ಬೆಳ್ಳಿ, ವಜ್ರ, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರತಿ ದಿನವೂ ಒಂದಲ್ಲ ಒಂದು ಕಡೆ ಈ ರೀತಿಯ ವಸ್ತುಗಳು ತಪಾಸಣೆ ಸಂದರ್ಭದಲ್ಲಿ ಪತ್ತೆಯಾಗುತ್ತಿವೆ. ಭಾರತದ ಚುನಾವಣಾ ಆಯೋಗವೂ ಈ ಬಾರಿಯ ಚುನಾವಣೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕಾನೂನು ಬಾಹಿರ ಸಾಗಾಣಿಕೆ ಮೇಲೆ ಹದ್ದಿನ ಕಣ್ಣಿಡಲು ಸೂಚಿಸಿದೆ. ಹೀಗಾಗಿ ಅಪಾರ ಪ್ರಮಾಣದ ಜಪ್ತಿಯಾಗುತ್ತಿದೆ.

ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡಿರುವ ಪ್ರಕರಣ ಗಳಿಗೆ ಸಂಬಂಧಿಸಿದಂತೆ 1975 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.

ಕರ್ನಾಟಕ ಅಬಕಾರಿ ಕಾಯ್ದೆಯಡಿ 23,522 ಪ್ರಕರಣಗಳು ದಾಖಲಾಗಿವೆ. 1739 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಘೋರ ಅಪರಾಧದಡಿಯಲ್ಲಿ 2,781 ಪ್ರಕರಣ ದಾಖಲಾಗಿದ್ದರೆ, ಪರವಾನಗಿ ಉಲ್ಲಂಘನೆಯಡಿಯಲ್ಲಿ 4,155 ಪ್ರಕರಣಗಳು ದಾಖಲಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಅಧಿಕಾರಿಗಳು ಈತನಕ 132.86 ಕೋಟಿ ರೂ. ಮೌಲ್ಯದ ನಗದು, ಮದ್ಯ, ಡ್ರಗ್ಸ್, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಅಧಿಕಾರಿಗಳು 176.90 ಕೋಟಿ ರೂ. ಮೌಲ್ಯದ ಮದ್ಯ ಮತ್ತು ಡ್ರಗ್ಸ್ ವಶಪಡಿಸಿಕೊಂಡಿದ್ದರೆ, ಆದಾಯ ತೆರಿಗೆ ಅಧಿಕಾರಿಗಳು 13.80 ಕೋಟಿ ರೂ. ಮೌಲ್ಯದ ವಜ್ರ, ನಗದು, ಚಿನ್ನವನ್ನು ವಶಪಡಿಸಿಕೊಂಡು ಪರಿಶೀಲನೆಗೆ ಒಳಪಡಿಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು 79.84 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ, ಉಚಿತ ಉಡುಗೊರೆ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ತಂಡದವರು 46,25,000 ರೂ. ಮೌಲ್ಯದ 185 ಗ್ರಾಂ ಕೊಕೇನ್, 3,27,000 ರೂ. ಮೌಲ್ಯದ 45 ಗ್ರಾಂ ಇಸಿ ಟ್ಯಾಬ್ಲೆಟ್ ಅನ್ನು ಸಿ.ವಿ.ರಾಮನ್ ನಗರದಲ್ಲಿ ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

2 ಕೋಟಿ ಹಣ ಪತ್ತೆ ಚುರುಕು ಕಂಡ ತನಿಖೆ
ಬೆಂಗಳೂರು,ಏ.22- ಕಾಟನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ವೇಳೆ ಕಾರಿನಲ್ಲಿ 2 ಕೋಟಿ ರೂಪಾಯಿ ಹಣ ಪತ್ತೆಗೆ ಸಂಬಂಧಪಟ್ಟಂತೆ ಮೂವರ ವಿರುದ್ಧ ಪ್ರಕರಣವನ್ನು ದಾಖಲಾಗಿದೆ. ಪ್ರಕರಣ ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆಯಾಗಿದ್ದು, ಹಣ ಜಪ್ತಿ ಮಾಡಿಕೊಂಡ ಇಲಾಖೆ ತನಿಖೆ ಚುರುಕುಗೊಳಿಸಿದೆ.

ಕಳೆದ ಶನಿವಾರ ಮಧ್ಯಾಹ್ನ ಕಾಟನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ನಡೆಸುವಾಗ ಕಾರಿನಲ್ಲಿ 2 ಕೋಟಿ ಹಣ ಪತ್ತೆ ಆದ ಹಿನ್ನೆಲೆ ಚುನಾವಣಾಕಾರಿ ರವಿ ಅಸೂತಿ ಎಂಬುವರು ನೀಡಿದ ದೂರಿನ ಮೇರೆಗೆ ರಾಜ್ಯ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಲೊಕೇಶ್ ಅಂಬೆಕಲï, ಹಣ ಸಾಗಿಸುತ್ತಿದ್ದ ವೆಂಕಟೇಶ್ ಪ್ರಸಾದ್ ಹಾಗೂ ಗಂಗಾಧರ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಐಟಿ ಅಧಿಕಾರಿಗಳು ಮಾಹಿತಿ ಮೇರೆಗೆ ಹಣ ಜಪ್ತಿ ಮಾಡಿಕೊಂಡಿದ್ದು, ಇಬ್ಬರು ಆರೋಪಿತರನ್ನು ಹೆಚ್ಚಿನ ವಿಚಾರಣೆ ನಡೆಸಲು ನೊಟೀಸ್ ಜಾರಿ ಮಾಡಿದ್ದಾರೆ.

ಕೋದಂಡರಾಮಪುರ ಕೆನೆರಾ ಬ್ಯಾಂಕಿನಲ್ಲಿ ಕಳೆದ ಮಾರ್ಚ್ 27ರಂದು 5 ಕೋಟಿ ರೂಪಾಯಿ ಹಣ ವಿತ್ ಡ್ರಾ ಮಾಡಲಾಗಿದ್ದು, ಈ ಪೈಕಿ 2 ಕೋಟಿ ಹಣವನ್ನು ಮೈಸೂರು – ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಬೂತ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕ್ರಮಗಳಿಗೆ ಹಣ ಹಂಚಲು ಹೋಗುತ್ತಿರುವುದಾಗಿ ಆರೋಪಿತರು ಪ್ರಾಥಮಿಕ ತನಿಖೆಯಲ್ಲಿ ಒಪ್ಪಿಕೊಂಡಿದ್ದರು.

ಈ ವೇಳೆ, ಪತ್ತೆಯಾದ ಪತ್ರದಲ್ಲಿ ಮೇಲಿನ ಲೋಕಸಭಾ ಕ್ಷೇತ್ರಗಳ ಬೂತ್ ಮಟ್ಟದ ಕಾರ್ಯಕರ್ತರಿಗೆ ಹಣ ಹಂಚಲು ವೆಂಕಟೇಶ್ ಮೂಲಕ ಹಣ ಸಾಗಿಸುತ್ತಿರುವ ಬಗ್ಗೆ ಉಲ್ಲೇಖವಾಗಿತ್ತು ಎಂದು ಚುನಾವಣಾಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ. ಈ ಸಂಬಂಧ ಪೊಲೀಸರ ಸಮಕ್ಷಮದಲ್ಲಿ ಹಣ ಎಣಿಕೆ ಮಾಡಿ ವಶಕ್ಕೆ ಪಡೆದುಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

RELATED ARTICLES

Latest News