Tuesday, May 21, 2024
Homeರಾಜ್ಯರಾಜ್ಯದಲ್ಲಿ ಮತದಾನ ಮುಗಿದ ಬೆನ್ನಲ್ಲೇ ಸೋಲು-ಗೆಲುವಿನ ಲೆಕ್ಕಾಚಾರ ಶುರು, ಭರ್ಜರಿ ಬೆಟ್ಟಿಂಗ್

ರಾಜ್ಯದಲ್ಲಿ ಮತದಾನ ಮುಗಿದ ಬೆನ್ನಲ್ಲೇ ಸೋಲು-ಗೆಲುವಿನ ಲೆಕ್ಕಾಚಾರ ಶುರು, ಭರ್ಜರಿ ಬೆಟ್ಟಿಂಗ್

ಬೆಂಗಳೂರು,ಮೇ8-ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ , ರಾಜ್ಯಾದ್ಯಂತ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಹೋಟೆಲ್‌, ಅಂಗಡಿ ಮುಂಗಟ್ಟುಗಳಲ್ಲಿ, ಜಮೀನಿನಲ್ಲಿ ಕೆಲಸ ಮಾಡುವ ರೈತರು, ಕಾರ್ಮಿಕರು, ಮಹಿಳೆಯರು ಸಹ ಚುನಾವಣೆಯ ಸೋಲು, ಗೆಲುವಿನ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ. ಗೆಲುವು, ಸೋಲಿಗೆ ಯಾವ ವಿಷಯಗಳು ಕಾರಣವಾಗುತ್ತವೆ ಎಂಬ ಚರ್ಚೆ ಸರ್ವೇ ಸಾಮಾನ್ಯವಾಗಿವೆ.

ಯಾವುದೇ ಚುನಾವಣೆಗಳಲ್ಲೂ ಪ್ರಮುಖವಾಗಿ ಜಾತಿ ವಿಚಾರ, ಅಭ್ಯರ್ಥಿಗಳ ಜನಪರ ಕೆಲಸಗಳು, ಸಂಘಟನೆ ಹಾಗೂ ವ್ಯಕ್ತಿಗಳ ಆಧಾರ ಮೇಲೆ ಚುನಾವಣೆ ಲೆಕ್ಕಾಚಾರಗಳು ನಡೆಯುತ್ತವೆ. ಪ್ರಮುಖವಾಗಿ ಜಾತಿ ಲೆಕ್ಕಾಚಾರದ ಆಧಾರದ ಮೇಲೆಯೇ ಸೋಲು-ಗೆಲುವಿನ ಲೆಕ್ಕಾಚಾರಗಳು ನಡೆಯಲಾರಂಭಿಸಿವೆ.

ಮತದಾನ ಮುಗಿದ ಕೂಡಲೇ, ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌(ಇಂಡಿಯಾ) ಹಾಗೂ ಬಿಜೆಪಿ-ಜೆಡಿಎಸ್‌ ಮೈತ್ರಿ(ಎನ್‌ ಡಿಎ) ಅಭ್ಯರ್ಥಿಗಳು, ಇತರೆ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಈಗಾಗಲೇ ಮತಗಟ್ಟೆವಾರು ಆಗಿರುವ ಮತದಾನ ವಿವರಗಳನ್ನು ಕೈಯಲ್ಲಿ ಹಿಡಿದು ತಮಗೆ ಬರಬಹುದಾದ ಮತಗಳ ಮತ್ತು ತಮ್ಮಿಂದ ಯಾವ ಆಭ್ಯರ್ಥಿ ಸೋಲಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಬೆಟ್ಟಿಂಗ್‌ ಜೋರು:
ಲೋಕಸಭಾ ಚುನಾವಣೆಯ ಸೋಲು, ಗೆಲುವಿನ ಚರ್ಚೆ ಒಂದೆಡೆಯಾದರೆ, ಮತ್ತೊಂದೆಡೆ ಬೆಟ್ಟಿಂಗ್‌ ಸಹ ಜೋರಾಗಿಯೇ ನಡೆಯುತ್ತಿದೆ. ಕೆಲವಡೆ ಎನ್‌ಡಿಎ ಅಭ್ಯರ್ಥಿ ಪರ ದುಪ್ಪಟ್ಟು ಬಾಜಿ ನೀಡಿದರೆ ಕೆಲವೆಡೆ ಇಂಡಿಯಾ ಅಭ್ಯರ್ಥಿ ಪರ ದುಪ್ಪಟ್ಟು ಬಾಜಿ ನೀಡುತ್ತಿದ್ದಾರೆ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಸಾವಿರ, ಲಕ್ಷ ರೂ.ಗಳವರೆಗೂ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಸೈಟ್‌ಗಳು, ಮನೆಗಳನ್ನು ಪಣಕ್ಕಿಟ್ಟಿರುವ ಉದಾಹರಣೆಗಳೂ ಇವೆ. ಗ್ರಾಮಾಂತರ ಪ್ರದೇಶಗಳಲ್ಲಿ ಜಮೀನು, ಟ್ರ್ಯಾಕ್ಟರ್‌, ಕಾರು, ದನ ಕರುಗಳು, ಎಮ್ಮೆ, ಕುರಿ-ಮೇಕೆ, ಕೋಳಿಗಳನ್ನು ಪಣಕ್ಕಿಟ್ಟಿದ್ದಾರೆ. ಹಣ, ಬೈಕ್‌, ಹಸುಗಳನ್ನು ಸಹ ಬೆಟ್ಟಿಂಗ್‌ ಕಟ್ಟಲು ಮುಂದಾಗುತ್ತಿದ್ದಾರೆ.

ಕ್ರಿಕೆಟ್‌ ಐಪಿಎಲ್‌ ಬೆಟ್ಟಿಂಗ್‌ನಂತೆಯೇ ಚುನಾವಣೆಯ ಬೆಟ್ಟಿಂಗ್‌ ಕಾವು ಕೂಡ ಹೆಚ್ಚಿರುವುದಂತೂ ಸುಳ್ಳಲ್ಲ. ಬೆಟ್ಟಿಂಗ್‌ ಹಾವಳಿ ತಡೆಗಟ್ಟಲು ಪೊಲೀಸ್‌ ಇಲಾಖೆಯೂ ಕಣ್ಣಿಟ್ಟಿದೆ. ಆದರೂ ಕದ್ದುಮುಚ್ಚಿ ಬೆಟ್ಟಿಂಗ್‌ ನಡೆಯುತ್ತಿದೆ. ದಲಿತರು, ಲಿಂಗಾಯತರು, ಕುರುಬ, ಮುಸ್ಲಿಂ ಸೇರಿದಂತೆ ಇತರೆ ಹಿಂದುಳಿದ ಸಮುದಾಯಗಳಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗ ಮತವೇ ಕ್ಷೇತ್ರದಲ್ಲಿ ನಿರ್ಣಾಯಕ. ಒಕ್ಕಲಿಗ ಸಮುದಾಯದ ಮತಗಳು ಯಾರ ಕಡೆ ಹೋಗಿರುತ್ತವೆಯೋ ಅಂತಹ ಅಭ್ಯರ್ಥಿಗಳ ಗೆಲುವು ಸನಿಹವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮತದಾನದ ಪ್ರಮಾಣ, ಮತಗಟ್ಟೆ ಸಮೀಪ ಮತದಾರರು ನೀಡಿದ ಅಭಿಪ್ರಾಯ, ರಾಜಕೀಯ ಪಕ್ಷಗಳ ಕಾರ್ಯಕರ್ತರ ವರದಿ ಆಧರಿಸಿ ವಿಶ್ಲೇಷಣೆಗಳು ನಡೆಯುತ್ತಿವೆ.ಎಲ್ಲಾ ಪಕ್ಷಗಳ ನಾಯಕರಲ್ಲಿ ಮಂದಹಾಸ ಮೂಡಿದ್ದು, ಗೆಲುವು ತಮ್ಮದೇ ಎಂಬ ಬಲವಾದ ನಂಬಿಕೆಯಲ್ಲಿದ್ದಾರೆ. ಮತ ಎಣಿಕೆ ಜೂನ್‌ 4ರಂದು ನಡೆಯಲಿದ್ದು, ತಿಂಗಳಿಗೂ ಹೆಚ್ಚು ಕಾಲ ಕಾಯುವುದು ಮತದಾರರಿಗೂ ಕಷ್ಟವಾಗಿದೆ.

ಕಾಂಗ್ರೆಸ್‌ಗೆ ಗ್ಯಾರಂಟಿ ನಂಬಿಕೆ:
ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಮತಯಾಚನೆ ಮಾಡಿತ್ತು. ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ತಾರಾ ಪ್ರಚಾರಕಿ ಪ್ರಿಯಾಂಕಾ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿಗಳನ್ನು ಬಲವಾಗಿ ಪ್ರತಿಪಾದಿಸಿದ್ದರು. ಈ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗಿವೆ ಎಂಬ ಲೆಕ್ಕಾಚಾರದಲ್ಲಿ ಕೈ ಪಡೆ ಮುಳುಗಿದೆ.

ಗೃಹಲಕ್ಷ್ಮಿ ಯೋಜನೆಯ 2,000 ನಗದು ಕ್ಷೇತ್ರ ವ್ಯಾಪ್ತಿಯ ಫಲಾನುಭವಿಗಳಿಗೆ ವಾರದ ಹಿಂದೆಯಷ್ಟೇ ತಲುಪಿದೆ. ಕಳೆದ ಎರಡು ತಿಂಗಳ ನೆರವು ಒಮ್ಮೆಗೆ ಬ್ಯಾಂಕ್‌ ಖಾತೆಗೆ ಜಮಾ ಆಗಿದ್ದರಿಂದ ಕಾಂಗ್ರೆಸ್‌ ಪಾಳೆಯ ಪುಳಕಗೊಂಡಿತ್ತು. ಮತಗಟ್ಟೆ ಎದುರು ಸಾಲುಗಟ್ಟಿ ನಿಂತಿದ್ದ ಮಹಿಳಾ ಮತದಾರರು ಕೈಬಿಟ್ಟಿಲ್ಲ ಎಂಬುದು ಕಾಂಗ್ರೆಸ್‌ ನಾಯಕರ ನಂಬಿಕೆ.

ಬಿಜೆಪಿಗೆ ಮೋದಿ ನಾಮಬಲ:
ಪ್ರಧಾನಿ ನರೇಂದ್ರಮೋದಿ ಅಲೆ ಮತದಾರರನ್ನು ಪ್ರಭಾವಿಸಿದೆ ಎಂಬುದು ಬಿಜೆಪಿಯ ಬಲವಾದ ನಂಬಿಕೆ. ದೇಶಕ್ಕಾಗಿ ಮತದಾರರು ಹಕ್ಕು ಚಲಾಯಿಸಿದ್ದಾರೆ ಎಂದು ಕೇಸರಿ ಪಡೆ ವಿಶ್ಲೇಷಣೆ ಮಾಡುತ್ತಿದೆ. ಕ್ಷೇತ್ರದ ಅಭ್ಯರ್ಥಿ ಕೂಡ ಮೋದಿ ನಾಮ ಜಪ ಮಾಡಿ ಮತಯಾಚಿಸಿದ್ದರು. ಯುವ ಸಮೂಹ, ರೈತರು, ಪುರುಷರು, ಹೊಸ ಮತದಾರರು ಬೆಂಬಲಿಸಿದ್ದಾರೆ ಎಂದೇ ಬಿಜೆಪಿ ಪ್ರತಿಪಾದಿಸುತ್ತಿದೆ.

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಇತ್ತೀಚಿಗೆ ಪಾವತಿಯಾಗಿದೆ. ಜಿಲ್ಲೆಯ ಸಾವಿರಾರು ರೈತ ಕುಟುಂಬಗಳಿಗೆ ಸಿಕ್ಕಿರುವ ವಿಮೆ ಪರಿಹಾರವು ಮತಗಳಾಗಿ ಪರಿವರ್ತನೆಯಾಗಿವೆ ಎಂಬುದು ಬಿಜೆಪಿ ವಾದ. ಬೆಳೆ ವಿಮೆ ಪಡೆದ ರೈತ ಕುಟುಂಬ, ಕಿಸಾನ್‌ ಸಮ್ಮಾನ್‌ ಯೋಜನೆಯ ಫಲಾನುಭವಿಗಳು ಕಮಲ ಅರಳುವಂತೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಈ ಲೆಕ್ಕಾಚಾರಗಳಲ್ಲಿ ಯಾವುದು ಸರಿ ಎಂಬುದು ಮತ ಎಣಿಕೆಯ ಬಳಿಕವಷ್ಟೇ ಖಚಿತವಾಗಲಿದೆ.

RELATED ARTICLES

Latest News