ಗದಗ,ಜ.8- ರಾಕಿಂಗ್ ಸ್ಟಾರ್ ಯಶ್ ಕಟೌಟ್ ಕಟ್ಟುತ್ತಿದ್ದಾಗ ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಮೂವರು ಅಭಿಮಾನಿಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಯಶ್ ಹುಟ್ಟಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿಯಲ್ಲಿ 25 ಅಡಿ ಕಟೌಟ್ ಕಟ್ಟಲು ಮುಂದಾಗುತ್ತಿದ್ದಾಗ ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂರಣಗಿಯ ನಿವಾಸಿಗಳಾದ ಹನುಮಂತ(21), ಮುರುಳಿ(20) ಮತ್ತು ನವೀನ್(21) ಮೃತ ದುರ್ದೈವಿಗಳು. ಘಟನೆಯಲ್ಲಿ ಇತರ ಮೂವರು ಅಭಿಮಾನಿಗಳಿಗೂ ತೀವ್ರವಾಗಿ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಛತ್ತೀಸ್‍ಗಢದಲ್ಲಿ ಬಿಜೆಪಿ ನಾಯಕನ ಭೀಕರ ಹತ್ಯೆ
ಘಟನೆ ವಿವರ: ಯಶ್ ಅವರ ಹುಟ್ಟುಹಬ್ಬದ ಅಂಗವಾಗಿ ಈ ಗ್ರಾಮದಲ್ಲಿ ಪ್ರತಿ ವರ್ಷದಂತೆ ಬೃಹತ್ ಕಟೌಟ್ ನಿರ್ಮಿಸಿ ಸೂರಣಗಿಯ ಯುವಕರು ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿ ಮನೆ ಮನೆಗೆ ಕೇಕ್ ಹಂಚುತ್ತಿದ್ದರಂತೆ. ಜ.8ರಂದು ಯಶ್ ಹುಟ್ಟುಹಬ್ಬ ಇದುದ್ದರಿಂದ ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಸೂರಣಗಿ ಗ್ರಾಮದ 8 ಅಭಿಮಾನಿಗಳು ನೀಲಗಿರಿ ತೋಪಿನ ಬಳಿ ಹೋಗಿ ಕಬ್ಬಿಣದ ರಾಡು, ಹಸಿಮರ ಬಳಸಿ 25 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದರು. ನಂತರ ಅದನ್ನು ಕಟ್ಟಲು ಮೇಲೆತ್ತುತ್ತಿದ್ದಂತೆ ಸ್ಥಳದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಇವರ ಜೊತೆಯಲ್ಲಿದ್ದ ಮೂವರಿಗೆ ಗಾಯಗಳಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸುದ್ದಿ ತಿಳಿದು ಲಕ್ಷ್ಮೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್‍ಪಿ ನ್ಯಾಮೇಗೌಡ ಅವರು, ರಾತ್ರಿ ವೇಳೆಯಾದ್ದರಿಂದ ವಿದ್ಯುತ್ ತಂತಿ ಇರುವುದು ಯುವಕರ ಗಮನಕ್ಕೆ ಬಾರದಿರುವುದೇ ಈ ಘೋರ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ: ಯಶ್ ಹುಟ್ಟುಹಬ್ಬಕ್ಕೆ ಕಟೌಟ್ ಕಟ್ಟಲು ಹೋಗಿದ್ದ ಯುವಕರ ಪೈಕಿ ಮೂವರು ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದಾರೆಂಬ ಸುದ್ದಿ ತಿಳಿದು ಸೂರಣಗಿ ಗ್ರಾಮಸ್ಥರೆಲ್ಲರೂ ಆಸ್ಪತ್ರೆ ಮುಂದೆ ಜಮಾಯಿಸಿ ರೋಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಯುವಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ದೀದಿ ಟೀಕಿಸಿದ್ದ ಮಾಳವಿಯಾ ವಿರುದ್ಧ ದೂರು ದಾಖಲು
ಕಣ್ಣೀರಕೋಡಿಯಲ್ಲಿ ಮುಳುಗಿದ ಗ್ರಾಮ: ಈ ಘನಘೋರ ದುರಂತಕ್ಕೆ ಊರಿಗೆ ಊರೇ ಮೌನವಾಗಿದೆ. ಇಡೀ ಸೂರಣಗಿ ಗ್ರಾಮ ಕಣ್ಣೀರಕೋಡಿಯಲ್ಲಿ ಮುಳುಗಿದೆ.
ಸಾಮೂಹಿಕ ಅಂತ್ಯ ಸಂಸ್ಕಾರ: ಇಂದು ಬೆಳಗ್ಗೆ ಸಾಮೂಹಿಕವಾಗಿ ಮೂವರು ಯುವಕರ ಅಂತ್ಯ ಸಂಸ್ಕಾರವನ್ನು ಗ್ರಾಮದಲ್ಲಿ ನೆರವೇರಿಸಲಾಯಿತು.
ಪರಿಹಾರಕ್ಕೆ ಸಿಎಂ ಜೊತೆ ಚರ್ಚೆ: ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ಶಾಕ್‍ನಿಂದ ಮೂವರು ಯುವಕರು ಮೃತಪಟ್ಟಿರುವ ಬಗ್ಗೆ ಜಿಲ್ಲಾಕಾರಿ ಹಾಗೂ ಎಸ್.ಪಿ ಅವರಿಂದ ಮಾಹಿತಿ ಪಡೆದುಕೊಂಡಿದ್ದು, ಆ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಗದಗಕ್ಕೆ ಭೇಟಿ ನೀಡಿದಾಗ ಮೃತ ಯುವಕರ ಮನೆಗಳಿಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳುವುದಾಗಿ ಸಚಿವರು ತಿಳಿಸಿದ್ದಾರೆ.