ಬೆಂಗಳೂರು,ಏ.1- ಹದಿನೈದು ವರ್ಷಗಳ ಬಳಿಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ವಿದ್ಯುತ್ ಬಳಕೆಯ ದರವನ್ನು ಕಡಿತ ಮಾಡಲಾಗಿದ್ದು, ಇಂದಿನಿಂದಲೇ ಜಾರಿಗೆ ಬರಲಿದ್ದು, ಮೇ ತಿಂಗಳಿನಲ್ಲಿ ನೀಡಲಾಗುವ ಬಿಲ್‍ಗಳಿಗೆ ಅನ್ವಯವಾಗಲಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‍ಸಿ) ಕಳೆದ ಜನವರಿ ಮತ್ತು ಫೆಬ್ರವರಿಯಲ್ಲಿ ವಾರ್ಷಿಕ ಪ್ರಕ್ರಿಯೆಗಳನ್ನು ನಡೆಸಿ ಎಸ್ಕಾಂಗಳ ಪ್ರತಿಪಾದನೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಫೆ.22ರಂದು ಹೊರಡಿಸಿರುವ ಆದೇಶದ ಪ್ರಕಾರ ಹಿಂದಿನಿಂದ ಗೃಹ ಬಳಕೆಯ ವಿದ್ಯುತ್ ಮೇಲೆ 1 ರೂ. 10 ಪೈಸೆ ಕಡಿತವಾಗಲಿದೆ.
ಈ ಮೊದಲು 1ರಿಂದ 100 ರೂ. ಒಳಗಿನ ವಿದ್ಯುತ್ ದರಕ್ಕೆ 4 ರೂ.ಗಿಂತಲೂ ಹೆಚ್ಚಿನ ದರ ಇತ್ತು. 100 ರೂ. ಮೇಲ್ಪಟ್ಟ ವಿದ್ಯುತ್ ಬಳಕೆಗೆ ಶೂನ್ಯ ಯೂನಿಟ್‍ನಿಂದಲೇ 7 ರೂ. ಅನ್ವಯವಾಗುತ್ತಿತ್ತು. ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿ ಇದ್ದುದ್ದರಿಂದ 200 ಯೂನಿಟ್ ಒಳಗಿನ ವಿದ್ಯುತ್ ಬಳಕೆಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಾಗಿರಲಿಲ್ಲ. ಆದರೆ ಗೃಹಜ್ಯೋತಿ ವ್ಯಾಪ್ತಿಯಿಂದ ಹೊರಗುಳಿದ ಗ್ರಾಹಕರಿಗೆ ವಿದ್ಯುತ್ ಶಾಕ್ ಜೋರಾಗೇ ತಗುಲಿತ್ತು.
ಈ ಬಾರಿ ನಡೆದ ವಿಚಾರಣೆಯಲ್ಲಿ ಎಸ್ಕಾಂಗಳು 2024-25ನೇ ಸಾಲಿಗೆ 69,474.75 ಕೋಟಿ ರೂ.ಗಳ ವಾರ್ಷಿಕ ಕಂದಾಯದ ಅಗತ್ಯತೆಯನ್ನು ಪ್ರಸ್ತಾಪಿಸಿದರು. ಇದರಿಂದ 4,863.85 ಕೋಟಿ ರೂ.ಗಳ ಕಂದಾಯ ಕೊರತೆ ಕಂಡುಬಂದಿತ್ತು. ಇದನ್ನು ಸರಿದೂಗಿಸಲು ಪ್ರತಿ ಯೂನಿಟ್‍ಗೆ 49ರಿಂದ 163 ಪೈಸೆಗಳವರೆಗೆ ಸರಾಸರಿ 66 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳಕ್ಕೆ ಮನವಿ ಮಾಡಿದ್ದವು. ಆದರೆ ಕರ್ನಾಟಕ ವಿದ್ಯುಚ್ಛಕ್ತಿ ಆಯೋಗ 64,944.54 ಕೋಟಿ ಕಂದಾಯ ಅಗತ್ಯತೆಗೆ ಅನುಮೋದನೆ ನೀಡಿದೆ.
ಇದರಿಂದ 290.76 ಕೋಟಿ ರೂ. ಕಂದಾಯ ಹೆಚ್ಚಳ ಪ್ರಸ್ತಾಪವಾಗಿದೆ. ಇದರ ಆಧಾರದ ಮೇಲೆ ಗೃಹ ಬಳಕೆ, ವಾಣಿಜ್ಯ, ಕೈಗಾರಿಕೆ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಏತನೀರಾವರಿ, ಅಪಾರ್ಟ್‍ಮೆಂಟ್‍ಗಳು, ಕೈಗಾರಿಕಾ ಸ್ಥಾವರಗಳಲ್ಲಿ ವಿದ್ಯುತ್ ಬಳಕೆಯಾಗುವ ವಿದ್ಯುತ್‍ನ ದರವನ್ನು ವಿವಿಧ ಹಂತಗಳಲ್ಲಿ ಕಡಿತಗೊಳಿಸಲಾಗಿದೆ.
ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ದರ ಇಳಿಕೆಯಾಗಿರುವುದರಿಂದ ಪ್ರತಿ ಯೂನಿಟ್‍ಗೆ ನೀಡಲಾಗುತ್ತಿದ್ದ 50 ಪೈಸೆ ರಿಯಾಯ್ತಿಯನ್ನು ಮುಂದುವರೆಸುವುದಿಲ್ಲ ಎಂದು ತಿಳಿಸಲಾಗಿದೆ. ನಗರ, ಗ್ರಾಮೀಣ ಪ್ರವರ್ಗಗಳನ್ನು ವಿಲೀನಗೊಳಿಸಿದ್ದ ನಿರ್ಧಾರವನ್ನು ಪರಿಷ್ಕರಿಸಲಾಗಿದ್ದು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮತ್ತು ಕೈಗಾರಿಕೆ, ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯೂನಿಟ್‍ಗೆ 30 ಪೈಸೆ ರಿಯಾಯ್ತಿಯನ್ನು ಅನುಮೋದಿಸಲಾಗಿದೆ.
ನವೀಕರಿಸಬಹುದಾದ ಇಂಧನ ಮೂಲಗಳಿಂದ ಖರೀದಿಸುವ ವಿದ್ಯುತ್‍ನ ಪ್ರತಿ ಯೂನಿಟ್‍ಗೆ 50 ಪೈಸೆ ಹೆಚ್ಚಿನ ದರವನ್ನು ಮುಂದುವರೆಸಲಾಗಿದೆ ಎಂದು ಕೆಇಆರ್‍ಸಿ ತಿಳಿಸಿದೆ. ಏ.1ರಿಂದ ಪ್ರೀಪೇಮೆಂಟ್ ಮೀಟರ್‍ನ್ನು ಅನುಮೋದಿಸಲು ಅಗತ್ಯವಾದ ವ್ಯವಸ್ಥೆಯನ್ನು ಸೂಚಿಸಬೇಕು. ಜೂ.1ರಿಂದ ಎಲ್‍ಟಿ ಗ್ರಾಹಕರಿಗೆ ಸ್ವಯಂ ಮಾಪಕ ಓದುವಿಕೆಯನ್ನು ಸಾಧ್ಯವಾಗಿಸಲು ಅಗತ್ಯ ಸಾಫ್ಟ್‍ವೇರ್ ಅಳವಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಪ್ರತಿ ಯೂನಿಟ್‍ಗೆ ದರ ಇಳಿಕೆಯ ಪ್ರಮಾಣ:
ಎಲ್‍ಟಿ ಗೃಹ ಬಳಕೆ 1.10 ರೂ.
ಎಚ್‍ಪಿ ವಾಣಿಜ್ಯ 1.25 ರೂ.
ಎಚ್‍ಟಿ ಕೈಗಾರಿಕೆ 50 ಪೈಸೆ
ಎಚ್‍ಟಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು 40 ಪೈಸೆ
ಖಾಸಗಿ ಏತನೀರಾವರಿ 2 ರೂ.
ಖಾಸಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು 50 ಪೈಸೆ
ಕೈಗಾರಿಕಾ ಸ್ಥಾವರಗಳು 1 ರೂ.
ವಾಣಿಜ್ಯ ಸ್ಥಾವರಗಳು 50 ಪೈಸೆ
ಅಪಾರ್ಟ್‍ಮೆಂಟ್‍ಗಳು ಸೇರಿದಂತೆ ವಾಣಿಜ್ಯ, ಕೈಗಾರಿಕೆ, ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಬೇಡಿಕೆ ಶುಲ್ಕವನ್ನು ಪ್ರತಿ ಕಿಲೋ ವ್ಯಾಟ್‍ಗೆ 10 ರೂ. ಇಳಿಸಲಾಗಿದೆ.