Tuesday, April 23, 2024
Homeರಾಜಕೀಯಈಶ್ವರಪ್ಪ ಏಕಾಂಗಿ ಹೋರಾಟಕ್ಕೆ ತಲೆಕೆಡಿಸಿಕೊಳ್ಳದ ಬಿಜೆಪಿ

ಈಶ್ವರಪ್ಪ ಏಕಾಂಗಿ ಹೋರಾಟಕ್ಕೆ ತಲೆಕೆಡಿಸಿಕೊಳ್ಳದ ಬಿಜೆಪಿ

ಬೆಂಗಳೂರು,ಮಾ.25-ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು ಕೆಲವರನ್ನು ಬಿಟ್ಟರೆ ಒಂದಷ್ಟು ಮಂದಿ ಪ್ರಚಾರದ ಕಣಕ್ಕೂ ಧುಮುಕಿದ್ದಾರೆ. ಇದೇ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಲಬುರಗಿ ಮತ್ತು ಶಿಮೊಗ್ಗದಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುವ ಮೂಲಕ ಅಧಿಕೃತ ಪ್ರಚಾರಕ್ಕೆ ಚಾಲನೆಯನ್ನೂ ನೀಡಿದ್ದಾರೆ.

ಆದರೆ ಇವೆಲ್ಲದರ ನಡುವೆಯೂ ಕುತೂಹಲ ಮೂಡಿಸಿರುವ ಅಂಶ ಎಂದರೆ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಅವರು ಮೇಲುಗೈ ಸಾಧಿಸುತ್ತಿದ್ದಂತೆಯೇ ಬಿಜೆಪಿಯಲ್ಲಿ ಟಿಕೆಟ್ ವಂಚಿತ ಹಿರಿಯ ನಾಯಕರೇ ಬಂಡಾಯ ಎದ್ದಿರುವುದು ಮತ್ತು ಈ ಪೈಕಿ ಕೆಲವರು ಕಾಂಗ್ರೆಸ್ ನತ್ತ ಮುಖ ಮಾಡಿರುವುದು.

ಗುರಿ ಸಾಧಿಸಲು ಕಾಂತೇಶ್ ದುರ್ಬಲ ಅಭ್ಯರ್ಥಿ ಆಗುತ್ತಾರೆ ಹಾಗಾಗಿ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು ಎಂಬುದು ಬಿಜೆಪಿ ಮೂಲಗಳು ನೀಡುವ ವಿವರಣೆ.ಇನ್ನು ಶಿವಮೊಗ್ಗದಲ್ಲಿ ರಾಘವೇಂದ್ರ ವಿರುದ್ಧ ತನ್ನ ಸ್ಪರ್ಧೆ ಖಚಿತ ಎಂದು ಈಶ್ವರಪ್ಪ ಹೇಳುತ್ತಿದ್ದಾರಾದರೂ ಅವರ ಬಂಡಾಯವನ್ನು ಯಡಿಯೂರಪ್ಪ ಅಥವಾ ಅವರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಿವಮೊಗ್ಗ ಅಭ್ಯರ್ಥಿ ರಾಘವೇಮದ್ರ ಗಂಭೀರವಾಗಿ ತೆಗೆದುಕೊಂಡಿಲ್ಲ. ಶಿವಮೊಗ್ಗ ಸ್ಥಳೀಯ ಬಿಜೆಪಿ ಶಾಸಕ ಚೆನ್ನ ಬಸಪ್ಪ ಕೂಡಾ ಪಕ್ಷದ ನಿಲುವಿಗೆ ಬದ್ಧರಾಗಿ ರಾಘವೇಂದ್ರ ಪರ ಪ್ರಚಾರಕ್ಕೆ ಇಳಿದಿದ್ದಾರೆ.

ಈಶ್ವರಪ್ಪ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಆಯ್ದ ಪ್ರಮುಖರು ಯಾರೂ ಬಂಡಾಯ ಸ್ಪರ್ಧೆಯನ್ನು ಬೆಂಬಲಿಸಲಿಲ್ಲ. ಬದಲಾಗಿ ದುಡುಕಿ ತೀರ್ಮಾನ ಕೈಗೊಳ್ಳದಂತೆ ಸದ್ಯದ ಪರಿಸ್ಥಿತಿಯಲ್ಲಿ ಹೊಂದಿಕೊಂಡು ಹೋಗುವಂತೆ ಸಲಹೆ ನೀಡಿದ್ದು ಬಿಟ್ಟರೆ ಉಳಿದಂತೆ ನೇರಾ ನೇರ ಬೆಂಬಲ ಘೋಷಿಸಿಲ್ಲ. ಹೀಗಾಗಿ ಯಡಿಯೂರಪ್ಪ ವಿರುದ್ಧ ಸಮರ ಸಾರಿರುವ ಈಶ್ವರಪ್ಪ ರಣರಂಗದಲ್ಲಿ ಒಂಟಿಯಾಗಿದ್ದಾರೆ.

ದಿನಕ್ಕೊಂದು ಹೇಳಿಕೆಯಂತೆ ಯಡಿಯೂರಪ್ಪ ಮತ್ತು ಪುತ್ರರ ವಿರುದ್ಧ ಅವರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದರೂ ಅದಕ್ಕೆ ಪಕ್ಷದ ಉಳಿದ ಯಾವುದೇ ನಾಯಕರೂ ಪ್ರತಿಕ್ರಿಯಿಸುತ್ತಿಲ್ಲ. ಕೆಲವರು ಈಶ್ವರಪ್ಪ ಅವರನ್ನಾಗಲೀ ಅವರ ಹೋರಾಟದ ಹೇಳಿಕೆಗಳನ್ನಾಗಲೀ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂಬ ನಿಲುವಿಗೆ ಬದ್ದರಾಗಿದ್ದರೆ ಇನ್ನುಳಿದಂತೆ ಪಕ್ಷದಲ್ಲಿದ್ದೂ ಯಡಿಯೂರಪ್ಪ ಮತ್ತು ಅವರ ಮಕ್ಕಳ ನಾಯಕತ್ವವನ್ನು ಒಳಗೊಳಗೇ ವಿರೋಧಿಸುತ್ತಿರುವ ಬಹಳಷ್ಟು ನಾಯಕರು ಈ ವಿಚಾರದಲ್ಲಿ ತಟಸ್ಥ ಧೋರಣೆ ತಳೆದಿದ್ದಾರೆ

ಇದಕ್ಕೆ ಕಾರಣ ತಮ್ಮೆಲ್ಲ ಮಾತುಗಳನ್ನು ಈಶ್ವರಪ್ಪ ಆಡುತ್ತಿರುವುದು. ಆದರೆ ಇದು ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪನವರೇ ಟಿಕೆಟ್ ಕೊಡಿಸಿ ಕಣಕ್ಕಿಳಿಸಿರುವ ಬಿಜೆಪಿ ಅಭ್ಯರ್ಥಿಗಳಿಗೆ ಮುಳ್ಳಾಗುತ್ತದೆಯೇ? ಎಂದು ನೊಡಿದರೆ ಅಂತಹ ಯಾವುದೇ ಸಾಧ್ಯತೆಗಳಿಲ್ಲ. ಪ್ರಧಾನಿ ಮೋದಿ ನಾಯಕತ್ವದ ಜನಪ್ರಿಯತೆಯೇ ಬಿಜೆಪಿಗೆ ಚುನಾವಣೆಗೆ ಬಂಡವಾಳ ಆಗಿರುವುದರಿಂದ ಈ ವಿಚಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿ ನಡೆದರೂ ಭವಿಷ್ಯದಲ್ಲಿ ತಮ್ಮ ರಾಜಕೀಯ ಭವಿಷ್ಯವೇ ಮಸುಕಾಗಿ ಬಿಡಬಹುದು ಎಂಬ ಆತಂಕ ಇನ್ನೊಂದು ಕಡೆ ಈ ಮುಖಂಡರುಗಳನ್ನು ಕಾಡುತ್ತಿದೆ.

ಹೀಗಾಗಿ ಈಶ್ವರಪ್ಪ ಮೇಲೆ ಅನುಕಂಪ ವಿಶ್ವಾಸ ಇದ್ದರೂ ತಮ್ಮ ವ್ಯಕ್ತಿಗತ ರಾಜಕಾರಣದ ಅವಶ್ಯಕತೆಗಳಿಗೆ ಕಟ್ಟು ಬಿದ್ದು ಸುಮ್ಮನಗಾಗಿದ್ದಾರೆ. ಹೀಗಾಗಿ ಯಾವುದೇ ದೃಷ್ಟಿಯಿಂದ ನೋಡಿದರೂ ಈಶ್ವರಪ್ಪ ಈ ರಾಜಕಾರಣದ ಚೆದುರಂಗದಾಟದಲ್ಲಿ ಬಲಿ ಪಶು ಆಗುವುದು ಅನುಮಾನವೇ ಇಲ್ಲ ಎಂಬ ವಾತಾವರಣ ಮೂಡಿದೆ.

ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಂತೆ ಇರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ರಾಘವೇಂದ್ರ ಗೆಲುವಿನ ಓಟಕ್ಕೆ ತಡೆಯೊಡ್ಡುವ ಪ್ರಬಲ ಅಭ್ಯರ್ಥಿಗಳು ಇಲ್ಲ.ಹಾಗೆ ನೋಡಿದರೆ ಈಶ್ವರಪ್ಪ ಅವರಿಗೆ ರಾಜಕೀಯವಾಗಿ ಮುಖ್ಯಮಂತ್ರಿ ಪದವಿಯೊಂದನ್ನು ಹೊರತು ಪಡಿಸಿದರೆ ಉಳಿದಂತೆ ಎಲ್ಲ ಪ್ರಮುಖ ಅಧಿಕಾರಗಳೂ ಸಿಕ್ಕಿವೆ. ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ನಾಯಕತ್ವವನ್ನು ಪ್ರಶ್ನಿಸುವ ದೈರ್ಯ ಕೇಂದ್ರ ಬಿಜೆಪಿ ನಾಯಕರಿಗೂ ಇಲ್ಲ. ಯಾಕೆಂದರೆ ಅವರಷ್ಟೇ ಸಾಮಥ್ರ್ಯದ ಮತ್ತೊಬ್ಬ ಪ್ರಭಾವಿ ನಾಯಕ ಬಿಜೆಪಿಯಲ್ಲಿ ಇಲ್ಲ. ಇದೇ ಬಿಜೆಪಿಯ ನಿಜವಾದ ಸಮಸ್ಯೆ.

RELATED ARTICLES

Latest News