Friday, November 22, 2024
Homeರಾಜ್ಯಟಿಕೆಟ್ ಸಿಕ್ಕರೂ ಖರ್ಚಿಗೆ ಕಾಸಿಲ್ಲದೆ ಗೋಗರೆಯುತ್ತಿದ್ದಾರೆ ಕೆಲವು ಅಭ್ಯರ್ಥಿಗಳು

ಟಿಕೆಟ್ ಸಿಕ್ಕರೂ ಖರ್ಚಿಗೆ ಕಾಸಿಲ್ಲದೆ ಗೋಗರೆಯುತ್ತಿದ್ದಾರೆ ಕೆಲವು ಅಭ್ಯರ್ಥಿಗಳು

ಬೆಂಗಳೂರು,ಮಾ.24- ಲೋಕಸಭಾ ಚುನಾವಣೆಯಲ್ಲಿ ಪೈಪೋಟಿ ನಡೆಸಿ ದುಂಬಾಲು ಬಿದ್ದಿದ್ದ ಬಹಳಷ್ಟು ನಾಯಕರು ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಗೆಲ್ಲಲು ಸಹಾಯ ಮಾಡುವಂತೆ ನಾಯಕರ ಬೆನ್ನು ಬಿದ್ದಿದ್ದಾರೆ. ಕಾಂಗ್ರೆಸ್‍ನಲ್ಲಿ ಈವರೆಗೂ ಘೋಷಿತ ಅಭ್ಯರ್ಥಿಗಳ ಪೈಕಿ ಶೇ.40 ರಷ್ಟು ಮಂದಿ ಸಾಮಾನ್ಯ ಕುಟುಂಬದಿಂದ ಬಂದ ಕಾರ್ಯಕರ್ತರು ಹಾಗೂ ಮುಖಂಡರಾಗಿದ್ದಾರೆ. ಅವರಲ್ಲಿ ಕೆಲವರು ಆರ್ಥಿಕವಾಗಿ ಪ್ರಬಲರಾಗಿಲ್ಲದ ಕಾರಣ ಚುನಾವಣಾ ವೆಚ್ಚವನ್ನು ನಿಭಾಯಿಸಲು ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.

ಚುನಾವಣೆ ಅಸೂಚನೆಗೂ ಮುನ್ನವೇ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಬಾರಿ ಅಧಿಕೃತ ಅಭ್ಯರ್ಥಿಗಳೇ ಖರ್ಚುವೆಚ್ಚವನ್ನು ನಿಭಾಯಿಸಬೇಕು ಎಂಬ ಕಾರಣಕ್ಕಾಗಿ ಮುಖಂಡರು, ಕಾರ್ಯಕರ್ತರು ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಪ್ರಸ್ತುತ ರಾಜಕೀಯದಲ್ಲಿ ಚುನಾವಣೆ ಎಂಬುದು ಬಿಳಿ ಆನೆಯಾಗಿದ್ದು, ಅದನ್ನು ನಿಭಾಯಿಸಲಾಗದೆ ಆರಂಭದಲ್ಲೇ ಅಭ್ಯರ್ಥಿಗಳು ಸುಸ್ತು ಹೊಡೆದಿದ್ದಾರೆ.

ಕಾಂಗ್ರೆಸ್ ಪಕ್ಷ ಅಕಾರದಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ಕೈಹಿಡಿದಿದ್ದಾರೆ. ಅದೇ ಅಲೆಯ ಮೇಲೆ ಲೋಕಸಭಾ ಚುನಾವಣೆಯನ್ನು ಎದುರಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಅಭ್ಯರ್ಥಿಗಳಿಗೆ ಆರ್ಥಿಕ ಸವಾಲುಗಳು ಕಂಗೆಡುವಂತೆ ಮಾಡಿದೆ.
ಸಾಮಾನ್ಯವಾಗಿ ಅಭ್ಯರ್ಥಿಗಳಿಗೆ ಆಯಾ ಕ್ಷೇತ್ರಗಳ ಶಾಸಕರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಸಹಕಾರ ನೀಡಬೇಕು. ಆಡಳಿತಾರೂಢ ಪಕ್ಷವಾಗಿರುವುದರಿಂದ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಇತರ ಹುದ್ದೆಗಳನ್ನು ಪಡೆದವರು ಚುನಾವಣಾ ವೆಚ್ಚ ನಿಭಾಯಿಸಲು ಕೈಜೋಡಿಸಬೇಕು ಎಂಬ ನಿರೀಕ್ಷೆಗಳಿವೆ.

ಆದರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಂತಹ ಉತ್ಸಾಹ ಕಂಡುಬರುತ್ತಿಲ್ಲ. ಸಚಿವರ ಮಕ್ಕಳು ಹಾಗೂ ಅವರ ಕುಟುಂಬದವರು ಅಕೃತ ಅಭ್ಯರ್ಥಿಗಳಾಗಿರುವ ಕಡೆ ಈ ರೀತಿಯ ಸಮಸ್ಯೆಗಳಿಲ್ಲ. ಸಚಿವರು ಸಂಪೂರ್ಣವಾಗಿ ತನು-ಮನ-ಧನ ಬಳಕೆ ಮಾಡಿ ಚುನಾವಣೆ ನಡೆಸುತ್ತಿದ್ದಾರೆ. ಆದರೆ ಸಚಿವರ ಕುಟುಂಬದ ಸದಸ್ಯರಲ್ಲದೇ ಇರುವ ಕಡೆ ನಾನು-ನೀನು ಎಂಬ ಹಗ್ಗಜಗ್ಗಾಟ ಶುರುವಾಗಿದೆ.

ಕಾಂಗ್ರೆಸ್‍ನ ರಾಜ್ಯನಾಯಕರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ನೀಡಿದ್ದಾರೆ.ಕೆಲವು ಕ್ಷೇತ್ರಗಳಲ್ಲಿ ಆರ್ಥಿಕವಾಗಿ ಪ್ರಬಲವಾಗಿರುವ ಕಾರ್ಯಕರ್ತರನ್ನೇ ಅಳೆದು ತೂಗಿ ಅಭ್ಯರ್ಥಿಗಳನ್ನಾಗಿ ಮಾಡಲಾಗಿದೆ. ಆದರೆ ಬಹುತೇಕ ಕ್ಷೇತ್ರಗಳಲ್ಲಿ ನಿಷ್ಠಾವಂತರನ್ನು, ಜನಪ್ರಿಯರನ್ನು ಪರಿಗಣಿಸಲಾಗಿದೆ. ಆದರೆ ಚುನಾವಣೆ ನಿಷ್ಠೆ, ಜನಪ್ರಿಯತೆ ಮೀರಿ ಆರ್ಥಿಕ ಸಂಪನ್ಮೂಲವನ್ನು ಬಯಸುತ್ತಿದೆ.

ಅಂದಾಜಿನ ಪ್ರಕಾರ ಈ ಬಾರಿ 20 ಕೋಟಿ ರೂ.ಗಳನ್ನು ಮೀರಿದ ವೆಚ್ಚವನ್ನು ನಿರೀಕ್ಷಿಸುತ್ತಿದೆ ಎಂಬ ಅಂದಾಜುಗಳಿವೆ. ಇನ್ನೂ ಕೆಲವು ಕಡೆ 40 ರಿಂದ 50 ಕೋಟಿ ರೂ. ದಾಟುವ ಸಾಧ್ಯತೆಯಿದೆ.ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಎಷ್ಟೇ ಪ್ರಭಾವಿ ನಾಯಕರಿದ್ದರೂ ಅಂತಿಮವಾಗಿ ಮತದಾನದ ಮುನ್ನಾದಿನ ನಡೆಯುವ ಆರ್ಥಿಕ ವಹಿವಾಟು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬುದು ಸಾರ್ವತ್ರಿಕ ಅಭಿಪ್ರಾಯ.

ಈ ಬಾರಿ ಬಿಜೆಪಿ-ಜೆಡಿಎಸ್ ಪಕ್ಷಗಳು ಹೊಂದಾಣೀಕೆ ಮಾಡಿಕೊಂಡಿದ್ದು ಜಂಟಿಯಾಗಿ ಚುನಾವಣೆ ಎದುರಿಸುತ್ತಿದೆ. ಆದರೆ ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ 28 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಹೀಗಾಗಿ ಪ್ರತೀ ಕ್ಷೇತ್ರವು ಕೈ ಪಡೆಗೆ ಸವಾಲಾಗಿದೆ.

ಅದರಲ್ಲೂ ಮಹಾನಗರಿ ಬೆಂಗಳೂರಿನಲ್ಲಂತೂ ಮೂರು ಕ್ಷೇತ್ರಗಳಲ್ಲೂ ಹಣದ ಹೊಳೆಯೇ ಹರಿಯುವ ಅಂದಾಜಿದೆ. ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಕಣದಲ್ಲಿದ್ದಾರೆ. ಉಳಿದೆರಡು ಕ್ಷೇತ್ರಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.

ಮಂಡ್ಯ, ಮೈಸೂರು, ಬಿಜಾಪುರ, ಹಾವೇರಿ, ತುಮಕೂರು, ಹಾಸನ, ಚಿತ್ರದುರ್ಗ, ಧಾರವಾಡ, ದಕ್ಷಿಣ ಕನ್ನಡ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಸಾಮಾನ್ಯ ಕಾರ್ಯಕರ್ತರು ಅಭ್ಯರ್ಥಿಗಳಾಗಿದ್ದಾರೆ.

ಕೆಲವು ಅಭ್ಯರ್ಥಿಗಳು ಆರ್ಥಿಕವಾಗಿ ಸದೃಢರಾಗಿದ್ದಾರಾದರೂ ಚುನಾವಣೆ ನಿಭಾವಣೆ ಅವರ ಆರ್ಥಿಕ ಸಾಮಥ್ರ್ಯವನ್ನು ಮೀರಿದ ಮಟ್ಟಕ್ಕೆ ದುಬಾರಿಯಾಗಿದೆ. ಹೀಗಾಗಿ ಸಚಿವರು, ಶಾಸಕರನ್ನು ಅವಲಂಬಿಸಿ ಚುನಾವಣೆ ನಡೆಸಲು ಒದ್ದಾಡುತ್ತಿದ್ದಾರೆ. ಸ್ಥಳೀಯ ಶಾಸಕರು, ಸಚಿವರಾಗಿರುವವರತ್ತ ಬೆರಳು ತೋರಿಸಿದರೆ, ಸಚಿವರು ನಾನೊಬ್ಬನೇ ಏಕೆ ಜವಾಬ್ದಾರಿ ನಿಭಾಯಿಸಬೇಕೆಂಬ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ ಎಂಬ ಆಕ್ಷೇಪಗಳಿವೆ. ಹೀಗಾಗಿ ಕಾಂಗ್ರೆಸ್ ಆರಂಭದಲ್ಲೇ ಗೊಂದಲದ ಗೂಡಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿ ಕ್ಷೇತ್ರವಾರು ಸಭೆ ನಡೆಸಿ ಒಗ್ಗಟ್ಟು ಮೂಡಿಸಲು ಹರಸಾಹಸ ನಡೆಸುತ್ತಿದ್ದಾರೆ.

RELATED ARTICLES

Latest News