Monday, December 2, 2024
Homeರಾಜಕೀಯ | Politicsಉಪಚುನಾವಣೆಯಲ್ಲೂ ಕುಟುಂಬ ರಾಜಕಾರಣ, ಕಾರ್ಯಕರ್ತರು ಆಟಕ್ಕುಂಟು ಲೆಕ್ಕಕ್ಕಿಲ್ಲ

ಉಪಚುನಾವಣೆಯಲ್ಲೂ ಕುಟುಂಬ ರಾಜಕಾರಣ, ಕಾರ್ಯಕರ್ತರು ಆಟಕ್ಕುಂಟು ಲೆಕ್ಕಕ್ಕಿಲ್ಲ

family politics in Byelection

ಬೆಂಗಳೂರು,ಅ.18-ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎತ್ತ ನೋಡಿದರೂ ಕುಟುಂಬ ರಾಜಕಾರಣವೇ ಮತ್ತೆ ಮುನ್ನಲೆಗೆ ಬರುತ್ತಿದ್ದು, ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರು ಅನಾಥರಾಗುತ್ತಿದ್ದಾರೆ.

ಪ್ರತಿ ಚುನಾವಣೆ ಬಂದಾಗ ಕುಟುಂಬ ರಾಜಕಾರಣವನ್ನು ವಿರೋಧಿಸುವ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಕೊನೆಗೆ ಕಾರ್ಯಕರ್ತರ ಒತ್ತಡ, ಗೆಲ್ಲುವ ಅನಿವಾರ್ಯತೆ ಎಂಬ ಸಬೂಬುಗಳನ್ನು ಕೊಟ್ಟು ತಮ ಕುಟುಂಬದವರಿಗೆ ಮಣೆ ಹಾಕುತ್ತಲೇ ಬಂದಿದ್ದಾರೆ.
ಇದೀಗ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹೇಗೆ ನೋಡಿದರೂ ಪುನಃ ಕುಟುಂಬದ ಕುಡಿಗಳು, ಪತ್ನಿ, ಸಹೋದರರ ಹೆಸರುಗಳೇ ಗಿರಕಿ ಹೊಡೆಯುತ್ತಿವೆ.

ನಾವು ನಮ ಕುಟುಂಬದವರಿಗೆ ಟಿಕೆಟ್‌ ಬೇಡ ಎಂದು ಹೇಳಿದ್ದೇವು. ಆದರೆ ಕಾರ್ಯಕರ್ತರು ಮಾತ್ರ ನಿರಂತರ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ವಿಧಿಯಿಲ್ಲದೆ ಕಣಕ್ಕಿಳಿಸುವುದು ಅನಿವಾರ್ಯತೆಯಾಗಿದೆ ಎಂಬ ಹಳಸು ಮಾತುಗಳೇ ಉಪಚುನಾವಣೆಯಲ್ಲೂ ಮಾರ್ಧನಿಸುತ್ತಿವೆ.

ಕುಟುಂಬ ರಾಜಕಾರಣವನ್ನು ಅತಿಯಾಗಿ ದ್ವೇಷಿಸಿ ಕಾಂಗ್ರೆಸ್‌‍ಗೆ ನೈತಿಕತೆ ಪಾಠ ಮಾಡುವ ಬಿಜೆಪಿ ಕೂಡ ಇದಕ್ಕೆ ಹೊರತಾಗಿಲ್ಲ ಎಂಬುದು ಮತ್ತೊಂದು ದುರಂತವೇ ಸರಿ.ಮೂರು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿರುವುದು ಅಂತಿಮವಾಗಿ ಅವರ ಕುಟುಂಬದವರಿಗೆ ಮಣೆ ಹಾಕಿದರೂ ಅಚ್ಚರಿ ಪಡೆಬೇಕಿಲ್ಲ. ಎಂದಿನಂತೆ ಕಾರ್ಯಕರ್ತರು ಮಾತ್ರ ಬಾವುಟ ನೀಡುವುದು, ಮತ ಯಾಚನೆ, ನಾಯಕರಿಗೆ ಜೈಕಾರ ಹಾಕುವುದಕ್ಕೆ ಸೀಮಿತವಾಗುತ್ತಿದ್ದಾರೆ.

ಪಕ್ಷಕ್ಕೆ ನಿಷ್ಠಾವಂತರಾಗಿ ವರ್ಷಗಟ್ಟಲೆ ದುಡಿದಿರುವ ಪ್ರಾಮಾಣಿಕ ಕಾರ್ಯಕರ್ತರು, ನಾಯಕರು, ಒಂದಿಷ್ಟು ಹಣ, ಜಾತಿಬಲ ಇವೆಲ್ಲವನ್ನೂ ಬೆನ್ನಿಗೆ ಕಟ್ಟಿಕೊಂಡು ನಾಯಕರಲ್ಲಿ ಟಿಕೆಟ್‌ಗಾಗಿ ಬೇಡಿಕೆಯಿಡುತ್ತಿದ್ದಾರೆ.

ಆ ಲೆಕ್ಕಾಚಾರ ನೋಡಿದರೆ, ಮೂರು ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರು ಅಥವಾ ಪಕ್ಷದ ನಿಷ್ಠಾವತ ಕಾರ್ಯಕರ್ತರಿಗೆ ಟಿಕೆಟ್‌ ನೀಡಬೇಕು. ಇದು ಜನರ ಅಭಿಲಾಶೆ ಕೂಡ. ಆದರೆ ಇದಕ್ಕೆ ವ್ಯತಿರಿಕ್ತವಾದ ಬೆಳವಣಿಗೆಗಳು ತೆರೆಮರೆಯಲ್ಲೆ ಮೂರು ಪಕ್ಷಗಳಲ್ಲಿ ನಡೆಯುತ್ತಿವೆ.
ಪ್ರಭಾವಿ ರಾಜಕಾರಣಿಗಳು ತಮ ಪಕ್ಷದ ಮುಖಂಡರನ್ನು ಭೇಟಿಯಾಗಿ ತಮ ಕುಟುಂಬಗಳ ಸದಸ್ಯರಿಗೆ ಟಿಕೆಟ್‌ ಕೊಡುವಂತೆ ನಾಯಕರ ಮೇಲೆ ಒತ್ತಡವನ್ನು ಹಾಕುತ್ತಿದ್ದಾರೆ.

ಬಿಜೆಪಿಯಿಂದ ವಂಶಪಾರಂಪರ್ಯ ಆಡಳಿತದ ಆರೋಪವನ್ನು ನಿರಂತರವಾಗಿ ಎದುರಿಸುತ್ತಲೇ ಬಂದಿರುವ ಕಾಂಗ್ರೆಸ್‌‍, ಈಗಾಗಲೇ ಚನ್ನಪಟ್ಟಣ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ತನ್ನ ನಾಯಕರ ಸಂಬಂಧಿಕರನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿದೆ.

ಎಲ್ಲಕ್ಕಿಂತ ವಿಶೇಷವಾಗಿ ಚನ್ನಪಟ್ಟಣ ಕ್ಷೇತ್ರವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದರಿಂದ ಅಲ್ಲಿ ತಾವೇ ಅಭ್ಯರ್ಥಿ ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು. ಆದರೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಲ್ಲೀಗಾಗಲೇ ಅವರ ಸಹೋದರ ಡಿ.ಕೆ ಸುರೇಶ್‌ ಅವರ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿದೆ.

ಅಲ್ಲಿಗೆ ಕಾಂಗ್ರೆಸ್‌‍ ಟಿಕೆಟ್‌ ಹಂಚುವ ಅಧಿಕಾರ ಹೊಂದಿರುವ ಡಿಕೆಶಿಯವರು ತಮ ಸಹೋದರ ಡಿ.ಕೆ.ಸುರೇಶ್‌ಗೆ ಟಿಕೆಟ್‌ ಬಹುತೇಕ ನಿಗದಿಯಾದಂತೆ ಎಂದು ಹೇಳಲಾಗುತ್ತಿದೆ. ಇದೇ ವರ್ಷ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌‍ ಟಿಕೆಟ್‌ ಮೂಲಕ ಸ್ಪರ್ಧಿಸಿದ್ದ ಡಿಕೆ ಸುರೇಶ್‌ ಅವರು, ಡಾ.ಮಂಜುನಾಥ್‌ ಅವರ ವಿರುದ್ಧ ಸೋಲು ಕಂಡಿದ್ದರು. ಅವರಿಗೆ ರಾಜಕೀಯ ನೆಲೆಯನ್ನು ಮತ್ತೆ ಕಲ್ಪಿಸುವ ಉದ್ದೇಶದಿಂದ ಚನ್ನಪಟ್ಟಣದಲ್ಲಿ ಅವರನ್ನೇ ನಿಲ್ಲಿಸುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.

ಅತ್ತ, ಬಳ್ಳಾರಿಯ ಹಾಲಿ ಸಂಸದ ಇ.ವಿ. ತುಕಾರಾಂ ಅವರಿಂದ ತೆರವಾಗಿರುವ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ತುಕಾರಾಂ ಅವರ ಮನೆ ಸದಸ್ಯರಿಗೆ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ ಎಂದು ಆಂತರಿಕ ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆ ವೇಳೆ ತುಕಾರಾಂ ಅವರನ್ನು ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಕೇಳಿದಾಗ ಅವರು ಒಪ್ಪಿರಲಿಲ್ಲ. ಆಗ ಅವರು ಸಂಡೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಕೇವಲ ಕೆಲವೇ ತಿಂಗಳುಗಳಾಗಿತ್ತಷ್ಟೆ. ಆದರೂ, ಕಾಂಗ್ರೆಸ್‌‍ ಅವರ ಮನವೊಲಿಸುವಲ್ಲಿ ಸಫಲವಾಗಿತ್ತು. ಅದರ ಋಣ ಸಂದಾಯಕ್ಕಾಗಿ ತುಕಾರಾಂ ಅವರ ಪುತ್ರಿ ಸೌಪರ್ಣಿಕಾ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಆಂತರಿಕವಾಗಿ ಮಾತುಕತೆಗಳು ಸಾಗಿವೆ. ಅಲ್ಲಿಗೆ, ಸಂಡೂರಿನಲ್ಲಿಯೂ ಕಾಂಗ್ರೆಸ್‌‍ ವಂಶಪಾರಂಪರ್ಯ ರಾಜಕೀಯಕ್ಕೆ ನಾಂದಿ ಹಾಡಲಾರಂಭಿಸಿದೆ.

ಜೆಡಿಎಸ್‌‍ ನಲ್ಲೂ ಅದೇ ಟ್ರೆಂಡ್:
ಕೌಟುಂಬಿಕ ರಾಜಕಾರಣದ ಟೀಕೆಗಳನ್ನು ಪದೇ ಪದೇ ಎದುರಿಸುತ್ತಿರುವ ಜೆಡಿಎಸ್‌‍ ಈಗಾಗಲೇ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಮೂರು ಉಪ ಚುನಾವಣೆಗಳಲ್ಲಿ ಒಂದು ಕ್ಷೇತ್ರವನ್ನು ಮೈತ್ರಿಯಡಿ ಅದು ಪಡೆಯಬಹುದು. ಆ ಕ್ಷೇತ್ರ ಹಳೇ ಮೈಸೂರು ಭಾಗದ ಚನ್ನಪಟ್ಟಣವೇ ಆಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಲ್ಲಿ ಮೈತ್ರಿ ಟಿಕೆಟ್‌ಗಾಗಿ ಅಲ್ಲಿನ ಬಿಜೆಪಿಯ ನಾಯಕ ಸಿ.ಪಿ.ಯೋಗೇಶ್ವರ್‌ ಅವರು ಪ್ರಯತ್ನಿಸುತ್ತಿದ್ದಾರೆ, ಅವರು ಸಹ ಟಿಕೆಟ್‌ಗಾಗಿ ಏನೆಲ್ಲಾ ಪ್ರಯತ್ನ ಮಾಡಬೇಕೋ ಅದೆಲ್ಲವನ್ನೂ ಮಾಡಿ ಈಗ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಆದರೆ, ಮೈತ್ರಿ ಅಡಿಯಲ್ಲಿ ಚನ್ನಪಟ್ಟಣದಲ್ಲಿ ತಮ ಪುತ್ರ ನಿಖಿಲ್‌ ಕುಮಾರಸ್ವಾಮಿಯವರನ್ನು ಇಳಿಸಲು ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ನಿರ್ಧರಿಸಿದ್ದು, ಅವರ ಮಾತಿಗೆ ಬಿಜೆಪಿ ಹೈಕಮಾಂಡ್‌ ಹುಂ ಎಂದರೆ, ಚನ್ನಪಟ್ಟಣದಲ್ಲಿ ನಿಖಿಲ್‌ ಅವರೇ ಮೈತ್ರಿ ಅಭ್ಯರ್ಥಿಯಾಗಲಿದ್ದಾರೆ. ಇದರಿಂದ ಜೆಡಿಎಸ್‌‍ ಕೂಡ ಚನ್ನಪಟ್ಟಣದಲ್ಲಿ ವಂಶಪಾರಂಪರ್ಯ ರಾಜಕಾರಣಕ್ಕೆ ಮಣೆ ಹಾಕಿದಂತಾಗುತ್ತದೆ.

ಇನ್ನು ಬಿಜೆಪಿಗೆ ಮೈತ್ರಿಯಡಿ ಎರಡು ಕ್ಷೇತ್ರಗಳು ಬರುವ ಸಾಧ್ಯತೆಯಿದೆ. ಅವುಗಳೆಂದರೆ, ಸಂಡೂರು ಹಾಗೂ ಶಿಗ್ಗಾಂವಿ. ಬಳ್ಳಾರಿಯ ಸಂಡೂರಿನಲ್ಲಿ ಮಾಜಿ ಸಚಿವ ಶ್ರೀರಾಮುಲು ಅಥವಾ ಕಳೆದ ಬಾರಿ ಸೋತಿದ್ದ ಶಿಲ್ಪಾ ಅವರನ್ನೇ ಬಿಜೆಪಿ ಕಣಕ್ಕಿಳಿಸಬಹುದು. ಆದರೆ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮಾಯಿ ಪುತ್ರ ಭರತ್‌ ಬೊಮಾಯಿಯವರಿಗೆ ಟಿಕೆಟ್‌ ಕೊಡುವಂತೆ ಅಲ್ಲಿನ ಕೆಲವು ಬಿಜೆಪಿ ನಾಯಕರು ಕೇಳುತ್ತಿದ್ದಾರೆ.

ಭರತ್‌ಗೆ ಟಿಕೆಟ್‌ ಕೊಡಿಸುವ ಇರಾದೆ ತಮಗಿಲ್ಲ ಎಂದು ಬೊಮಾಯಿ ಬಹಿರಂಗವಾಗಿ ಹೇಳಿದ್ದಾದರೂ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ತಮ ಹೇಳಿಕೆಯನ್ನು ಬದಲಾಯಿಸುವ ಸಾಧ್ಯತೆಗಳಿವೆ. ಆದರೆ, ಅಲ್ಲಿ ಮಾಜಿ ಸಚಿವ ಮುರುಗೇಶ್‌ ನಿರಾಣಿಯವರೂ ಕಣ್ಣಿಟ್ಟಿದ್ದಾರೆ. ಆದರೆ, ಕಡೆಗೆ ಅಲ್ಲಿ ಭರತ್‌ ಬೊಮಾಯಿಯವರಿಗೆ ಟಿಕೆಟ್‌ ಕೊಟ್ಟರೆ, ಶಿಕಾರಿಪುರದಲ್ಲಿ ಮಾಡಿದ ಹಾಗೆ ಮತ್ತೊಬ್ಬ ಮಾಜಿ ಸಿಎಂ ಕುಟುಂಬಕ್ಕೆ ಅವರ ಕ್ಷೇತ್ರದಲ್ಲಿ ಟಿಕೆಟ್‌ ಕೊಟ್ಟಂತಾಗುತ್ತದೆ.

RELATED ARTICLES

Latest News