Saturday, June 22, 2024
Homeರಾಜಕೀಯಶಿವಮೊಗ್ಗದಲ್ಲಿ ಯಡಿಯೂರಪ್ಪ ಫ್ಯಾಮಿಲಿ Vs ಬಂಗಾರಪ್ಪ ಫ್ಯಾಮಿಲಿ ಕದನ ಕುತೂಹಲ

ಶಿವಮೊಗ್ಗದಲ್ಲಿ ಯಡಿಯೂರಪ್ಪ ಫ್ಯಾಮಿಲಿ Vs ಬಂಗಾರಪ್ಪ ಫ್ಯಾಮಿಲಿ ಕದನ ಕುತೂಹಲ

*ರವೀಂದ್ರ ವೈ.ಎಸ್.

ಈ ಬಾರಿ ರಾಜ್ಯದಲ್ಲಿ ಅತ್ಯಂತ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತನೆಯಾಗಿರುವ ಕ್ಷೇತ್ರವೆಂದರೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಲೋಕಸಭಾ ಕ್ಷೇತ್ರ..! ಕ್ಷೇತ್ರವು ಇಬ್ಬರು ಮಾಜಿ ಮುಖ್ಯಮಂತ್ರಿ ಕುಟುಂಬಗಳ ಪ್ರತಿಷ್ಠೆಯ ಕಣವೆಂದರೆ ತಪ್ಪಾಗಲಾರದು. ಕಳೆದ ಮೂರ್ನಾಲ್ಕು ಚುನಾವಣೆಗಳಿಂದಲೂ ಶಿವಮೊಗ್ಗವೆಂದರೆ ಬಿ.ಎಸ್.ಯಡಿಯೂರಪ್ಪ ವರ್ಸಸ್ ಬಂಗಾರಪ್ಪ ಫ್ಯಾಮಿಲಿ ನಡುವಿನ ಕದನವಾಗಿಯೇ ಗಮನ ಸೆಳೆಯುತ್ತಿದೆ. ಆದರೆ ಯಡಿಯೂರಪ್ಪನವರೇ ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ರಾಜ್ಕುಮಾರ್ ಅವರ ಜೇಷ್ಠ ಪುತ್ರ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಅವರು ಸ್ರ್ಪಧಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ, ಜೊತೆಗೆ ಸಹೋದರ ಹಾಗೂ ಸಚಿವ ಮಧು ಬಂಗಾರಪ್ಪ ಅವರಿಗೆ ಗೆಲ್ಲಿಸಿಕೊಡುವ ಅನಿವಾರ್ಯತೆ ಎದುರಾಗಿದೆ. ಹಾಲಿ ಸಂಸದ ಬಿ ವೈ ರಾಘವೇಂದ್ರ ಅವರು ಬಿಜೆಪಿಯ ಅಗ್ರಗಣ್ಯ ನಾಯಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ. ಜೊತೆಗೆ ಹಾಲಿ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ .ವಿಜಯೇಂದ್ರ ಅವರಿಗೆ ತಮ್ಮ ತವರು ಜಿಲ್ಲೆಯಲ್ಲಿ ಸಹೋದರರನ್ನು ಗೆಲ್ಲಿಸಿಕೊಡದಿದ್ದರೆ, ಕುರ್ಚಿಗೆ ಕಂಠಕ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.!

ಈ ಬಾರಿ ಒಂದು ಕಾಲದಲ್ಲಿ ಜಿಲ್ಲೆಯಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕುವಲ್ಲಿ ಯಡಿಯೂರಪ್ಪ ಅವರ ಹೆಗಲಿಗೆ ಹೆಗಲು ಕೊಟ್ಟಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಂಡಾಯ ಅಭ್ಯರ್ಥಿಯಾಗಿರುವುದು ಬಿಜೆಪಿ ಅಧಿಕೃತ ಅಭ್ಯರ್ಥಿಗೆ ನುಂಗಲಾರದ ತುತ್ತಾಗಿದೆ. ಒಂದು ವೇಳೆ ಕೊನೆ ಕ್ಷಣದವರೆಗೂ ಈಗಾಗಲೇ ಹೇಳಿರುವ ಮಾತಿನಂತೆ ಈಶ್ವರಪ್ಪ ನಡೆದುಕೊಂಡರೆ. ಕಮಲ ಪಕ್ಷ ಗೆಲುವಿಗೆ ಭಾರೀ ಹರಸಾಹಸ ಮಾಡಬೇಕಾಗುತ್ತದೆ.

ಹಾವೇರಿಯಲ್ಲಿ ಪುತ್ರನಿಗೆ ಟಿಕೆಟ್ ತಪ್ಪಿದ ಕಾರಣಕ್ಕೆ ತಮ್ಮ ಪುತ್ರನಿಗೆ ಟಿಕೆಟ್ ತಪ್ಪಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಸಹ ಗೆಲ್ಲಬಾರದು ಎಂದು ಕೆ.ಎಸ್.ಈಶ್ವರಪ್ಪ ಹಠಕ್ಕೆ ಬಿದ್ದಿದ್ದಾರೆ. ಯಡಿಯೂರಪ್ಪ ಕುಟುಂಬಕ್ಕೆ ಸರಿಯಾದ ಪಾಠ ಕಲಿಸುವ ಪಣ ತೊಟ್ಟು ಪ್ರಚಾರಕ್ಕೆ ಇಳಿದಿದ್ದಾರೆ. ಈಶ್ವರಪ್ಪ ಬಂಡಾಯ ಘೋಷಿಸುತ್ತಿದ್ದಂತೆ ಪಕ್ಷದೊಳಗಿನ ಯಡಿಯೂರಪ್ಪ ವಿರೋಧಿಗಳು ಸಕ್ರಿಯರಾಗಿದ್ದಾರೆ. ಬಹ ಳಷ್ಟು ಮುಖಂಡರು ಮತ್ತು ಕಾರ್ಯ ಕರ್ತರು ಬಹಿರಂಗವಾಗಿ ಗುರುತಿಸಿ ಕೊಳ್ಳಲು ಸಾಧ್ಯವಾಗದಿದ್ದರೂ ಆಂತರಿಕ ಪ್ರಚಾರ ನಡೆಸುವ ಭರವಸೆ ನೀಡಿದ್ದಾರೆ. ಆ ಮೂಲಕ ಬಿಜೆಪಿಯಲ್ಲಿದ್ದುಕೊಂಡೆ ಪಕ್ಷದ ಅಭ್ಯರ್ಥಿಗೆ ಪೆಟ್ಟು ನೀಡಲು ಒಳಸಂಚು ನಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ. ಯಡಿಯೂರಪ್ಪ, ವಿಜಯೇಂದ್ರ ಪ್ರಭಾವ, ರಾಘವೇಂದ್ರ ಅವರಿಗಿರುವ ಕ್ಷೇತ್ರದ ಸಂಪರ್ಕ ಮತ್ತು ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರೂ ಆಗಿರುವ ಮಧು ಬಂಗಾರಪ್ಪನವರ ಸಂಘಟನಾ ಚತುರತೆ- ಎಲ್ಲವೂ ಸೇರಿ ಚುನಾವಣಾ ಕಣ ರಂಗೇರುವ ಸಾಧ್ಯತೆ ಇದೆ.

ಕರ್ನಾಟಕದ ರಾಜಕೀಯದಲ್ಲಿ ಬಂಗಾರಪ್ಪ ಮತ್ತು ಯಡಿಯೂರಪ್ಪ ಇಬ್ಬರೂ ಬಗರ್ ಹುಕುಂ ಜಮೀನು, ಕಾರ್ಮಿಕರು, ಶರಾವತಿ ನದಿ ತೆರವು ಹಾಗೂ ಜಿಲ್ಲೆಯ ಒಣಪ್ರದೇಶದಳಿಗೆ ನೀರಾವರಿಯಂತಹ ಜನರ ಸಮಸ್ಯೆಗಳಿಗಾಗಿ ಹೋರಾಡಿ ರಾಜ್ಯ ರಾಜಕಾರಣಕ್ಕೆ ಬಂದವರು. ಇಬ್ಬರೂ ಜಿಲ್ಲೆಯ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ಈಗ ಎರಡು ಕುಟುಂಬಗಳ ಎರಡನೇ ತಲೆಮಾರಿನವರು ಮುಖಾಮುಖಿಯಾಗುತ್ತಿರುವುದು ಕುತೂಹಲ ಮೂಡಿಸಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿವಮೊಗ್ಗ ನಗರ (ಬಿಜೆಪಿ), ಶಿವಮೊಗ್ಗ ಗ್ರಾಮಾಂತರ (ಜೆಡಿಎಸ್), ಭದ್ರಾವತಿ (ಕಾಂಗ್ರೆಸ್), ಸೊರಬ (ಕಾಂಗ್ರೆಸ್), ಸಾಗರ (ಕಾಂಗ್ರೆಸ್), ತೀರ್ಥಹಳ್ಳಿ (ಬಿಜೆಪಿ), ಶಿಕಾರಿಪುರ (ಬಿಜೆಪಿ), ಉಡುಪಿ ಜಿಲ್ಲೆಯ ಬೈಂದೂರು (ಬಿಜೆಪಿ) ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ವರು ಬಿಜೆಪಿ ಶಾಸಕರು, ಮೂವರು ಕಾಂಗ್ರೆಸ್ ಶಾಸಕರು, ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಹೀಗಾಗಿ ಎರಡು ಪಕ್ಷಗಳ ನಡುವೆ ಸಮಬಲದ ಸರ್ಧೆ ಕಂಡು ಬರುತ್ತಿದೆ.

ಲಿಂಗಾಯತರು, ಈಡಿಗರು (ಬಿಲ್ಲವ/ದೀವರ/ನಾಮಧಾರಿ) ಹೆಚ್ಚಿರುವ ಶಿವಮೊಗ್ಗದಲ್ಲಿ ಗೌಡರು, ಇತರ ಹಿಂದುಳಿದ ಜಾತಿಗಳು, ದಲಿತ ಸಮುದಾಯಗಳು, ಮುಸ್ಲಿಮರೂ ಗಣನೀಯವಾಗಿ ಇದ್ದಾರೆ. ಈಡಿಗರು ಮತ್ತು ಲಿಂಗಾಯತ ಕ್ಯಾಂಡಿಟೇಟ್ಗಳ ನಡುವೆಯೇ ಕದನ ಏರ್ಪಡುತ್ತಾ ಬಂದಿದೆ.ಈ ಚುನಾವಣೆಯಲ್ಲಿ ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಗೆದ್ದು ಸಚಿವರೂ ಆಗಿರುವ ಮಧು ಬಂಗಾರಪ್ಪನವರಿಗೆ ಇದು ಪ್ರತಿಷ್ಠೆಯ ಚುನಾವಣೆಯೂ ಹೌದು. ಮಲೆನಾಡು, ಕರಾವಳಿ ಭಾಗದಲ್ಲಿ ಕೇಸರಿ ಹಿಡಿತಕ್ಕೆ ಸಿಲುಕಿರುವ ಬಿಲ್ಲವ/ನಾಮಧಾರಿ/ಈಡಿಗ/ದೀವರು ಸಮುದಾಯವನ್ನು ಮತ್ತೆ ಕಾಂಗ್ರೆಸ್ ಪಾಳಯಕ್ಕೆ ಮಧು ಬಂಗಾರಪ್ಪ ತರುತ್ತಾರೆಯೇ ಎಂಬುದು ಸದ್ಯದ ಕುತೂಹಲ.

ಕದನದ ನೆಲ ಶಿವಮೊಗ್ಗ:
2008ರಲ್ಲಿ ಲೋಕಸಭಾ ಕ್ಷೇತ್ರ ಪುನರ್ ರಚನೆಯಾಗಿತ್ತು. ಶಿವಮೊಗ್ಗದ ಪರಿ ಬದಲಾಗಿ, ಚನ್ನಗಿರಿ ಮತ್ತು ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳನ್ನು ದಾವಣಗೆರೆ ಲೋಕಸಭೆಗೆ ಸೇರಿಸಲಾಯಿತು. ಉಡುಪಿಯ ಬೈಂದೂರು ಶಿವಮೊಗ್ಗಕ್ಕೆ ಸೇರಿಕೊಂಡಿತು.2009ರ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ- ಬಂಗಾರಪ್ಪ ನಡುವೆ ಪ್ರತಿಷ್ಠೆ ಏರ್ಪಟ್ಟಿತ್ತು.ಅಭ್ಯರ್ಥಿ ರಾಘವೇಂದ್ರರಾದರೂ ಯಡಿಯೂರಪ್ಪನವರೇ ನಿಜವಾದ ಸ್ರ್ಪಧಿಯಾಗಿದ್ದರು. ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಬಂಗಾರಪ್ಪನವರು ಕ್ಷೇತ್ರವನ್ನು ಸುತ್ತಲಿಲ್ಲ. ಆರ್ಥಿಕವಾಗಿಯೂ ದುರ್ಬಲವಾಗಿದ್ದರು. ಯಡಿಯೂರಪ್ಪನವರ ಹಣಬಲದ ಮುಂದೆ ಬಂಗಾರಪ್ಪ ಕಂಗಾಲಾದರೆಂದೇ ರಾಜಕೀಯ ವಿಶ್ಲೇಷಕರು ಇಂದಿಗೂ ಹೇಳುತ್ತಾರೆ. 52,893 ಮತಗಳ ಅಂತರದಲ್ಲಿ ರಾಘವೇಂದ್ರ ವಿರುದ್ಧ ಬಂಗಾರಪ್ಪ ಸೋಲು ಕಂಡರು.

2013ರ ಚುನಾವಣೆ ಸಂದರ್ಭದಲ್ಲಿ ಕೆಜೆಪಿ ಕಟ್ಟಿ, ಮತ್ತೆ 2014ರ ಲೋಕಸಭೆ ವೇಳೆಗೆ ಬಿಜೆಪಿ ಸೇರಿದ್ದ ಬಿಎಸ್ವೈ, ಶಿವಮೊಗ್ಗದಿಂದ ಸ್ರ್ಪಧಿಸಿದರು. ಬಂಗಾರಪ್ಪನವರು ನಿಧನರಾದ ಬಳಿಕ, ತಂದೆಯ ಸೋಲಿನ ಸೇಡು ತೀರಿಸಿಕೊಳ್ಳಲು ಮಧು ಬಂಗಾರಪ್ಪ ಬಯಸಿದ್ದರು. ತಮ್ಮ ಸಹೋದರಿ ಗೀತಾರನ್ನು ಜೆಡಿಎಸ್ನಿಂದ ಕಣಕ್ಕಿಳಿಸಿದರು. ಆದರೆ ಯಡಿಯೂರಪ್ಪನವರ ಎದುರು ಹೀನಾಯವಾಗಿ ಸೋಲಬೇಕಾಯಿತು. ಮೂರನೇ ಸ್ಥಾನಕ್ಕೆ ಗೀತಾ ಅವರು ಕುಸಿದರು. ಮೋದಿ ಅಲೆಯಲ್ಲಿ ಯಡಿಯೂರಪ್ಪ ಗೆದ್ದು ಬೀಗಿದರು.
2018ರ ವಿಧಾನಸಭಾ ಚುನಾವಣೆ ವೇಳೆಗೆ ಯಡಿಯೂರಪ್ಪನವರು ಸಿಎಂ ಆಸೆ ಹೊತ್ತರು.

ಹೀಗಾಗಿ ಶಿಕಾರಿಪುರದಲ್ಲಿ ಸ್ರ್ಪಧಿಸಿದರು. ಬಿಜೆಪಿ ದೊಡ್ಡ ಪಕ್ಷವಾಗಿ ಹೊಮ್ಮಿದರೂ ಅಧಿಕಾರ ಹಿಡಿಯಲಿಲ್ಲ. ಲೋಕಸಭೆ ಕ್ಷೇತ್ರ ತೆರವಾದಾಗ ತಮ್ಮ ಮಗ ರಾಘವೇಂದ್ರರನ್ನು ಉಪಚುನಾವಣೆಯಲ್ಲಿ ನಿಲ್ಲಿಸಿದರು. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ¸ರ್ಕಾರದ ಮಧು ಬಂಗಾರಪ್ಪ ಸ್ಪರ್ಧಿಸಿದರೂ ಬಂಗಾರಪ್ಪ ಫ್ಯಾಮಿಲಿಗೆ ಮತ್ತೆ ಸೋಲಾಯಿತು. 52,148 ಮತಗಳ ಅಂತರದಲ್ಲಿ ರಾಘವೇಂದ್ರ ಗೆದ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ರಾಘವೇಂದ್ರ ಮತ್ತು ಜೆಡಿಎಸ್-ಕಾಂಗ್ರೆಸ್ನ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಎದುರಾದರು. ಮೋದಿ ಅಲೆಯಲ್ಲಿ 2,23,360 ಮತಗಳ ಅಂತರದಲ್ಲಿ ಸುಲಭವಾಗಿ ರಾಘವೇಂದ್ರ ಗೆದ್ದಿದ್ದರು.

ಕಾಂಗ್ರೆಸ್ಗೆ ಪರಿಷತ್ ಪೆಟ್ಟು :
ಯಾರೂ ನಿರೀಕ್ಷೆ ಮಾಡಿರದ ಬಿಜೆಪಿಯಲ್ಲಿನ ಬೆಳವಣಿಗೆಯು ಕಾಂಗ್ರೆಸ್ ಮುಖಂಡರಲ್ಲಿ ಮಂದಹಾಸ ಬೀರುವಂತೆ ಮಾಡಿತ್ತು. ಆದರೆ, ಕಾಂಗ್ರೆಸ್ಗೂ ಈಗ ಅಂಥದ್ದೆ ಒಳ ಹೊಡೆತ ಬಿದ್ದಿದೆ. ಲೋಕಸಭೆ ಚುನಾವಣೆ ಬಳಿಕ ಜೂನ್ ಅಂತ್ಯದಲ್ಲಿನಡೆಯುವ ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಮಾಜಿ ಎಂಪಿ ಆಯನೂರು ಮಂಜುನಾಥ್ರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

ಪದವೀಧರ ಮತ್ತು ಶಿಕ್ಷಕರ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಿಗೆ ಆರು ತಿಂಗಳ ಹಿಂದೆಯೆ ಅಭ್ಯರ್ಥಿಗಳನ್ನು ಘೋಷಿಸಿ ಶಿವಮೊಗ್ಗವನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ವೀರಶೈವ ಲಿಂಗಾಯತ ಸಮುದಾಯದ ಆಯನೂರು ಮಂಜುನಾಥ್ಗೆ ಟಿಕೆಟ್ ಘೋಷಿಸುವು ದರಿಂದ ಕಾಂಗ್ರೆಸ್ಗೆ ವರವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕೆಪಿಸಿಸಿ ಮುಖಂಡರು ಎಐಸಿಸಿ ಮೇಲೆ ಒತ್ತಡ ಹಾಕಿ ಮೊನ್ನೆ ಸಂಜೆ ದಿಢೀರನೆ ಟಿಕೆಟ್ ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಿಕೆಟ್ ಘೋಷಣೆಯು ಕೆಪಿಸಿಸಿ ಲೆಕ್ಕಾಚಾರವನ್ನೇ ಉಲ್ಟಾಪಲ್ಟಾ ಮಾಡುವ ಆತಂಕ ಮೂಡಿಸಿದೆ. ಆಯನೂರ್ಗೆ ಟಿಕೆಟ್ ಘೋಷಿಸುವುದರಿಂದ ಯಾವ ಸಮುದಾಯದ ಮತಗಳು ಕಾಂಗ್ರೆಸ್ ಪರ ವಾಲುತ್ತವೆ ಎಂದು ಲೆಕ್ಕಾಚಾರ ಹಾಕಿದ್ದರೋ ಅದೇ ಸಮುದಾಯದ ಕಾಂಗ್ರೆಸ್ ಮುಖಂಡರು ಈಗ ಮುನಿಸಿಕೊಂಡಿ ದ್ದಾರೆ.

ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವೀರಶೈವ ಸಮಾಜದ ಎಸ್.ಪಿ. ದಿನೇಶ್ ಈ ಬಾರಿ ಸಹ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಕ್ಕೇ ಸಿಗುವ ವಿಶ್ವಾಸದಲ್ಲಿಅವರು ಐದು ಜಿಲ್ಲೆ ಗಳಲ್ಲಿ ಮತದಾರರನ್ನು ನೋಂದಾಯಿಸಿದ್ದರು. ಅವರ ಅಸಮಾಧಾನವು ಚುನಾವಣೆ ಸಂದರ್ಭದಲ್ಲಿ ವಿರೋಗಳಿಗೆ ಮತವಾಗಿ ಪರಿವರ್ತನೆಯಾದಲ್ಲಿ ಅಚ್ಚರಿ ಇಲ್ಲ.

ಕ್ಷೇತ್ರ -ಶಿವಮೊಗ್ಗ
ಪ್ರಮುಖ ಅಭ್ಯರ್ಥಿಗಳು
ಬಿ.ವೈ.ರಾಘವೇಂದ್ರ-ಬಿಜೆಪಿ
ಗೀತಾ ಶಿವರಾಜ್ ಕುಮಾರ್-ಕಾಂಗ್ರೆಸ್
ಕೆ.ಎಸ್.ಈಶ್ವರಪ್ಪ -(ಬಂಡಾಯ -ಅಭ್ಯರ್ಥಿಯಾಗಿಸ್ಪರ್ಧಿಸಿದರೆ)
ವಿಧಾನಸಭಾ ಕ್ಷೇತ್ರಗಳು
ಶಿವಮೊಗ್ಗ, ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ , ಶಿಕಾರಿಪುರ, ಸಾಗರ,
ಹೊಸನಗರ, ಬೈಂದೂರು

ಒಟ್ಟು ಮತದಾರರು -17,29,901
ಪುರುಷರು- 8,52,107
ಮಹಿಳೆಯರು – 8,77,761
ವಿಧಾನಸಭಾ ಚುನಾವಣೆ ಬಲಾಬಲ
ಬಿಜೆಪಿ – 4, ಕಾಂಗ್ರೆಸ್-3, ಜೆಡಿಎಸ್-1

RELATED ARTICLES

Latest News