Wednesday, November 27, 2024
Homeರಾಜ್ಯಗಮನಕ್ಕೆ ತರದೆಯೇ ರೈತರ ಲಕ್ಷಾಂತರ ಅರ್ಜಿ ತಿರಸ್ಕಾರ : ಸುನೀಲ್ ಕಮಾರ್ ಆಕ್ರೋಶ

ಗಮನಕ್ಕೆ ತರದೆಯೇ ರೈತರ ಲಕ್ಷಾಂತರ ಅರ್ಜಿ ತಿರಸ್ಕಾರ : ಸುನೀಲ್ ಕಮಾರ್ ಆಕ್ರೋಶ

farmers's applications rejected without being brought to their attention

ಬೆಂಗಳೂರು,ನ.27- ಅಕ್ರಮ- ಸಕ್ರಮ ( ಬಗರ್ ಹುಕುಂ ) ಸಮಿತಿಯ ಅವಗಾಹನೆಗೆ ತರದೇ ಕಂದಾಯ ಇಲಾಖೆ ಅಧಿಕಾರಿಗಳು ಲಕ್ಷಾಂತರ ಅರ್ಜಿ ತಿರಸ್ಕರಿಸಿರುವುದು ಸರ್ಕಾರದ ರೈತ ವಿರೋಧಿ ಕ್ರಮ ಎಂದು ಮಾಜಿ ಸಚಿವ ವಿ.ಸುನೀಲ್ಕುಮಾರ್ ಆರೋಪಿಸಿದ್ದಾರೆ.

ಮಲೆನಾಡು, ಕರಾವಳಿ ಭಾಗಗಳು ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರ ಶಾಸಕರ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚನೆ ಮಾಡಲಾಗಿದೆ. ಅರ್ಜಿಯ ಅಂಗೀಕಾರ ಅಥವಾ ತಿರಸ್ಕಾರ ಈ ಸಮಿತಿಯಲ್ಲೇ ಆಗಬೇಕು. ಆದರೆ ಅಧಿಕಾರಿಗಳು ಈ ವಿಚಾರವನ್ನು ಸಭೆಯಲ್ಲಿ ಚರ್ಚಿಸದೇ ಏಕಪಕ್ಷೀಯವಾಗಿ ನಿರಾಕರಿಸುತ್ತಿರುವುದು ಸಂವಿಧಾನ ಬಾಹಿರ ಎಂದು ಆರೋಪಿಸಿದ್ದಾರೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡರು ಬಗರ್ ಹುಕುಂ ವಿಚಾರ ಇತ್ಯರ್ಥಗೊಳಿಸಲು ಬದ್ಧ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಸಚಿವರ ಸೂಚನೆಯ ಮೇರೆಗೆ ಅರ್ಜಿ ಕೈ ಬಿಡಲಾಗಿದೆ ಎಂದು ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಮೇಲ್ಪಟ್ಟು ಅರ್ಜಿ ಕೈ ಬಿಡುವಂತೆ ಗುರಿ ನಿಗದಿ ಮಾಡಲಾಗಿದೆ ಎಂಬ ಮಾತುಗಳು ಕೇಳು ಬಂದಿದೆ. ಸರ್ಕಾರ ಈ ಬಗ್ಗೆ ತಕ್ಷಣ ಸ್ಷಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹಲವು ವರ್ಷಗಳಿಂದ ಈ ಜಾಗದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರು ಇದರಿಂದ ಕಂಗಾಲಾಗಿದ್ದಾರೆ. ಅರ್ಜಿ ತಿರಸ್ಕರಿಸುವಾಗ ಅಧಿಕಾರಿಗಳು ರೈತರ ಹೇಳಿಕೆಯನ್ನೂ ದಾಖಲಿಸಿಕೊಳ್ಳುತ್ತಿಲ್ಲ. ಇಂಥ ಏಕಪಕ್ಷೀಯ ನಡವಳಿಕೆ ತಕ್ಷಣ ನಿಲ್ಲಿಸಿ ರೈತರಿಗೆ ನ್ಯಾಯ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Latest News