Monday, September 16, 2024
Homeರಾಜ್ಯಹಬ್ಬಕ್ಕೆ ಖಾಸಗಿ ಬಸ್‌ಗಳು ಪ್ರಯಾಣ ದರ ಹೆಚ್ಚಿಸಿದರೆ ಪರವಾನಗಿ ರದ್ದು :ರಾಮಲಿಂಗಾರೆಡ್ಡಿ

ಹಬ್ಬಕ್ಕೆ ಖಾಸಗಿ ಬಸ್‌ಗಳು ಪ್ರಯಾಣ ದರ ಹೆಚ್ಚಿಸಿದರೆ ಪರವಾನಗಿ ರದ್ದು :ರಾಮಲಿಂಗಾರೆಡ್ಡಿ

ಬೆಂಗಳೂರು,ಆ.30- ಗೌರಿ-ಗಣೇಶ ಸೇರಿದಂತೆ ಇತರ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣದರವನ್ನು ಹೆಚ್ಚಳ ಮಾಡಿದರೆ ಖಾಸಗಿ ಬಸ್‌‍ಗಳ ರಹದಾರಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ಈ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಮಾರ್ಗದರ್ಶನ ನೀಡಿರುವ ಸಚಿವರು, ಖಾಸಗಿ ಬಸ್‌‍ಗಳ ಪ್ರಯಾಣದರದಲ್ಲಿ ನಿಗಾ ವಹಿಸುವಂತೆ ತಾಕೀತು ಮಾಡಿದ್ದಾರೆ.

ಸಾಮಾನ್ಯವಾಗಿ ಖಾಸಗಿ ಬಸ್‌‍ಗಳು ಗೌರಿ-ಗಣೇಶ, ಯುಗಾದಿ, ನಾಗರಪಂಚಮಿ, ದೀಪಾವಳಿ, ಆಯುಧಪೂಜೆಯಂತಹ ಸಂದರ್ಭಗಳಲ್ಲಿ
ಬಸ್‌‍ ಪ್ರಯಾಣ ದರಗಳನ್ನು ಮೂರರಿಂದ ನಾಲ್ಕು ಪಟ್ಟು ಏರಿಕೆ ಮಾಡಿ ಹಗಲು ದರೋಡೆಗಿಳಿಯುತ್ತವೆ. 15 ದಿನಕ್ಕೂ ಮೊದಲೇ ಟಿಕೆಟ್‌ ಬುಕ್ಕಿಂಗ್‌ ದರ ಏಕಾಏಕಿ ಹೆಚ್ಚಳವಾಗಿರುತ್ತದೆ. ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ದೂರದೂರುಗಳಿಗೆ ಪ್ರಯಾಣಿಸುವವರು ಖಾಸಗಿ ಬಸ್‌‍ಗಳ ಹಗಲು ದರೋಡೆಯಿಂದ ಚಡಪಡಿಕೆಗೊಳಗಾಗುವುದು ಸಾಮಾನ್ಯ.

ಈ ಹಿನ್ನೆಲೆಯಲ್ಲಿ ಈ ಬಾರಿ ಎಚ್ಚೆತ್ತುಕೊಂಡಿರುವ ರಾಜ್ಯಸರ್ಕಾರ ವಾರದ ಮೊದಲೇ ಕಟ್ಟುನಿಟ್ಟಿನ ಸೂಚನೆಗಳನ್ನು ರವಾನಿಸಿದೆ.
ಈ ಹಿಂದಿನ ಸಾಮಾನ್ಯ ದರಕ್ಕಿಂತಲೂ ಅಸಾಮಾನ್ಯವಾಗಿ ಪ್ರಯಾಣದರ ಹೆಚ್ಚಳವಾದರೆ ಸದರಿ ಖಾಸಗಿ ಬಸ್‌‍ಗಳ ಮಾಲಿಕರಿಗೆ ನೋಟೀಸ್‌‍ ಕೊಟ್ಟು ವಿಚಾರಣೆ ನಡೆಸುವಂತೆ ದುರುದ್ದೇಶಪೂರಿತವಾಗಿ ಅಥವಾ ನಿಯಮ ಮೀರಿ ಲಾಭದ ಆಸೆಯಿಂದ ಪ್ರಯಾಣ ದರ ಹೆಚ್ಚಳ ಮಾಡಿದರೆ ಅಂತಹ ಬಸ್‌‍ಗಳ ರಹದಾರಿ(ಪರ್ಮಿಟ್‌)ಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಖಾಸಗಿ ಬಸ್‌‍ಗಳ ಟಿಕೆಟ್‌ ಬುಕ್ಕಿಂಗ್‌, ಆನ್‌ಲೈನ್‌ ಬುಕ್ಕಿಂಗ್‌ ಮೇಲೆ ನಿಗಾ ವಹಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

RELATED ARTICLES

Latest News