Monday, May 6, 2024
Homeಬೆಂಗಳೂರುಬೆಂಗಳೂರಲ್ಲಿ ಅಗ್ನಿ ಅವಘಡ : 2 ಕೋಟಿ ರೂ. ಮೌಲ್ಯದ ಬಟ್ಟೆ, ಬೈಕ್, ಕಾರು ಭಸ್ಮ

ಬೆಂಗಳೂರಲ್ಲಿ ಅಗ್ನಿ ಅವಘಡ : 2 ಕೋಟಿ ರೂ. ಮೌಲ್ಯದ ಬಟ್ಟೆ, ಬೈಕ್, ಕಾರು ಭಸ್ಮ

ಬೆಂಗಳೂರು, ಏ.24- ನಗರದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 2 ಕೋಟಿ ರೂ. ಮೌಲ್ಯದ ಬಟ್ಟೆಗಳು, ಬೈಕ್ಗಳು ಹಾಗೂ ಕಾರು ಭಸ್ಮವಾಗಿವೆ. ನಗರದ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದ ಮಣಿಪಾಲ್ ಕಂಟ್ರಿ ರಸ್ತೆಯಲ್ಲಿರುವ ಸೆಂಟ್ರಿಂಗ್ ಮರಗಳ ಯಾರ್ಡ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.

ಮಧ್ಯರಾತ್ರಿ 12.30ರ ಸುಮಾರಿನಲ್ಲಿ ಸೆಂಟ್ರಿಂಗ್ ಮರಗಳ ಯಾರ್ಡ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಬೆಂಕಿಯ ಕೆನ್ನಾಲಿಗೆ ಪಕ್ಕದ ಗಾರ್ಮೆಂಟ್ಸ್ ಕಟ್ಟಡ ಹಾಗೂ ಅದಕ್ಕೆ ಹೊಂದಿಕೊಂಡಂತಿದ್ದ ಎರಡು ಗ್ಯಾರೇಜುಗಳಿಗೂ ಬೆಂಕಿ ವ್ಯಾಪಿಸಿ ಹೊತ್ತಿ ಉರಿದಿದೆ.

ಬೆಂಕಿಯ ತೀವ್ರತೆಯಿಂದಾಗಿ ಗಾರ್ಮೆಂಟ್ಸ್ನಲ್ಲಿ ಸಂಗ್ರಹಿಸಲಿಡಲಾಗಿದ್ದ ಕೋಟ್ಯಾಂತರ ಮೌಲ್ಯದ ಬ್ರಾಂಡೆಡ್ ಬಟ್ಟೆಗಳು ಸುಟ್ಟು ಭಸ್ಮವಾಗಿದೆ. ಅಲ್ಲದೆ ಈ ಬೆಂಕಿಯ ಜ್ವಾಲೆ ಪಕ್ಕದ ಗ್ಯಾರೇಜುಗಳಿಗೂ ವ್ಯಾಪಿಸಿದ್ದರಿಂದ 40ಕ್ಕೂ ಹೆಚ್ಚು ಬೈಕ್ಗಳು ಹಾಗೂ ಒಂದು ಬಿಎಂಡಬ್ಲ್ಯೂ ಕಾರು ಸುಟ್ಟು ಕರಕಲಾಗಿವೆ.

ಬೆಂಕಿಯ ಮಾಹಿತಿ ತಿಳಿದು ಅಗ್ನಿ ಶಾಮಕ ಸಿಬ್ಬಂದಿ 7 ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿ ಇಂದು ಮಧ್ಯಾಹ್ನ 12 ಗಂಟೆ ವರೆಗೂ ಸತತ ಪರಿಶ್ರಮದಿಂದ ಬೆಂಕಿಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾದರು.
ಅದೃಷ್ಟವಶಾತ್ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಲ್ಲ. ಬೆಂಕಿಯಿಂದಾಗಿ ಸುಮಾರು 2 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಶಾರ್ಟ್ಸಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬೇಗೂರು ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News