Tuesday, July 23, 2024
Homeರಾಜ್ಯಅತ್ತಿಬೆಲೆ ಪಟಾಕಿ ದುರಂತ ಸಿಐಡಿ ತನಿಖೆ : ಸಿಎಂ ಸಿದ್ದರಾಮಯ್ಯ

ಅತ್ತಿಬೆಲೆ ಪಟಾಕಿ ದುರಂತ ಸಿಐಡಿ ತನಿಖೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.8- ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿರುವು ದಲ್ಲದೆ, ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವುದಾಗಿ ಘೋಷಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಂ.ಸಿ.ಸುಧಾಕರ್, ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ಶಾಸಕರಾದ ಶಿವಣ್ಣ, ಎಸ್.ಟಿ.ಸೋಮಶೇಖರ್, ತಮಿಳುನಾಡಿನಕಾಂಗ್ರೆಸ್ ನಾಯಕ ಚಲ್ಲಕುಮಾರ್ ಸೇರಿದಂತೆ ಮತ್ತಿತರರು ಜತೆಗಿದ್ದರು.

ಅಗ್ನಿಶಾಮಕ ದಳದ ಡಿಜಿಪಿ ಕಮಲ್‍ಪಂಥ್, ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು, ಮುಖ್ಯಮಂತ್ರಿಯವರಿಗೆ ಘಟನೆ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಘಟನೆಯ ಪ್ರತಿ ಸ್ಥಳಕ್ಕೂ ಖುದ್ದಾಗಿ ಭೇಟಿ ನೀಡಿದ ಮುಖ್ಯಮಂತ್ರಿಗಳು, ನಷ್ಟದ ಅಂದಾಜುಗಳು ಹಾಗೂ ಇತರ ವಿವರಗಳನ್ನು ಪರಿಶೀಲನೆ ನಡೆಸಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರವಾನಗಿ ಪಡೆದು ಪಟಾಕಿ ಮಾರಾಟ ಮಾಡುವುದು ದೀಪಾವಳಿ ಸಂದರ್ಭದಲ್ಲಿ ಕಂಡುಬರುತ್ತದೆ. ನಿನ್ನೆ 3 ಗಂಟೆ ಸುಮಾರಿನಲ್ಲಿ ಈ ಗೋದಾಮಿನಲ್ಲಿ ಅಗ್ನಿ ದುರಂತ ನಡೆದಿದೆ. ಇದಕ್ಕೆ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಸರಿಯಾದ ಸುರಕ್ಷತಾ ಕ್ರಮ ಮಾಡದಿರುವುದು ಕಾರಣ ಎಂದರು.

ಪ್ಯಾಲೆಸ್ತೇನ್‍ನ ಉಗ್ರರ ನೆರವಿಗೆ ಬಂದ ಇರಾನ್ ಸೇನೆ

ಪಟಾಕಿ ಮಾರಾಟ ಹಾಗೂ ಸಂಗ್ರಹಕ್ಕೆ ಎರಡು ಪರವಾನಗಿಗಳನ್ನು ಪಡೆದಿದ್ದಾರೆ. 2023 ರ ಸೆಪ್ಟೆಂಬರ್ 13 ರಂದು ಒಂದು ಪರವಾನಗಿ ನವೀಕರಣಗೊಂಡಿದ್ದು, ಅದು 2028 ರ ಅಕ್ಟೋಬರ್ 31 ರವರಗೆ ಚಾಲ್ತಿಯಲ್ಲಿರುತ್ತದೆ. ಇನ್ನೊಂದು ಪರವಾನಗಿಯನ್ನು 2021ರ ಜನವರಿ 18 ರಂದು ಪಡೆಯಲಾಗಿದ್ದು, 2026 ರ ಜನವರಿ 28 ರವರೆಗೂ ಚಾಲ್ತಿಯಲ್ಲಿರಲಿದೆ.

ಜಯಮ್ಮ ಅವರಿಗೆ ಸೇರಿದ ಜಾಗವನ್ನು ಬಾಡಿಗೆ ಪಡೆದು ಪಟಾಕಿ ವ್ಯಾಪಾರ ಮಾಡಲಾಗುತ್ತಿತ್ತು. ಮೃತಪಟ್ಟವರು ಕೃಷ್ಣಗಿರಿ, ಧರ್ಮಪುರಿ ಜಿಲ್ಲೆಗೆ ಸೇರಿದವರಾಗಿದ್ದು, ಅವರಲ್ಲಿ ಬಹುತೇಕರು ವಿದ್ಯಾರ್ಥಿಗಳಾಗಿದ್ದಾರೆ. ರಜಾ ಅವಧಿಯಲ್ಲಿ ವಿದ್ಯಾರ್ಥಿಗಳು ಸಂಪಾದನೆಗಾಗಿ ಕೆಲಸ ಮಾಡುತ್ತಿದ್ದರು. ಮ್ಯಾನೇಜರ್ ಮಾತ್ರ ಖಾಯಂ ನೌಕರ. ಉಳಿದೆಲ್ಲರೂ ದಿನಗೂಲಿಗಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದಿಂದ ನಿರಪೇಕ್ಷಣಾ ಪತ್ರ ಸಲ್ಲಿಸಿದ್ದರಿಂದ ಪರವಾನಗಿಯನ್ನು ನವೀಕರಣ ಮಾಡಿಕೊಟ್ಟಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನಿರಪೇಕ್ಷಣಾ ಪತ್ರ ನೀಡಿದವರು ಸ್ಥಳಕ್ಕೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕಿತ್ತು. ಇದು ಆಗಿಲ್ಲ. ಜಿಲ್ಲಾಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಘಟನೆಯನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗುತ್ತಿದೆ ಎಂದು ಹೇಳಿದರು.

ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಿಗ್ತಿಲ್ಲ ಉದ್ಯೋಗ

ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಘಟನೆಯಲ್ಲಿ 14 ಮಂದಿ ಮೃತಪಟ್ಟಿರುವುದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು. ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ಮತ್ತು ಗಾಯಗೊಂಡ 4 ಜನರಿಗೆ ಉಚಿತ ಚಿಕಿತ್ಸೆ ಕೊಡಿಸಲಾಗುವುದು ಎಂದರು.

RELATED ARTICLES

Latest News