ಬೆಂಗಳೂರು,ಏ.25-ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, 2,88,19,342 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. 1,44,17,530 ಪುರುಷ, 1,43,87,585 ಮಹಿಳಾ, 3,057 ಇತರೆ, 11,160 ಸೇವಾ ಮತದಾರರು ಸೇರಿದ್ದಾರೆ.
14 ಲೋಕಸಭಾ ಕ್ಷೇತ್ರಗಳಲ್ಲಿ 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೇರಿದಂತೆ ಲೋಕಸಭಾ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ.
ಪರ್ಯಾಯ ದಾಖಲೆ :
ಮತದಾನ ಮಾಡಲು ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ ಹಾಗೂ ವೋಟರ್ ಸ್ಲಿಪ್ ಅನ್ನು ತೋರಿಸಿ ಮತ ಚಲಾಯಿಸಬಹುದು. ಒಂದು ವೇಳೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ, ಪರ್ಯಾಯವಾಗಿ ಭಾವಚಿತ್ರವುಳ್ಳ ಇತರೆ ಅಧಿಕೃತ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ.
ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಬ್ಯಾಂಕ್, ಪೋಸ್ಟ್ ಆಫೀಸ್ ಪಾಸ್ ಬುಕ್, ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಪಾಸ್‍ಪೋರ್ಟ್, ಪಿಂಚಣಿಯ ದಾಖಲೆ, ಕೇಂದ್ರ, ರಾಜ್ಯ ಸರ್ಕಾರಗಳು, ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿರುವ ಗುರುತಿನ ಚೀಟಿ, ಎಂಪಿ, ಎಂಎಲ್‍ಎ, ಎಂಎನ್‍ಸಿಗಳಿಗೆ ನೀಡಿರುವ ಗುರುತಿನ ಚೀಟಿಗಳು, ಭಾರತ ಸರ್ಕಾರ ನೀಡಿರುವ ವಿಶಿಷ್ಟ ಅಂಗವೈಕಲ್ಯ ಕಾರ್ಡ್ ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ.