Thursday, November 21, 2024
Homeರಾಜ್ಯಅರಮನೆಯತ್ತ ದಸರಾ ಗಜಪಡೆಯ ಮೊದಲ ತಂಡ

ಅರಮನೆಯತ್ತ ದಸರಾ ಗಜಪಡೆಯ ಮೊದಲ ತಂಡ

ಹುಣಸೂರು, ಆ.21- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯುವ ಗಜಪಡೆ ಇಂದು ಮೈಸೂರಿನತ್ತ ಹೆಜ್ಜೆ ಹಾಕಿವೆ.ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿಯಲ್ಲಿ ಇಂದು ಬೆಳಿಗ್ಗೆ ತುಲಾ ಲಗ್ನದಲ್ಲಿ ಅರಮನೆ ಪುರೋಹಿತರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್‌.ಸಿ. ಮಹದೇವಪ್ಪ, ಈಶ್ವರ್‌ಖಂಡ್ರೆ, ವೆಂಕಟೇಶ್‌, ಶಾಸಕರಾದ ಅನಿಲ್‌ಚಿಕ್ಕಮಾಧು, ಹರೀಶ್‌ಗೌಡ, ಮುಡಾ ಅಧ್ಯಕ್ಷ ಮರೀಗೌಡ, ರಾಜ್ಯ ಮಹಿಳೆ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್‌ ಅವರ ಸಮುಖದಲ್ಲಿ ಗಜಪಡೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಪಯಣಕ್ಕೆ ಚಾಲನೆ ನೀಡಿದರು.

ಗಜಪಡೆಯಲ್ಲಿ ಕ್ಯಾಪ್ಟನ್‌ ಅಭಿಮನ್ಯು(58), ವರಲಕ್ಷ್ಮಿ(67), ಧನಂಜಯ(43), ಗೋಪಿ(41), ಭೀಮ(24), ಲಕ್ಷ್ಮಿ(53), ಕಂಜನ್‌(25), ರೋಹಿಣಿ(22) ಹಾಗೂ ಏಕಲವ್ಯ(38) ಆನೆಗಳು ಇಂದು ಸಾಂಸ್ಕೃತಿಕ ನಗರಿಯತ್ತ ತೆರಳಿದವು.ವಿವಿಧ ಜನಪದ ಕಲಾತಂಡಗಳು, ಗಿರಿಜನರ ಸಾಂಸ್ಕೃತಿಕ ಕಾರ್ಯಕ್ರಮ ಹಾಡಿ ಮಕ್ಕಳ ನೃತ್ಯ ವೈಭವದೊಂದಿಗೆ ಬೀಳ್ಕೊಡಲಾಯಿತು.

ಇಂದು ಸಂಜೆ ಮೈಸೂರು ನಗರಕ್ಕೆ ಆನೆಗಳು ಬರಲಿದ್ದು, ಅಶೋಕಪುರಂನ ಅರಣ್ಯ ಭವನ ಆವರಣದ ಕಿರು ಅರಣ್ಯದಲ್ಲಿ ಉಳಿದುಕೊಂಡು 23 ರಂದು ಬೆಳಿಗ್ಗೆ ಅರಮನೆ ಆವರಣ ಪ್ರವೇಶಿಸಲಿದೆ.

ಮೊದಲ ಬಾರಿಗೆ ಏಕಲವ್ಯ ಭಾಗಿ:
ದಸರಾದ ಪ್ರಮುಖ ಆಕರ್ಷಣೀಯವಾಗಿದ್ದ ಅರ್ಜುನ ಆನೆ ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಏಕಲವ್ಯ ಆನೆ ಈ ಬಾರಿ ದಸರಾದಲ್ಲಿ ಭಾಗವಹಿಸಲಿದೆ. 2018ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆ ಬಳಿ ಏಕಲವ್ಯನನ್ನು ಸೆರೆ ಹಿಡಿದು ಮತ್ತಿಗೋಡು ಆನೆ ಶಿಬಿರದಲ್ಲಿ ಪಳಗಿಸಲಾಗಿದೆ.

ಮೊದಲ ತಂಡದಲ್ಲಿ ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಒಂಭತ್ತು ಆನೆಗಳು ತೆರಳಿದ್ದು, ಎರಡನೇ ಹಂತದಲ್ಲಿ ಪ್ರಶಾಂತ್‌, ಮಹೇಂದ್ರ, ಸುಗ್ರೀವಾ, ಲಕ್ಷ್ಮೀ ಹಾಗೂ ಹಿರಣ್ಯ ಆನೆಗಳು ತೆರಳಲಿವೆ. ಹೆಚ್ಚುವರಿಯಾಗಿ ನಾಲ್ಕು ಆನೆಗಳನ್ನು ಅರಣ್ಯ ಇಲಾಖೆ ಸಿದ್ದಪಡಿಸಲಾಗಿದ್ದು, ಅವು ಕೂಡ ಭಾಗವಹಿಸಲಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಲೀಮು ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾದರೆ ಮುಂಜಾಗ್ರತಾ ದೃಷ್ಟಿಯಿಂದ 18 ಆನೆಗಳು, ಮಾವುತರು, ಕಾವಾಡಿ, ಅಧಿಕಾರಿ, ಸಿಬ್ಬಂದಿ ಸೇರಿ 2.33 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಕಾವಾಡಿಗರ ಕುಟುಂಬ ಉಳಿದುಕೊಳ್ಳಲು ಅರಮನೆ ಆವರಣದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.

RELATED ARTICLES

Latest News