Sunday, May 5, 2024
Homeರಾಷ್ಟ್ರೀಯಪಂಚರಾಜ್ಯಗಳ ಚುನಾವಣೆಯಲ್ಲಿ 42 ಕೋಟಿ ರೂ. ಪ್ರತಿಧ್ವನಿ

ಪಂಚರಾಜ್ಯಗಳ ಚುನಾವಣೆಯಲ್ಲಿ 42 ಕೋಟಿ ರೂ. ಪ್ರತಿಧ್ವನಿ

ಬೆಂಗಳೂರು,ಅ.14- ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿವಾಸದಲ್ಲಿ ಐಟಿ ಅಧಿಕಾರಿಗಳು ಜಪ್ತಿ ಮಾಡಿರುವ 42 ಕೋಟಿ ನಗದು ಪ್ರಕರಣ ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಪ್ರಚಾರದಲ್ಲೂ ಪ್ರತಿಧ್ವನಿಸಲಿದೆ. ಈ ಹಿಂದೆ ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ 40% ಕಮೀಷನ್ ಆರೋಪ ಭಾರೀ ಸದ್ದು ಮಾಡಿತ್ತು. ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರು ಇದನ್ನೇ ಪ್ರಸ್ತಾಪಿಸಿ ಬಿಜೆಪಿಗೆ ಮುಜುಗರ ಸೃಷ್ಟಿಸಿದ್ದರು.

ಕರ್ನಾಟಕ ಮಾತ್ರವಲ್ಲದೆ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ವಿರುದ್ದವೂ ಪೇ ಕಮಿಷನ್ ಆರೋಪ ಮಾಡಲು ಸಜ್ಜಾಗಿತ್ತು. ಇದು ಒಂದು ರೀತಿ ಬಿಜೆಪಿಗೆ ಉಗಳಲು ಆಗದ, ನುಂಗಲೂ ಆಗದ ಬಿಸಿತುಪ್ಪವಾಗಿ ಪರಿಣಮಿಸಿತ್ತು.

ಇದೀಗ ಕಾಂಗ್ರೆಸ್ ಮಾಡಿದ ಆರೋಪವೇ ತಿರುಗು ಬಾಣವಾಗುವ ಸಾಧ್ಯತೆ ನಿಚ್ಚಳವಾಗಿದೆ. ಪಂಚರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡ, ತೆಲಂಗಾಣ ಮತ್ತು ಮಿಜೋರಾಂಗಳಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ 42 ಕೋಟಿ ಬೃಹತ್ ಹಗರಣ ಬಿಜೆಪಿಯ ಪ್ರಮುಖ ಪ್ರಚಾರದ ಅಸ್ತ್ರವಾಗಲಿದೆ.

ಮೊಬೈಲ್ ಚಟ ಪ್ರಶ್ನಿಸಿದ ತಾಯಿಯನ್ನೇ ಕೊಂದ ಮಗ

ಐದೂ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಮತ್ತಿತರ ತಾರಾ ಪ್ರಚಾರಕರು 42 ಕೋಟಿ ವಿಷಯವನ್ನೇ ಕಾಂಗ್ರೆಸ್‍ಗೆ ತಿರುಗಿಸಲು ಮುಂದಾಗಿದೆ.

ಅಧಿಕಾರಕ್ಕೆ ಬಂದು ಕೇವಲ 4 ತಿಂಗಳ ಅವಧಿಯಲ್ಲಿ ಗುತ್ತಿಗೆದಾರನ ಬಳಿ ಇಷ್ಟು ದೊಡ್ಡ ಮೊತ್ತದ ಹಣ ಸಿಕ್ಕಿರುವುದರಿಂದ ಹಿಂದೆ ಕೆಲವು ಪ್ರಭಾವಿ ನಾಯಕರ ಕೃಪಾಕಟಾಕ್ಷವಿದೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕೂಡ ಹೊರತಾಗಿಲ್ಲ ಎಂಬುದನ್ನು ಬಿಂಬಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಸಣ್ಣದೊಂದು ವಿಷಯವನ್ನು ಸಹ ಬಿಡದೆ ಕಾಂಗ್ರೆಸ್ ಜನ್ಮ ಜಾಲಾಡುವ ಮೋದಿ ಅವರು ಇದೀಗ ಅಂಬಿಕಾಪತಿ ಪ್ರಕರಣವನ್ನು ಪದೇ ಪದೇ ಪ್ರಸ್ತಾಪಿಸಿ ಕಾಂಗ್ರೆಸ್‍ಗೆ ಮುಜುಗರ ತರಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

40% ಪ್ರಕರಣಕ್ಕೆ ತಿರುವು ಸಾಧ್ಯತೆ:
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಹೊರಿಸಿದ್ದರು. ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕಿದ್ದರೆ 40% ಕಮಿಷನ್ ಕೊಡಬೇಕಾದ ಪರಿಸ್ಥಿತಿ ಇದೆ ಎಂಬ ಆರೋಪ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಆಗಿನ ವಿರೋಧ ಪಕ್ಷ ಕಾಂಗ್ರೆಸ್ ಈ ಪ್ರಕರಣವನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿತ್ತು.

ಪೇಟಿಎಂ ಮಾದರಿಯಲ್ಲಿ ಪೇಸಿಎಂ ಎಂಬ ಪೋಸ್ಟರ್ ತಯಾರಿಸಿ ರಾಜಧಾನಿಯ ಗೋಡೆಗಳ ಮೇಲೆ ರಾತ್ರೋರಾತ್ರಿ ಅಂಟಿಸುವ ಮೂಲಕ ಈ ಆರೋಪ ಇನ್ನಷ್ಟು ಜೀವ ಪಡೆಯುವಂತೆ ಮಾಡಲಾಗಿತ್ತು. ಆದರೆ ಇದೀಗ ಆ 40% ಕಮಿಷನ್ ಆರೋಪ ಪ್ರಕರಣ ತಿರುವು ಪಡೆದರೂ ಅಚ್ಚರಿ ಏನಲ್ಲ.

40 ವರ್ಷಗಳ ನಂತರ ಮತದಾನದ ಭಾಗ್ಯ ಪಡೆದ ನಿವಾಸಿಗಳು

ಅಂದಿನ 40% ಕಮಿಷನ್ ಆರೋಪ ಪ್ರಕರಣ ತಿರುವು ಪಡೆಯುವ ಸಾಧ್ಯತೆ ಒಂದೆಡೆಯಾದರೆ, ಇನ್ನೊಂದೆಡೆ ಈ ಪ್ರಕರಣ ತಿರುಗುಬಾಣ ಆಗುವ ಲಕ್ಷಣಗಳೂ ಕಾಣಿಸುತ್ತಿವೆ. ಏಕೆಂದರೆ ಅಂದು ಈ ಪ್ರಕರಣ ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿ ಮೇಲೆ ಮುಗಿಬಿದ್ದ ಕಾಂಗ್ರೆಸ್ ಇಂದು ಅಧಿಕಾರದಲ್ಲಿದೆ. ಅಲ್ಲದೆ ಅಂದು ಈ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆಯಲ್ಲೇ ಈ ಕಂತೆಗಟ್ಟಲೆ ಹಣ ಸಿಕ್ಕಿದೆ. ಹೀಗಾಗಿ ಅಂಬಿಕಾಪತಿಗೆ ಆ ಕಮಿಷನ್ ಪ್ರಕರಣವೇ ತಿರುಗುಬಾಣವಾಗಬಹುದು.

ಅಲ್ಲದೆ ಮಂಚದಡಿ ಕಂತೆಗಟ್ಟಲೆ ಹಣ ಸಿಕ್ಕ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಈಗಾಗಲೇ ಕಾಂಗ್ರೆಸ್ ಮೇಲೆ ಮುಗಿಬಿದ್ದಿದೆ. ಒಟ್ಟಿನಲ್ಲಿ ಇದೊಂದೇ ದಾಳಿಯಿಂದ ದೊಡ್ಡದೊಂದು ಭ್ರಷ್ಟಾಚಾರ ಆರೋಪ ಪ್ರಕರಣವೂ ಮುನ್ನೆಲೆಗೆ ಬಂದಿದ್ದಲ್ಲದೆ, ಆ ಕುರಿತು ಕುತೂಹಲವೂ ಕೆರಳುವಂತೆ ಮಾಡಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ನಡೆಸಿದ ದಾಳಿಯಲ್ಲಿ ಕೋಟಿಗಟ್ಟಲೆ ಮೊತ್ತದ ನೋಟುಗಳ ಕಂತೆಗಳು ಸಿಕ್ಕಿವೆ. ನಗರದ ಐದು ಕಡೆ ದಾಳಿ ಮಾಡಿದ್ದು, ಆ ಪೈಕಿ ಆರ್.ಟಿ.ನಗರದ ಆತ್ಮಾನಂದ ಕಾಲನಿಧಿಯಲ್ಲಿ 42 ಕೋಟಿ ಹಣ ಪತ್ತೆಯಾಗಿದೆ. ಅಶ್ವತ್ಥಮ್ಮ ಹಾಗೂ ಅಂಬಿಕಾಪತಿ ದಂಪತಿಯ ಮನೆಯಲ್ಲಿ ಈ ಹಣ ಪತ್ತೆಯಾಗಿದೆ. ಅಂಬಿಕಾಪತಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನಾಗಿದ್ದು, ಪತ್ನಿ ಅಶ್ವತ್ಥಮ್ಮ ಬಿಬಿಎಂಪಿಯ ಮಾಜಿ ಕಾಪೆರ್ಪೋರೇಟರ್ ಆಗಿದ್ದಾರೆ.

RELATED ARTICLES

Latest News