ಬೆಂಗಳೂರು,ನ.12- ವಿಧಾನಸಭೆ ಚುನಾವಣೆ ಹೀನಾಯ ಸೋಲಿನ ನಂತರ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಅನ್ಯ ಪಕ್ಷಗಳತ್ತ ಮುಖ ಮಾಡಿದ್ದ ಅನೇಕರು ಇದೀಗ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ.
ದೀಪಾವಳಿ ಹಬ್ಬದ ನಂತರ ಮಾಜಿ ಸಚಿವರು ಹಾಗು ಮಾಜಿ ಶಾಸಕರು ಸೇರಿದಂತೆ ಅನೇಕರು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಕಡೆ ಸಾಮೂಹಿಕ ವಲಸೆ ಹೋಗುವ ನಿರ್ಧಾರಕ್ಕೆ ಬಂದಿದ್ದರು. ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ ಇದೇ 15ರಂದು ಅನೇಕರು ಕಮಲಬಿಟ್ಟು ಕೈ ಹಿಡಿಯುವ ತವಕದಲ್ಲಿದ್ದರು.
ಆದರೆ ಇದೀಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಪಕ್ಷದ ಸಾರಥ್ಯ ವಹಿಸಿರುವುದರಿಂದ ಬಹುತೇಕರು ಪಕ್ಷದಲ್ಲೇ ಮುಂದುವರೆಯುವ ಒಮ್ಮತಕ್ಕೆ ಬಂದಿದ್ದಾರೆ. ಮಾಜಿ ಸಚಿವರಾದ ಶಂಕರ್ ಪಟೇಲ್ ಮುನೇನಕೊಪ್ಪ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಕುಮಾರ ಬಂಗಾರಪ್ಪ ಮತ್ತಿತರ ಪಕ್ಷದ ಪ್ರಮುಖರು ಬಿಜೆಪಿ ಬಿಡುವ ಪಟ್ಟಿಯಲ್ಲಿದ್ದರು.
ಮಾಜಿ ಮುಖ್ಯಮಂತ್ರಿಯೊಬ್ಬರು ಇವರೆಲ್ಲರನ್ನೂ ಕಾಂಗ್ರೆಸ್‍ಗೆ ಸೇರಿಸಲು ವೇದಿಕೆಯನ್ನು ಸಹ ಸಿದ್ದಪಡಿಸಿದ್ದರು. ಇದೀಗ ಖುದ್ದು ಯಡಿಯೂರಪ್ಪನವರೇ ಅಸಮಾಧಾನಗೊಂಡಿರುವವರನ್ನು ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಯಾರೊಬ್ಬರು ಪಕ್ಷ ಬಿಟ್ಟು ಹೋಗಬೇಡಿ. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಕೈ ಬಲಪಡಿಸಿ ಮತ್ತೊಮ್ಮೆ ಅವರನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ತರಬೇಕು. ಕರ್ನಾಟಕದಿಂದ ನಾವು 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಸ್ಥಾನಗಳನ್ನು ಗೆದ್ದು ಉಡುಗೊರೆ ನೀಡೋಣ ನಿಮ್ಮ ರಾಜಕೀಯ ಭವಿಷ್ಯವನ್ನು ನಾನು ಕಾಪಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ.
ವಿಜಯೇಂದ್ರ ಅಧ್ಯಕ್ಷರಾದರೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸೋಣ ಎಲ್ಲರೂ ಜೊತೆಗಿದ್ದು ಅವರ ಕೈ ಬಲಪಡಿಸಬೇಕು. ಪಕ್ಷ ಬಿಟ್ಟು ಹೋದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ನನ್ನ ಮಾತಿನಲ್ಲಿ ನಂಬಿಕೆ ಇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದೀಗ ತಮ್ಮ ರಾಜಕೀಯ ಗುರುಗಳ ಭರವಸೆಯಂತೆ ಪಕ್ಷ ಬಿಡಲು ತೀರ್ಮಾನಿಸಿದ್ದ ಅನೇಕರು ಬಿಜೆಪಿಯಲ್ಲೇ ಮುಂದುವರೆಯುವ ಅಚಲ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಟ್ರಕ್‍ಗೆ ಕಾರು ಅಪ್ಪಳಿಸಿ ಒಂದೇ ಕುಟುಂಬದ ನಾಲ್ವರ ಸಾವು
ಕಳೆದ ಎರಡು ದಿನಗಳಿಂದ ಖುದ್ದು ಯಡಿಯೂರಪ್ಪನವರೇ ದೂರವಾಣಿ ಮೂಲಕ ಅನೇಕರೊಂದಿಗ ಮಾತುಕತೆ ನಡೆಸುತ್ತಿದ್ದು, ಕಷ್ಟಕಾಲದಲ್ಲಿದ್ದಾಗ ಪಕ್ಷದ ಜೊತೆಗಿದ್ದರೆ ಖಂಡಿತವಾಗಿಯೂ ನಿಮಗೆ ಸೂಕ್ತವಾದ ಸ್ಥಾನಮಾನವನ್ನು ನೀಡಲಾಗುತ್ತದೆ. ಅಲ್ಪ ಆಸೆಗಾಗಿ ಆತುರಪಟ್ಟು ನಿಮ್ಮ ರಾಜಕೀಯ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಮೌನಕ್ಕೆ ಜಾರಿದ ಪ್ರಮುಖರು:
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತಿದ್ದಂತೆ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದವರು ಮೌನಕ್ಕೆ ಜಾರಿದ್ದಾರೆ. ಪದಗಳ ಮೂಲಕ ಅಸಮಾಧಾನ ಹೊರಹಾಕದಿದ್ದರೂ ನಡವಳಿಕೆಯಲ್ಲಿ ಅಸಮಾಧಾನ ಸ್ಪಷ್ಟವಾಗಿದೆ.
ಬಿಜೆಪಿ ನಿಯೋಜಿತ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಬಿಎಸ್‍ವೈ ಆಪ್ತರು, ಪಕ್ಷ ನಿಷ್ಠರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದರೆ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದವರು ಯಾವ ಪ್ರತಿಕ್ರಿಯೆ ನೀಡದೆ ಅಸಮಾಧಾನಗೊಂಡಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ಗರಂ ಆಗಿದ್ದು, ಅವಕಾಶ ಕೈತಪ್ಪಿದ್ದಕ್ಕೆ ಸಿಡಿಮಿಡಿಗೊಂಡಿದ್ದಾರೆ. ವಿಜಯನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಸಿಟ್ಟಿನಲ್ಲೇ ತೆರಳಿದ್ದಾರೆ.
ವಿಜಯೇಂದ್ರ ರಾಜಜ್ಯಾಧ್ಯಕ್ಷ ಆಯ್ಕೆಗೆ ಕೋಟ ಶ್ರೀನಿವಾಸ ಪೂಜಾರಿ ಹರ್ಷ ಇನ್ನು ಮತ್ತೊಂದು ಕಡೆ ಶಾಸಕ ಅರವಿಂದ ಬೆಲ್ಲದ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾರಿಗೂ ಸಿಕ್ಕಿಲ್ಲ, ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಮಾಜಿ ಸಚಿವ ಸಿ.ಟಿ ರವಿ ಪ್ರತಿಕ್ರಿಯೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತಿದೆ, ನಿಗೂಢ ಅರ್ಥ ಬರುವಂತೆ ಪ್ರತಿಕ್ರಿಯೆ ನೀಡಿದ್ದಾರೆ.
2024ರ ನಂತರ ವೈಯಕ್ತಿಕ ರಾಜಕಾರಣ:
ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ರ್ಪಧಿ ಆಗಿರಲಿಲ್ಲ, ಹಾಗಾಗಿ ನನಗೆ ಯಾವುದೇ ಅಸಮಾಧಾನ ಇಲ್ಲ. ನಾವೇನು ಸನ್ಯಾಸಿಗಳಲ್ಲ, ಈಗೇನಿದ್ದರೂ ಮೋದಿ ಸರ್ಕಾರ ಅಧಿಕಾರಕ್ಕೆ ತರುವುದಷ್ಟೆ ನನ್ನ ಗುರಿ, ಅದಕ್ಕಷ್ಟೇ ಸಮಯ ನೀಡಲಿದ್ದೇನೆ. ನಮ್ಮ ವೈಯಕ್ತಿಕ ರಾಜಕಾರಣ 2024ರ ನಂತರವಾಗಲಿದೆ. ಈಗೇನಿದ್ದರೂ ರಾಷ್ಟ್ರ ಹಿತದ ರಾಜಕಾರಣ, ಮೋದಿ ಸರ್ಕಾರ ಮತ್ತೆ ತರಬೇಕು ಎನ್ನುವುದಷ್ಟೇ ಆಗಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹ ಯೋಗ್ಯತೆ ಬಹಳಷ್ಟು ಜನರಿಗಿದೆ. ಆದರೆ ಯಾವ ಸಂದರ್ಭಕ್ಕೆ ಯಾರು ಸೂಕ್ತ ಎಂದು ಹೈಕಮಾಂಡ್ ನಿರ್ಧರಿಸಲಿದೆ. ಈಗ ಅದನ್ನೇ ಹೈಕಮಾಂಡ್ ಮಾಡಿದೆ ಎಂದು ಸಿ.ಟಿ.ರವಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.