ಬೆಂಗಳೂರು,ಏ.12- ಬಿಜೆಪಿ-ಜೆಡಿಎಸ್ ಮೈತ್ರಿಯ ಅಪಸ್ವರದ ನಡುವೆ ಹಲವು ಕ್ಷೇತ್ರಗಳಲ್ಲಿ ಮಾಜಿ ಶಾಸಕರು ಅಸಮಾಧಾನಗೊಂಡು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ. ಅದರಲ್ಲೂ ಕೌಟುಂಬಿಕ ರಾಜಕಾರಣದಲ್ಲಿ ಒಡೆದಾಳುವ ನೀತಿಯಿಂದ ಸಿಟ್ಟಾಗಿರುವ ಕಲಬುರಗಿ ಜಿಲ್ಲೆಯ ಅಫ್ಜಲ್‍ಪುರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿದ್ದರೆ, ಮಂಡ್ಯ ಜಿಲ್ಲೆಯ ನಾಗಮಂಗಲದ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಸಭೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.
ಮಾಲೀಕಯ್ಯ ಗುತ್ತೇದಾರ್ ಅವರು ಬಿಜೆಪಿಯಲ್ಲಿದ್ದು, ಕಳೆದ ಬಾರಿ ಅಫ್ಜಲ್‍ಪುರದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಎಂ.ವೈ.ಪಾಟೀಲ್ ವಿರುದ್ಧ ಸೋಲು ಕಂಡಿದ್ದರು. ಇದಕ್ಕೆ ಮೂಲ ಕಾರಣ ಅವರ ಸಹೋದರ ಸಂಬಂಧಿ ನಿತಿನ್ ಗುತ್ತೇದಾರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾಗಿತ್ತು.
ಪ್ರಸ್ತುತ ಬಿಜೆಪಿ ನಾಯಕರು ನಿತಿನ್ ಗುತ್ತೇದಾರ್‍ರನ್ನು ಬಿಜೆಪಿಗೆ ಸೇರಿಸಿಕೊಂಡು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಮಾಲೀಕಯ್ಯ ಗುತ್ತೇದಾರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ರನ್ನು ಭೇಟಿ ಮಾಡಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಲಬುರಗಿಯ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಅವರು ಹಳೆಯ ಸ್ನೇಹಿತರು. ಈ ಕಾರಣಕ್ಕಾಗಿ ಪರಸ್ಪರ ಭೇಟಿಯಾಗಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಡಿ.ಕೆ.ಶಿವಕುಮಾರ್‍ರವರೇ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.
ಇತ್ತ ಮಂಡ್ಯ ಜಿಲ್ಲೆಯ ಪ್ರಮುಖ ನಾಯಕ ಎಲ್.ಆರ್.ಶಿವರಾಮೇಗೌಡ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ನಡೆದ ಸಭೆಯಲ್ಲಿ ಭಾಗವಹಿಸಿದ್ದಾರೆ. ಎಲ್.ಆರ್.ಶಿವರಾಮೇಗೌಡ ಮತ್ತು ಪುತ್ರ ಚೇತನ್‍ಗೌಡ ಇಬ್ಬರೂ ಕೆಲ ತಿಂಗಳುಗಳ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. ಚೇತನ್‍ಗೌಡ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ತಂದೆ ಎಲ್.ಆರ್.ಶಿವರಾಮೇಗೌಡ ಕಾಂಗ್ರೆಸ್ ಅಭ್ಯರ್ಥಿ ಪರವಾದ ಸಭೆಯಲ್ಲಿ ಭಾಗವಹಿಸಿರುವುದು ಕುತೂಹಲ ಕೆರಳಿಸಿದೆ.
ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‍ರವರ ಪುತ್ರಿ ನಿಶಾ ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹಲವಾರು ಕ್ಷೇತ್ರಗಳಲ್ಲಿ ಇದೇ ರೀತಿಯ ಬೆಳವಣಿಗೆಗಳಾಗಿವೆ. ಚುನಾವಣಾ ಕಾಲದಲ್ಲಿ ಪಕ್ಷಾಂತರಗೊಳ್ಳುವ ಸ್ಥಾನಪಲ್ಲಟಗಳು ಸಾಮಾನ್ಯ ಎಂದು ಹೇಳಲಾಗಿದ್ದರೂ ಪ್ರಮುಖ ನಾಯಕರು ರಾಜಕೀಯ ಮಗ್ಗಲು ಬದಲಿಸುತ್ತಿರುವುದು ಗಮನ ಸೆಳೆದಿದೆ.