ಬೆಂಗಳೂರು, ನ.30– ದ್ವಿಚಕ್ರ ವಾಹನ ಹಾಗೂ ಮನೆಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿ 11 ಲಕ್ಷ ರೂ. ಬೆಲೆಬಾಳುವ 130 ಗ್ರಾಂ ಆಭರಣಗಳು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ರಘು, ದೀಪಕ್, ಜೈದೀಪು ಮತ್ತು ಅದ್ವೈತ್ ಗೌಡ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ಮಿಥುನ್ ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಮುಂದುವರೆದಿದೆ.
ಸೆ. 7ರಂದು ಮಂಗನಹಳ್ಳಿ ಎಸ್ಎಂವಿ ಲೇಔಟ್ನ ಮನೆಯೊಂದರ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣಗಳು, 50 ಸಾವಿರ ಹಣ, ಕೆಟಿಎಂ ಬೈಕ್ ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ಮನೆ ಮಾಲೀಕರಾದ ಖಾಲಿದ್ ನಯಾಜ್ ಖಾನ್ ಎಂಬುವರು ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿ ರಘು ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಾಲ್ವರ ಹೆಸರು ಬಾಯ್ಬಿಟ್ಟಿದ್ದು, ಮತ್ತೆ ಮೂವರನ್ನು ಬಂಧಿಸಿ ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಆರೋಪಿಗಳ ಬಂಧನದಿಂದ ಬ್ಯಾಡರಹಳ್ಳಿ, ಸುಬ್ರಮಣ್ಯ ಪುರ, ಕುಂಬಳಗೋಡು, ಕೋಣನಕುಂಟೆ, ರಾಜರಾಜೇಶ್ವರಿ ನಗರ ಠಾಣೆಯ ತಲಾ ಒಂದು ಪ್ರಕರಣ ಹಾಗೂ ಹನುಮಂತನಗರ ಠಾಣೆಯ ಎರಡು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಇನ್‌್ಸಪೆಕ್ಟರ್ ರವಿ ಅವರ ನೇತೃತ್ವದ ಸಿಬ್ಬಂದಿ ತಂಡ ಈ ಕಾರ್ಯಾಚರಣೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.