ವ್ಯಾಂಕೂವರ್,ಜೂ.19- ಜೋನಾಥನ್ ಡೇವಿಡ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಕೆನಡಾ ತಂಡ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದ್ದು, ಕತಾರ್ ವಿರುದ್ಧ 6-0 ಅಂತರದ ಭರ್ಜರಿ ಜಯ ಸಾಧಿಸಿದೆ. ಇಲ್ಲಿ ನಡೆದ ಪಂದ್ಯದಲ್ಲಿ ಕತಾರ್ ತಂಡ ಇಬ್ಬರು ಆಟಗಾರರು ಕೆಂಪು ಕಾರ್ಡ್ ಪಡೆದ ಕಾರಣ ಒಂಬತ್ತು ಮಂದಿಗೆ ಸೀಮಿತಗೊಂಡಿತು. ಪರಿಣಾಮ ಕೆನಡಾ ಏಕಪಕ್ಷೀಯ ಪ್ರಾಬಲ್ಯ ಸಾಧಿಸಿತು.
ಎರಡನೇಾರ್ಧದ ಆರಂಭದಲ್ಲೇ ಇಸಾಯೆಲ್ ಕೋನೆ ವಿರುದ್ಧ ಅಪಾಯಕಾರಿ ಟ್ಯಾಕಲ್ ಮಾಡಿದ ಕಾರಣ ಅಸ್ಸಿಂ ಮದಿಬೊ ಅವರಿಗೆ ಕೆಂಪು ಕಾರ್ಡ್ ತೋರಿಸಲಾಯಿತು. ಈ ಘಟನೆಯಲ್ಲಿ ಕೋನೆ ಅವರ ಎಡ ಕಾಲಿನ ಕೆಳಭಾಗಕ್ಕೆ ಗಂಭೀರ ಗಾಯವಾಗಿದ್ದು, ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಇದಕ್ಕೂ ಮೊದಲು ಮೊದಲಾರ್ಧದಲ್ಲಿ ತಜೋನ್ ಬುಕಾನನ್ ಅವರಿಂದ ಚಂಡನ್ನು ಕಸಿಯಲು ಅಪಾಯಕಾರಿ ಪ್ರದರ್ಶನಕ್ಕೆ ಹೋಮನ್ ಅಹ್ಮದ್ ಕೂಡ ಕೆಂಪು ಕಾರ್ಡ್ ಪಡೆದಿದ್ದರು.
ಲಾರಿನ್ ಆರಂಭ, ಡೇವಿಡ್ ಮಿಂಚು ಪಂದ್ಯದ 16ನೇ ನಿಮಿಷದಲ್ಲಿ ಸೈಲ್ ಲಾರಿನ್ ಗೋಲು ಗಳಿಸಿ ಕೆನಡಾಗೆ 1-0 ಮುನ್ನಡೆ ತಂದರು. ಜೋನಾಥನ್ ಡೇವಿಡ್ ಅದ್ಬುತ ಹೊಡೆದ ಚೆಂಡು ಕತಾರ್ ಗೋಲ್‌ಕೀಪರ್ ಮಹಮೂದ್ ಅಬುನಾದಾ ತಡೆಯಲು ಪ್ರಯತ್ನಿಸಿದರೂ, ಸಾಧಯವಾಗಲಿಲ್ಲ ನಂತರ 29ನೇ ನಿಮಿಷದಲ್ಲಿ ಜೋನಾಥನ್ ಡೇವಿಡ್ ಬಲ ಕಾಲಿನ ಅದ್ಭುತ ವಾಲಿಯ ಮೂಲಕ ಅಂತರವನ್ನು 2-0ಕ್ಕೆ ಹೆಚ್ಚಿಸಿದರು.ಮೊದಲಾರ್ಧದ ಹೆಚ್ಚುವರಿ ವೇಳೆಯಲ್ಲಿ ಗೋಲುಮುಂಭಾಗದ ಗೊಂದಲದ ನಡುವೆ ಡೇವಿಡ್ ಮತ್ತೊಂದು ಗೋಲು ಗಳಿಸಿ ಕೆನಡಾಗೆ 3-0 ಮುನ್ನಡೆ ತಂದುಕೊಟ್ಟರು.
ದ್ವಿತೀಯಾರ್ಧದಲ್ಲಿ ಗೋಲು ಮಳೆ
64ನೇ ನಿಮಿಷದಲ್ಲಿ ಗಾಯಗೊಂಡ ಕೋನೆ ಬದಲಿಗೆ ಕಣಕ್ಕಿಳಿದ ನಾಥನ್ ಸಲಿಬಾ ಫ್ರೀ ಕಿಕ್ ಮೂಲಕ ಗೋಲು ದಾಖಲಿಸಿ ಅಂತರವನ್ನು 4-0ಕ್ಕೆ ಏರಿಸಿದರು. 75ನೇ ನಿಮಿಷದಲ್ಲಿ ಕತಾರ್ ಆಟಗಾರ ಮೊಹಮದ್ ಮನಾಯಿ ಮಾಡಿದ ಸ್ವಯಂ ಗೋಲಿನಿಂದ ಕೆನಡಾ 5-0 ಮುನ್ನಡೆ ಸಾಧಿಸಿತು. ಹೆಚ್ಚುವರಿ ಸಮಯದಲ್ಲಿ ಜೋನಾಥನ್ ಡೇವಿಡ್ ಮತ್ತೊಂದು ಗೋಲು ಗಳಿಸಿ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಈ ವಿಶ್ವಕಪ್‌ನಲ್ಲಿ ಒಂದೇ ಪಂದ್ಯದಲ್ಲಿ ಮೂರು ಗೋಲು ಗಳಿಸಿದ ಎರಡನೇ ಆಟಗಾರ ಎಂಬ ಸಾಧನೆಗೂ ಅವರು ಪಾತ್ರರಾದರು. ಈ ಹಿಂದೆ ಮೆಸ್ಸಿಮಾತ್ರ ಈ ಸಾಧನೆ ಮಾಡಿದ್ದರು.
ನಾಕೌಟ್ ಹಂತದತ್ತ ಕೆನಡಾ
ಕೆನಡಾ ತಂಡದ ನಾಯಕ ಅಲ್ಫೋನ್ಸೊ ಡೇವಿಸ್ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣ ತಂಡದಲ್ಲಿದ್ದರೂ ಈ ಪಂದ್ಯದಲ್ಲಿ ಆಡಲಿಲ್ಲ. ಮೋಯಿಸ್ ಬೊಂಬಿಟೊ ಕೂಡ ಲಭ್ಯರಿದ್ದರೂ ಕಣಕ್ಕಿಳಿಯಲಿಲ್ಲ. ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಬೋಸ್ನಿಯಾ ಮತ್ತು ಹರ್ಜೆಗೋವಿನಾ ವಿರುದ್ಧ 1-1 ಸಮಬಲ ಸಾಧಿಸಿದ್ದ ಕೆನಡಾ, ಈ ಗೆಲುವಿನೊಂದಿಗೆ ನಾಕೌಟ್ ಹಂತ ಪ್ರವೇಶಿಸುವ ಸಾಧ್ಯತೆಯನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
ಇನ್ನೊಂದೆಡೆ, ಆತಿಥೇಯ ರಾಷ್ಟ್ರವಾಗಿ ನಾಲ್ಕು ವರ್ಷಗಳ ಹಿಂದೆ ವಿಶ್ವಕಪ್ ಆಡಿದ್ದ ಕತಾರ್ ಇನ್ನೂ ತನ್ನ ಮೊದಲ ವಿಶ್ವಕಪ್ ಗೆಲುವಿಗಾಗಿ ಕಾಯುತ್ತಿದೆ. ಗುಂಪು ಬಿ ಯ ಮತ್ತೊಂದು ಪಂದ್ಯದಲ್ಲಿ ಸ್ವಿಟ್ಜರ್ಲ್ಯಾಂಡ್ ತಂಡವು ಬೋಸ್ನಿಯಾ-ಹರ್ಜೆಗೋವಿನಾವನ್ನು 4-1 ಗೋಲುಗಳಿಂದ ಸೋಲಿಸಿತು.
