ಬೆಂಗಳೂರು,ಜೂ.19- ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಸಿದ ಮೀರ್ ಸಾಧಕ್‌ರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಪರೋಕ್ಷವಾಗಿ ಕಠಿಣ ಶಿಸ್ತು ಕ್ರಮ ಗ್ಯಾರಂಟಿ ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಅಡ್ಡ ಮತದಾನ ನಡೆಸುವವರು ಹೆತ್ತ ತಾಯಿಗೆ ದ್ರೋಹ ಬಗೆದಂತೆ. ಯಾವುದೇ ಕಾರಣಕ್ಕೂ ಇಂಥವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಇಂಥ ಮೀರ್ ಸಾಧಕ್‌ರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬೀನ್ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಪ್ರಸಕ್ತ ರಾಜಕೀಯ ವಿದ್ಯಾಮ್ಯಾನಗಳ ಬಗ್ಗೆಯೂ ಮಾಹಿತಿ ನೀಡಿದ್ದೇನೆ. ಅವರು ಸಮಯ ಅವಕಾಶ ನೀಡಿದ ತಕ್ಷಣವೇ ದೆಹಲಿಗೆ ತೆರಳುತ್ತೇನೆ ಎಂದು ಹೇಳಿದರು. ನಮ್ಮ ಜೊತೆಯೇ ಇದ್ದು ಬೆನ್ನಿಗೆ ಚೂರಿ ಹಾಕಿರುವವರನ್ನು ಯಾವ ಭಾಷೆಯಲ್ಲಿ ಏನೆಂದು ಕರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ. ಇಂಥವರ ವಿರುದ್ದ ಕ್ರಮ ಖಚಿತ. ಈಗಾಗಲೇ ಯಾರು ಯಾರು ಅಡ್ಡ ಮತನಾದ ನಡೆಸಿದ್ದಾರೆ ಎಂಬ ಬಗ್ಗೆ ನಾವು ನಮ್ಮದೇ ಆದ ಮೂಲಗಳಿಂದ ಮಾಹಿತಿ ಪಡೆದಿದ್ದೇವೆ. ಇದೆಲ್ಲವನ್ನು ವರಿಷ್ಠರ ಗಮನಕ್ಕೆ ತರಲಾಗಿದೆ. ದೆಹಲಿಗೆ ಭೇಟಿ ನೀಡಿದ ವೇಳೆ ಪೂರ್ಣ ವಿವರಗಳನ್ನು ನೀಡುತ್ತೇನೆ ಎಂದು ತಿಳಿಸಿದರು.
ಅಡ್ಡ ಮತನಾನ ನಡೆದಿರುವುದು ನಿಜಕ್ಕೂ ನಮಗೆ ಬೇಸರ ತಂದಿದೆ. ಇಂಥ ಘಟನೆ ನಡೆಯುತ್ತದೆ ಎಂದು ಕನಸು ಮನಸ್ಸಿನಲ್ಲೂ ಊಹೆ ಮಾಡಿರಲಿಲ್ಲ. ದುರದೃಷ್ಟವಶಾತ್ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅಂಥ ಶಾಸಕರಿಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದರು. ಅಡ್ಡ ಮತದಾನ ನಡೆದಿರುವುದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಬೇಸರ ತಂದಿದೆ. ಬಿಜೆಪಿಯಂತೆ ಜೆಡಿಎಸ್‌ನಲ್ಲೂ ಅಡ್ಡ ಮತದಾನ ನಡೆದಿದೆ. ಈ ಘಟನೆ ಉಭಯ ಪಕ್ಷಗಳಿಗೆ ಮುಜುಗರ ಉಂಟು ಮಾಡಿರುವುದು ನಿಜ. ನಮಗೆ ಪೂರ್ಣ ಚಿತ್ರ ಸಿಕ್ಕ ನಂತರ ಯಾರ ಮೇಲೆ ಕ್ರಮ ತೆಗೆದುಕೊಳ್ಳಬೇಕೋ ಖಂಡಿತವಾಗಿಯೂ ತೆಗೆದುಕೊಳ್ಳುತ್ತೇವೆ ಎಂದರು.
ನಮಗೆ ಅಪಮಾನವಾಗಿದೆ. ಜೆಡಿಎಸ್ ನಾಯಕರಿಗೂ ನೋವಾಗುವುದು ಸಹಜ. ನಮಗೆ ನಮ ಶಾಸಕರು ಮಾಡಿರುವ ಮೋಸ ತಾಯಿಗೆ ಮಾಡಿದ ಮೋಸ. ಜೆಡಿಎಸ್‌ಗೆ ಮಾಡಿದ ಮೋಸವೂ ಅದೇ ರೀತಿ. ಈ ಘಟನೆಯಿಂದ ಕಾರ್ಯಕರ್ತರಿಗೆ ನೋವಾಗಿದೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಈ ಘಟನೆ ಬಗ್ಗೆ ನನಗೆ ತುಂಬ ನೋವಾಗಿದೆ ಎಂದು ಹೇಳಿದರು. ನಾನು ಕೇವಲ ಪಕ್ಷದ ರಾಜ್ಯಾಧ್ಯಕ್ಷನಲ್ಲ. ಅದಕ್ಕೂ ಮೊದಲು ಒಬ್ಬ ಸಾಮಾನ್ಯ ಕಾರ್ಯಕರ್ತ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಕೆಲವು ದಿನಗಳ ಹಿಂದೆ ಮೂರನೇ ಅಭ್ಯರ್ಥಿ ಹಾಕುವ ಬಗ್ಗೆ ದೂರವಾಣಿಯಲ್ಲಿ ಚರ್ಚೆ ಮಾಡಿ, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿದೆವು. ಫಲಿತಾಂಶ ಈ ರೀತಿ ಬರುತ್ತದೆ ಎಂದು ಊಹಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿಮ್ಮ ವಿರುದ್ಧ ಪಕ್ಷದೊಳಗೆ ಪಿತೂರಿ ನಡೆದಿದೆ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನನ್ನ ಹಣೆಯಲ್ಲಿ ಬರೆದಿದ್ದನ್ನು ಯಾರು ತಪ್ಪಿಸಲು ಆಗುವುದಿಲ್ಲ. ಅವರ ಹಣೆಯಲ್ಲಿ ಬರೆದಿದ್ದನ್ನು ತಪ್ಪಿಸಲು ಆಗದು. ಆಟ ಇಷ್ಟಕ್ಕೆ ಮುಗಿಯುವುದಿಲ್ಲ. ನಾನು ಯಡಿಯೂರಪ್ಪನವರ ಮಗ. ಎಲ್ಲಿಯೂ ಓಡಿಹೋಗುವುದಿಲ್ಲ ಎಂದು ಸೂಚ್ಯವಾಗಿ ನುಡಿದರು. ಬಿಜೆಪಿ, ಜೆಡಿಎಸ್ ಸಿಎಂ ಡಿ.ಕೆ.ಶಿವಕುಮಾರ್ ಅವರ ಚಾಣಾಕ್ಷ ನಡೆ ಮುಂದೆ ಸೋತಿತೇ? ಎಂಬ ಪ್ರಶ್ನೆಗೆ, ಎಂಥೆಂಥ ಚಾಣಾಕ್ಷರನ್ನೇ ಜನ ಮನೆಗೆ ಕಳುಹಿಸಿದ್ದಾರೆ. ಕಾಲ ಬಂದಾಗ ಎಲ್ಲಾ ಚಾಣುಕ್ಯರನ್ನು ಜನ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
