ನವದೆಹಲಿ, ಜೂ.19- ಭಾನುವಾರ (ಜೂ.21) ನಡೆಯಲಿರುವ ನೀಟ್ ಪರೀಕ್ಷೆಗೆ ಮುನ್ನ ಟೆಲಿಗ್ರಾಂ ಮೆಸೇಜಿಂಗ್ ಅಪ್ಲಿಕೇಶನ್‌ಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ದೆಹಲಿ ಹೈಕೋರ್ಟ್ ಸಮರ್ಥಿಸಿದೆ. ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರ ರಜಾಕಾಲೀನ ಪೀಠವು ತೀರ್ಪು ನೀಡಿದ್ದು, ಕೇಂದ್ರ ಸರ್ಕಾರ ಹೊರಡಿಸಿದ ಆದೇಶವು ಅನುಪಾತ ಮೀರಿ ಕೈಗೊಂಡ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ಟೆಲಿಗ್ರಾಂ ಸೇವೆಯನ್ನು ನಿರ್ಬಂಧಿಸುವ ಅಧಿಕಾರ ಸರ್ಕಾರಕ್ಕೆ ಇದೆ ಮತ್ತು ಈ ಕ್ರಮವು ಅತ್ಯಂತ ಕಡಿಮೆ ನಿರ್ಬಂಧಾತಕ ಕ್ರಮ ಎಂದು ನ್ಯಾಯಾಲಯ ಹೇಳಿದೆ.
ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದ ಟೆಲಿಗ್ರಾಂ ಪರ ವಕೀಲರು, ಈ ಕ್ರಮದ ಕಾನೂನುಬದ್ಧತೆಯನ್ನೇ ಪ್ರಶ್ನಿಸಿದ್ದರು. ಭಾರತದಲ್ಲಿ 15 ಕೋಟಿಗೂ ಹೆಚ್ಚು ಬಳಕೆದಾರರು ಸರ್ಕಾರದ ಈ ನಿರ್ಧಾರದಿಂದ ಪರಿಣಾಮಕ್ಕೊಳಗಾಗಿದ್ದಾರೆ ಎಂದು ಅವರು ವಾದಿಸಿದ್ದರು. ವೈದ್ಯಕೀಯ ಪ್ರವೇಶಕ್ಕಾಗಿ ಮೇ 3ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆಯಲ್ಲಿ ಮೇ 12ರಂದು ಪರೀಕ್ಷೆಯನ್ನು ರದ್ದುಗೊಳಿಸಿತ್ತು.
ಕೇಂದ್ರದ ನಿರ್ಬಂಧ ಆದೇಶ
ಟೆಲಿಗ್ರಾಂನಲ್ಲಿ ಈಗಾಗಲೇ ಪೋಸ್ಟ್ ಮಾಡಲಾದ ಸಂದೇಶಗಳನ್ನು ನಂತರ ಸಂಪಾದಿಸುವ ಸೌಲಭ್ಯವನ್ನು ಭಾರತದಲ್ಲಿ ಜೂನ್ 30ರವರೆಗೆ ನಿಷ್ಕ್ರಿಯಗೊಳಿಸಲು ಸರ್ಕಾರ ಪ್ರತ್ಯೇಕ ನಿರ್ದೇಶನ ನೀಡಿದೆ.
ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಬಳಿಕ ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸಲು ಈ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷಾ ಭದ್ರತೆಗೆ ಆದ್ಯತೆ
ನೀಟ್-ಯುಜಿ ಮರುಪರೀಕ್ಷೆಯ ಪಾವಿತ್ರ್ಯ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ಈ ಕ್ರಮಕ್ಕೆ ದೆಹಲಿ ಹೈಕೋರ್ಟ್ ಬೆಂಬಲ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
