ಗ್ವಾಡಲಜಾರಾ,ಜೂ.19- ದಕ್ಷಿಣ ಕೊರಿಯಾ ತಂಡದ ರಕ್ಷಣಾ ವಿಭಾಗದ ತಪ್ಪನ್ನು ಸದುಪಯೋಗಪಡಿಸಿಕೊಂಡ ಮೆಕ್ಸಿಕೋ 1-0 ಅಂತರದ ಗೆಲುವು ಸಾಧಿಸಿ, 2026ರ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ನಾಕೌಟ್ ಹಂತ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತವರಿನಲ್ಲಿ ಸಾವಿರಾರು ಅಭಿಮಾನಿಗಳ ಸಮುಖದಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಮೆಕ್ಸಿಕೋ ತಂಡದ ಆಟಗಾರರು ಪಂದ್ಯ ಅಂತ್ಯದಲ್ಲಿ ಮೈದಾನದ ಮಧ್ಯಭಾಗದಲ್ಲಿ ಸಂಭ್ರಮಾಚರಣೆ ನಡೆಸಿ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ರೊಮೊ ಗೋಲು ನಿರ್ಣಾಯಕ
ಪಂದ್ಯದ 50ನೇ ನಿಮಿಷದಲ್ಲಿ ಮೆಕ್ಸಿಕೋದ ಲೂಯಿಸ್ ರೊಮೊ ನಿರ್ಣಾಯಕ ಗೋಲು ಗಳಿಸಿದರು. ದಕ್ಷಿಣ ಕೊರಿಯಾದ ಗೋಲ್‌ಕೀಪರ್ ಕಿಮ್ ಸೆಯುಂಗ್-ಗ್ಯು ಹಾಗೂ ರಕ್ಷಣಾ ಆಟಗಾರ ಲೀ ಗಿ-ಹ್ಯುಕ್ ನಡುವೆ ಉಂಟಾದ ಗೊಂದಲದಿಂದ ಚೆಂಡು ಕೈತಪ್ಪಿ ಬಿದ್ದಾಗ, ರೊಮೊ ಸುಲಭವಾಗಿ ಚೆಂಡನ್ನು ಗೋಲಿನ ಬಲೆಗೆ ತಳ್ಳಿದರು.
ಕೊರಿಯಾದ ಹೋರಾಟ ವಿಫಲ
ನಂತರ 87ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾ ಸಮಬಲ ಸಾಧಿಸುವ ಅವಕಾಶ ಪಡೆದಿತ್ತು. ಚೋ ಗುಯೆ-ಸುಂಗ್ ಅವರ ಹೆಡರ್ ಅನ್ನು ಮೆಕ್ಸಿಕೋ ಗೋಲ್‌ಕೀರ್ಪ ರೌಲ್ ರಾಂಗೆಲ್ ಅದ್ಭುತವಾಗಿ ತಡೆದರು.
ಮರುಕ್ಷಣವೇ ಯಾಂಗ್ ಹ್ಯುನ್-ಜುನ್ ಹೊಡೆದ ರೀಬೌಂಡ್ ಪ್ರಯತ್ನವನ್ನೂ ರಾಂಗೆಲ್ ಕೈಚಾಚಿ ತಡೆದು ತಂಡದ ಗೆಲುವನ್ನು ಖಚಿತಪಡಿಸಿದರು.
ಗುಂಪು ಎ ಯಲ್ಲಿ ಮೆಕ್ಸಿಕೋ ಅಗ್ರಸ್ಥಾನ
ಈ ಗೆಲುವಿನೊಂದಿಗೆ ಮೆಕ್ಸಿಕೋ ಎರಡು ಪಂದ್ಯಗಳಿಂದ 6 ಅಂಕಗಳನ್ನು ಪಡೆದು ಗುಂಪು ಎ ಯಲ್ಲಿ ಅಗ್ರಸ್ಥಾನಕ್ಕೇರಿದೆ. ಮೆಕ್ಸಿಕೋ- 6 ಅಂಕ,ದಕ್ಷಿಣ ಕೊರಿಯಾ- 3 ಅಂಕ ಚೆಕ್ ಗಣರಾಜ್ಯ-1 ಅಂಕ ಮತ್ತು
ದಕ್ಷಿಣ ಆಫ್ರಿಕಾ – 1 ಅಂಕ ಗಳಿಸಿದೆ ಇದರಲ್ಲಿ 2 ತಂಡ ಪಂದ್ಯಾವಳಿಯಿಂದ ನಿರ್ಗಮಿಸಲಿದೆ. ಮೆಕ್ಸಿಕೋ ತರಬೇತುದಾರ ಅಗ್ವಿರೆ ಈ ಪಂದ್ಯ ಅತ್ಯುತ್ತಮ ಪಂದ್ಯವಾಗಿರಲಿಲ್ಲ. ಎದುರಾಳಿಗಳು ನಮಗೆ ಹೆಚ್ಚಿನ ಅವಕಾಶ ನೀಡಲಿಲ್ಲ. ಆದರೂ ಅವರ ತಪ್ಪನ್ನು ಬಳಸಿಕೊಂಡು ಗೋಲು ಗಳಿಸಿ ಜಯ ಸಾಧಿಸಿದ್ದೇವೆ. ನಾಕೌಟ್ ಹಂತ ಖಚಿತವಾದುದು ಆಟಗಾರರ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿದೆ ಎಂದು ಹೇಳಿದರು.
ದಕ್ಷಿಣ ಕೊರಿಯಾದ ನಾಯಕ ಸೊನ್ ಮತ್ತೊಮೆ ನಿರಾಸೆ ಮೂಡಿಸುವ ಪ್ರದರ್ಶನ ನೀಡಿದರು.
ಪಂದ್ಯದ 57ನೇ ನಿಮಿಷದಲ್ಲಿ ಅವರನ್ನು ಬದಲಾಯಿಸಲಾಯಿತು. ವಿಶ್ವಕಪ್‌ನಲ್ಲಿ ದಕ್ಷಿಣ ಕೊರಿಯಾದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆ ಬೆನ್ನಟ್ಟುತ್ತಿರುವ ಸೊನ್, ಇದುವರೆಗೆ ಮೂರು ವಿಶ್ವಕಪ್‌ಗಳಲ್ಲಿ ಮೂರು ಗೋಲುಗಳನ್ನು ದಾಖಲಿಸಿದ್ದಾರೆ.
45,664 ಪ್ರೇಕ್ಷಕರ ಸಾಮರ್ಥ್ಯದ ಸ್ಟೇಡಿಯಂನಲ್ಲಿ 45,522 ಪ್ರೇಕ್ಷಕರು ಪಂದ್ಯ ವೀಕ್ಷಿಸಿದರು. ಪಂದ್ಯಕ್ಕೂ ಮುನ್ನ ದೇಶದ ವಿವಿಧ ಭಾಗಗಳ ಅಭಿಮಾನಿ ವಲಯಗಳಲ್ಲಿ ಭಾರೀ ಸಂಭ್ರಮ ಕಂಡುಬಂದಿತು.
ಇದೇ ವೇಳೆ, ಮೆಕ್ಸಿಕೋದಲ್ಲಿ ಕಾಣೆಯಾಗಿರುವ ಸುಮಾರು 1.3 ಲಕ್ಷ ಜನರ ಕುಟುಂಬಸ್ಥರು ಗ್ವಾಡಲಜಾರಾದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು.
ಮೆಕ್ಸಿಕೋ ತನ್ನ ಕೊನೆಯ ಗುಂಪು ಪಂದ್ಯದಲ್ಲಿ ಚೆಕ್ ಗಣರಾಜ್ಯವನ್ನು ಎದುರಿಸಲಿದ್ದು, ದಕ್ಷಿಣ ಕೊರಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.
