ಬೆಂಗಳೂರು, ಅ.26- ಆಡಳಿತಾರೂಢ ಕಾಂಗ್ರೆಸ್ ಹಾಗೂ ಎನ್ಡಿಎ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದ್ದ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಸಂಜೆ ವೇಳೆಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಗಳಿವೆ.
ಈ ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 43 ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಪಕ್ಷತೇರ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಶಿಕ್ಷಕರು ಹಾಗೂ ಪದವೀಧರ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಈಗಾಗಲೇ ಮತಪತ್ರದಲ್ಲಿ ಬರೆದಿದ್ದಾರೆ. ನಾಳೆ ಮತ ಎಣಿಕೆಯ ನಂತರ ಫಲಿತಾಂಶ ಪ್ರಕಟವಾಗಲಿದೆ.
ಎನ್ಡಿಎ ಮೈತ್ರಿ ಕೂಟದ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಆಡಳಿತಾರೂಢ ಕಾಂಗ್ರೆಸ್ ನಡುವಿನ ಪ್ರತಿಷ್ಠೆಯ ಕಣವಾಗಿದ್ದ ಈ ಚುನಾಣೆಯಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಿದ್ದರೆ, ಉಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿತ್ತು.
ಪ್ರಾಶಸ್ತ್ಯದ ಮತದಾನವಾಗಿರುವುದರಿಂದ ಮತ ಎಣಿಕೆ ವಿಳಂಬವಾಗಲಿದ್ದು, ಅ. 27ರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾದರೂ ಸಂಜೆ ವೇಳೆಗೆ ಚುನಾವಣಾ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ. ಬೆಂಗಳೂರು ಶಿಕ್ಷಕರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳ ಮತ ಎಣಿಕೆಯು ನಾಳೆ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ. ಹೀಗಾಗಿ ಕಲಾ ಕಾಲೇಜಿಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಶೇ.81.98, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.86.97, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಶೇ.75.62 ಹಾಗೂ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶೇ.73.58ರಷ್ಟು ಮತದಾನವಾಗಿದೆ ಎಂದು ರಾಜ್ಯ ಮುಖ್ಯ ಚುನಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮಾಜಿ ಉಪ ಸಭಾಪತಿ ಪುಟ್ಟಣ್ಣ, ಜೆಡಿಎಸ್ನಿಂದ ಎ.ಪಿ.ರಂಗನಾಥ ಸೇರಿದಂತೆ ಒಟ್ಟು ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಶರಣಪ್ಪ ಮಟ್ಟೂರು, ಬಿಜೆಪಿಯಿಂದ ಶಶೀಲ್ ಜಿ.ನಮೋಶಿ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಶಶಿ ಹುಲಿಕುಂಟೆಮಠ್, ಬಿಜೆಪಿಯಿಂದ ಕೆ.ಎಂ.ಸುರೇಶ ಅವರು ಸೇರಿದಂತೆ 10 ಅಭ್ಯರ್ಥಿಗಳು ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮೋಹನ ಲಿಂಬಿಕಾಯಿ, ಬಿಜೆಪಿಯಿಂದ ಸಂಕನೂರ ಎಸ್.ವಿ. ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.
ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ, ಸಂಕನೂರ ಎಸ್.ವಿ., ಶಶೀಲ್ ಜಿ.ನಮೋಶಿ, ಪುಟ್ಟಣ್ಣ ಅವರು ನವೆಂಬರ್ 11ರಂದು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿಯಾಗಲಿದ್ದು, ನಿವೃತ್ತಿಯಿಂದ ತೆರವಾಗುವ ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣೆ ನಡೆಸುತ್ತಿದೆ. ಅಕ್ಟೋಬರ್ 31ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದ್ದು, ಚುನಾವಣಾ ನೀತಿ ಸಂಹಿತೆಯು ಅಂತ್ಯಗೊಳ್ಳಲಿದೆ.
