ಗಣೇಶ ಹಬ್ಬಕ್ಕೆ ಸಕ್ಕರೆ ಕೊರತೆ ತಪ್ಪಿಸಲು ಕೇಂದ್ರದಿಂದ ಕಟ್ಟುನಿಟ್ಟಿನ ಕ್ರಮ

0
158
Sugar Export

ನವದೆಹಲಿ,ಆ.26- ಗಣೇಶ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಸಕ್ಕರೆ ಸಮರ್ಪಕವಾಗಿ ಲಭ್ಯವಾಗುವಂತೆ ಹಾಗೂ ಬೆಲೆ ಸ್ಥಿರತೆ ಕಾಪಾಡಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಸಕ್ಕರೆ ದಾಸ್ತಾನು, ವಿತರಣೆ ಮತ್ತು ಮಾರುಕಟ್ಟೆ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಬ್ಬದ ಅವಧಿಯಲ್ಲಿ ಕೃತಕ ಅಭಾವ ಹಾಗೂ ಅಕ್ರಮ ದಾಸ್ತಾನು ತಡೆಯುವ ಉದ್ದೇಶದಿಂದ ಸಕ್ಕರೆ ವಿತರಕರ ದಾಸ್ತಾನು ಮಿತಿಯನ್ನು ದೇಶಾದ್ಯಂತ 4,000 ಕ್ವಿಂಟಲ್‌ನಿಂದ 2,000 ಕ್ವಿಂಟಲ್‌ಗೆ ಇಳಿಸಲಾಗಿದೆ. ಈ ಹೊಸ ಮಿತಿ ಸೆಪ್ಟೆಂಬರ್‌ 15ರಿಂದ ಜಾರಿಗೆ ಬರಲಿದ್ದು, ನವೆಂಬರ್‌ 30ರವರೆಗೆ ಅನ್ವಯಿಸಲಿದೆ. ಸಕ್ಕರೆ ವ್ಯಾಪಾರಿಗಳು ದಾಸ್ತಾನು ಸ್ವೀಕರಿಸಿದ ದಿನದಿಂದ 30 ದಿನಗಳಿಗಿಂತ ಹೆಚ್ಚಿನ ಅವಧಿಗೆ ಅದನ್ನು ಹೊಂದಿರಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಆದರೆ, ಕೋಲ್ಕತ್ತಾ ಮತ್ತು ಅದರ ವ್ಯಾಪ್ತಿಯ ಮಹಾನಗರ ಪ್ರದೇಶಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಅಲ್ಲಿ ಪ್ರಸ್ತುತ ಜಾರಿಯಲ್ಲಿರುವ 4,000 ಕ್ವಿಂಟಲ್‌ ದಾಸ್ತಾನು ಮಿತಿ ಮುಂದುವರಿಯಲಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ಸಕ್ಕರೆ ಪಡೆಯುವ ಕೋಲ್ಕತ್ತಾ, ಪೂರ್ವ ಹಾಗೂ ಈಶಾನ್ಯ ರಾಜ್ಯಗಳಿಗೆ ಪೂರೈಕೆಯ ಪ್ರಮುಖ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಈ ವಿನಾಯಿತಿ ನೀಡಲಾಗಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ದೇಶದ ಸಕ್ಕರೆ ಕಾರ್ಖಾನೆಗಳು, ಡೀಲರ್‌ಗಳು ಮತ್ತು ವ್ಯಾಪಾರಿಗಳ ದಾಸ್ತಾನುಗಳ ಮೇಲೆ ಸರ್ಕಾರ ನಿರಂತರವಾಗಿ ನಿಗಾ ಇರಿಸಿದೆ. ಅಗತ್ಯ ಪರಿಶೀಲನೆ ಮತ್ತು ಮೇಲ್ವಿಚಾರಣೆ ಮುಂದಿನ ವಾರಗಳಲ್ಲೂ ಮುಂದುವರಿಯಲಿದೆ. ಇದರಿಂದ ದೇಶಾದ್ಯಂತ ಸಕ್ಕರೆ ಸಾಗಣೆ ಮತ್ತು ಮಾರಾಟ ಸುಗಮವಾಗಿದ್ದು, ಮಾರುಕಟ್ಟೆಯಲ್ಲಿ ಕೃತಕ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರದ ಸಕಾಲಿಕ ಕ್ರಮಗಳ ಪರಿಣಾಮ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿನ ಸಕ್ಕರೆ ಬೆಲೆ ಸುಮಾರು ಶೇ.20ರಷ್ಟು ಇಳಿಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಚಿಲ್ಲರೆ ಬೆಲೆಯಲ್ಲೂ ಇಳಿಕೆಯ ಪ್ರವತ್ತಿ ಕಂಡುಬರುತ್ತಿದ್ದು, ಎಕ್‌್ಸ-ಮಿಲ್‌ ಬೆಲೆಗಳಲ್ಲೂ ಮತ್ತಷ್ಟು ಕಡಿತ ನಿರೀಕ್ಷಿಸಲಾಗಿದೆ.

ಸಕ್ಕರೆ ದಾಸ್ತಾನು ಘೋಷಣೆ ಮತ್ತು ನವೀಕರಣಕ್ಕಾಗಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಆನ್‌ಲೈನ್‌ ಪೋರ್ಟಲ್‌ ಮೂಲಕ ವ್ಯವಸ್ಥೆ ಜಾರಿಯಲ್ಲಿದೆ. ಕೃತಕ ಅಭಾವ ಸಷ್ಟಿಸುವುದು, ಮಿತಿಗಿಂತ ಹೆಚ್ಚಿನ ದಾಸ್ತಾನು ಇಡುವುದು ಅಥವಾ ಬೆಲೆ ಏರಿಕೆಗೆ ಕಾರಣವಾಗುವ ಚಟುವಟಿಕೆ ನಡೆಸುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.