Thursday, April 16, 2026
Homeರಾಜ್ಯವಿಧಾನಸಭೆಯಲ್ಲಿ ಮನರೇಗಾ ಪ್ರತಿಧ್ವನಿ : ಕಾವೇರಿದ ಧ್ವನಿಯಲ್ಲಿ ವಾಗ್ವಾದ

ವಿಧಾನಸಭೆಯಲ್ಲಿ ಮನರೇಗಾ ಪ್ರತಿಧ್ವನಿ : ಕಾವೇರಿದ ಧ್ವನಿಯಲ್ಲಿ ವಾಗ್ವಾದ

MNREGA echoes in the Assembly: Heated Argument

ಬೆಂಗಳೂರು,ಜ.29- ಮನರೇಗಾ ಪುನರ್‌ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸುವಂತಹ ಜಾಹೀರಾತನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪತ್ರಿಕೆಗಳಿಗೆ ನೀಡಿರುವ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ದನಿಯಲ್ಲಿ ವಾಗ್ವಾದ,

ಆರೋಪ-ಪ್ರತ್ಯಾರೋಪ ಕೋಲಾಹಲದ ವಾತಾವರಣ ಉಂಟಾಗಿ ಸದನ ಮುಂದೂಡಿದ ಪ್ರಸಂಗ ಜರುಗಿತು.ಪ್ರಶ್ನೋತ್ತರ ವೇಳೆಯ ನಂತರ ಬಿಜೆಪಿಯ ಹಿರಿಯ ಶಾಸಕ ಎಸ್‌‍.ಸುರೇಶ್‌ಕುಮಾರ್‌ರವರು ಜಾಹೀರಾತು ನೀಡಿರುವ ಪತ್ರಿಕೆಯೊಂದನ್ನು ಸದನದಲ್ಲಿ ಪ್ರದರ್ಶಿಸಿ ಜನಸಾಮಾನ್ಯರ ತೆರಿಗೆ ಹಣವನ್ನು ಕೇಂದ್ರ ಸರ್ಕಾರದ ಕಾಯ್ದೆ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಜಾಹೀರಾತು ನೀಡಿದೆ. ಮರಣ ಶಾಸನ ಎಂದು ಉಲ್ಲೇಖಿಸಿದೆ. ಮುಖಪುಟದಲ್ಲಿ ಈ ರೀತಿಯ ಜಾಹೀರಾತು ನೀಡುವ ಮೂಲಕ ಜನರ ತೆರಿಗೆ ಹಣದ ಲೂಟಿಯಾಗುತ್ತಿದೆ. ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ವಿರೋಧವಿದ್ದರೆ ಕಾಂಗ್ರೆಸ್‌‍ ಪಕ್ಷದಿಂದ ಕೊಡಲಿ, ಸರ್ಕಾರದ ಇಲಾಖೆಯಿಂದ ಏಕೆ ಕೊಡಬೇಕು ಎಂದು ಖಾರವಾಗಿ ಪ್ರಶ್ನಿಸಿದರು.

ಈ ಹಂತದಲ್ಲಿ ಜೆಡಿಎಸ್‌‍, ಬಿಜೆಪಿಯ ಶಾಸಕರು ಎದ್ದು ನಿಂತು ಏರಿದ ದನಿಯಲ್ಲಿ ಯಾರ ಮನೆಯ ಆಸ್ತಿ, ಅಭಿವೃದ್ಧಿಗೆ ಹಣ ಕೊಡಲು ಆಗದೆ ಜಾಹೀರಾತು ಕೊಟ್ಟಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಪ್ರತಿಯಾಗಿ ಸಚಿವ ಪ್ರಿಯಾಂಕ್‌ ಖರ್ಗೆ, ಕೆ.ಜೆ.ಜಾರ್ಜ್‌ ಸೇರಿದಂತೆ ಆಡಳಿತ ಪಕ್ಷದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಲು ಮುಂದಾದಾಗ ವಾಗ್ವಾದ, ಗೊಂದಲದ ವಾತಾವರಣ ನಿರ್ಮಾಣವಾಯಿತು.

ಮತ್ತೆ ಮಾತನಾಡಿದ ಸುರೇಶ್‌ ಕುಮಾರ್‌, ಅವರ ಪಕ್ಷದಿಂದ ಕೊಟ್ಟಿದ್ದರೆ ನಮಗೆ ತಕರಾರಿಲ್ಲ. ಇಲಾಖೆ ಮೂಲಕ ಜಾಹೀರಾತು ನೀಡಿ ತೆರಿಗೆ ಹಣ ಲೂಟಿ ಮಾಡಬಾರದು ಎಂದರು. ಇದಕ್ಕೆ ದನಿಗೂಡಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ಈರೀತಿ ಅಪಪ್ರಚಾರ ಮಾಡಿದರೆ ಕೇಂದ್ರ ಮತ್ತು ರಾಜ್ಯಸರ್ಕಾರದ ಬಾಂಧವ್ಯ ಹೇಗೆ ಉಳಿಯುತ್ತದೆ? ಜಾಹೀರಾತಿನ ಹಣವನ್ನು ಕಾಂಗ್ರೆಸ್‌‍ ಪಕ್ಷದಿಂದ ಭರಿಸಬೇಕು. ಸಂಬಂಧಿಸಿದ ಸಚಿವರಿಗೆ ಜವಾಬ್ದಾರಿ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಶಾಸಕ ಸುನಿಲ್‌ಕುಮಾರ್‌ ಒಕ್ಕೂಟ ವ್ಯವಸ್ಥೆ ಎನ್ನುತ್ತಿದ್ದಂತೆ, ಸಚಿವರಾದ ದಿನೇಶ್‌ಗುಂಡೂರಾವ್‌, ಲಕ್ಷ್ಮೀಹೆಬ್ಬಾಳ್ಕರ್‌ರವರು ಮಾತನಾಡಿ, ಈಗ ಒಕ್ಕೂಟ ವ್ಯವಸ್ಥೆ ನೆನಪಿಗೆ ಬಂತೇ ಎಂದು ಛೇಡಿಸಿದರು.

ಇದಕ್ಕೆ ಪ್ರತಿಯಾಗಿ ಸುರೇಶ್‌ಕುಮಾರ್‌, ಪೊನ್ನಣ್ಣ ಮಾತನಾಡಿದ್ದಕ್ಕೆ ಇದು ನಿದರ್ಶನವೇ? ಎಂದರು. ಸುನೀಲ್‌ಕುಮಾರ್‌ ಅವರು ನೀತಿ ಆಯೋಗದ ಸಭೆಗೆ ಹೋಗದೇ ಇಲ್ಲಿ ಕೂಗಾಡುತ್ತೀರಾ ಎಂದು ಪ್ರಶ್ನಿಸಿದರು.ಪ್ರಿಯಾಂಕ್‌ಖರ್ಗೆಯವರು ಮಹಾತ ಗಾಂಧೀಜಿ ಹೆಸರು ತೆಗೆದಿರುವುದು ಸರಿಯೇ?, ಯೋಜನಾ ಆಯೋಗವನ್ನು ವಿಸರ್ಜಿಸಿ ನೀತಿ ಆಯೋಗ ಮಾಡಿದ್ದು ಏಕೆ? ಎಂದು ಕೇಳಿದರು.

ಸುನಿಲ್‌ಕುಮಾರ್‌ ಮಾತನಾಡಿ, ಕೇಂದ್ರ ಸರ್ಕಾರದ ಕಾಯ್ದೆ ವಿರುದ್ಧ ರಾಜ್ಯಸರ್ಕಾರ ಜಾಹೀರಾತು ನೀಡಿದೆ. ಅದೇ ರೀತಿ ಗ್ರಾಮ ಪಂಚಾಯಿತಿಗಳು, ನಗರ ಸ್ಥಳೀಯ ಸಂಸ್ಥೆಗಳು ರಾಜ್ಯಸರ್ಕಾರದ ವಿರುದ್ಧ ಜಾಹೀರಾತು ನೀಡಿದ್ದರೆ ಒಪ್ಪುತ್ತೀರಾ? ಎಂದು ಪ್ರಶ್ನಿಇದರು.ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಗಾಂಧೀಜಿ ಬಗ್ಗೆ ಮಾತನಾಡಲು ಇವರಿಗೆ ಯೋಗ್ಯತೆ ಇಲ್ಲ ಎಂದರು.

ಮತ್ತೆ ಬಸನಗೌಡ ಪಾಟೀಲ ಯತ್ನಾಳ್‌ ಮಾತನಾಡಿ, ನಕಲಿ ಗಾಂಧಿಗೆ ಗೌರವ ಕೊಡುತ್ತಾರೆ. ಮಹಾತ ಗಾಂಧೀಜಿಗೆ ಗೌರವ ಕೊಡುತ್ತಿಲ್ಲ ಎಂದು ಟೀಕಿಸಿದರು.ದಿನೇಶ್‌ಗುಂಡೂರಾವ್‌ ಅವರು ಕೇಂದ್ರ ಸರ್ಕಾರದ ಕಾಯ್ದೆ ರಾಜ್ಯಕ್ಕೆ ಮಾರಕವಾದಾಗ ಅದರ ವಿರುದ್ಧ ಮಾತನಾಡಲು ಹಕ್ಕಿಲ್ಲವೇ?, ಕೆಲವು ಕಾನೂನುಗಳ ವಿರುದ್ಧ ಹೋರಾಟ ಮಾಡಿಲ್ಲವೇ? ಎಂದು ಪ್ರಶ್ನಿಸಿದರು.

ಪ್ರಿಯಾಂಕ್‌ ಖರ್ಗೆ ಮಾತನಾಡಿ, ಜಾಹೀರಾತನ್ನು ನಾಳೆಯೂ ನೀಡುತ್ತೇವೆ, ದೆಹಲಿಯಲ್ಲೂ ನೀಡುತ್ತೇವೆ. ಯಾವ ಕಾನೂನು ಉಲ್ಲಂಘನೆಯಾಗಿದೆ ಹೇಳಿ ಎಂದು ಆಗ್ರಹಿಸಿದರು. ಆಗ ಸುರೇಶ್‌ಕುಮಾರ್‌, ಆಳುವ ಪಕ್ಷ ಬೇರೆ, ಸರ್ಕಾರ ಬೇರೆ. ರಾಜಕೀಯ ಉದ್ದೇಶಕ್ಕಾದರೆ ಜಾಹೀರಾತು ನೀಡಲಿ, ಸರ್ಕಾರದಿಂದ ಜಾಹೀರಾತು ನೀಡುವುದು ಅಕ್ಷಮ್ಯ ಅಪರಾಧ ಎಂದರು.

ಆಗ ಕಾಂಗ್ರೆಸ್‌‍ ಮತ್ತು ಪ್ರತಿಪಕ್ಷಗಳ ಶಾಸಕರು ಏರಿದ ದನಿಯಲ್ಲಿ ಎದ್ದುನಿಂತು ಆರೋಪ-ಪ್ರತ್ಯಾರೋಪದಲ್ಲಿ ನಿರತರಾದರು. ಸದನ ಗದ್ದಲ, ಗೊಂದಲದಿಂದ ಕೂಡಿತ್ತು. ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಪದೇ ಪದೇ ಮಾಡಿದ ಮನವಿಗೆ ಯಾರೂ ಕಿವಿಗೊಡದಿದ್ದಾಗ ಸದನದ ಕಾರ್ಯಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.

RELATED ARTICLES

Latest News