ನವದೆಹಲಿ,ಜು.23- ದೇಶಾದ್ಯಂತ ತೀವ್ರ ಕೋಲಾಹಲ ಸೃಷ್ಟಿಸಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜಂತರ್ ಮಂಥರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಈಗ ಹೊಸ ರೂಪು ಪಡೆದುಕೊಂಡಿದ್ದು, ಗಂಭೀರ ತಿರುವು ಪಡೆದಿವೆ.
ವಿದ್ಯಾರ್ಥಿಗಳ ಹಿತರಕ್ಷಣೆ ಮತ್ತು ಪರೀಕ್ಷಾ ವ್ಯವಸ್ಥೆಯ ಸುಧಾರಣೆಗಾಗಿ ಸಿಜೆಪಿ ಸಂಸ್ಥೆಯ ನೇತೃತ್ವದಲ್ಲಿ ಆರಂಭಗೊಂಡಿದ್ದ ಈ ಹೋರಾಟದ ಹಿಂದೆ ಬಹುದೊಡ್ಡ ವಿದೇಶಿ ಶಕ್ತಿಗಳ ಕೈವಾಡವಿರುವ ಅನುಮಾನಗಳು ವ್ಯಕ್ತವಾಗುತ್ತಿದ್ದು, ತನಿಖಾ ಸಂಸ್ಥೆಗಳ ಗಮನ ಸೆಳೆದಿವೆ. ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟದ ಹಿಂದೆ ವಿದೇಶಿ ಹಸ್ತಕ್ಷೇಪ ಮತ್ತು ಅಕ್ರಮ ಹಣಕಾಸಿನ ವಹಿವಾಟು ನಡೆದಿರುವ ಬಲವಾದ ಅನುಮಾನಗಳು ವ್ಯಕ್ತವಾಗಿವೆ.
ಕತಾರ್ನಿಂದ ಹರಿದುಬಂತಾ ಆರ್ಥಿಕ ನೆರವು? :
ಜಂತರ್ ಮಂಥರ್ನಲ್ಲಿ ಸುದೀರ್ಘವಾಗಿ ನಡೆಯುತ್ತಿರುವ ಈ ಪ್ರತಿಭಟನೆಗೆ ಆರ್ಥಿಕ ಶಕ್ತಿ ಎಲ್ಲಿಂದ ಸಿಗುತ್ತಿದೆ ಎಂಬ ಪ್ರಶ್ನೆಗೆ ಈಗ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಈ ಹೋರಾಟಕ್ಕೆ ಕತಾರ್ ದೇಶದಿಂದ ಭಾರೀ ಪ್ರಮಾಣದ ಆರ್ಥಿಕ ನೆರವು (ಫಂಡಿಂಗ್) ಬಂದಿದೆ ಎನ್ನಲಾಗಿದ್ದು, ವಿದೇಶಿ ಶಕ್ತಿಗಳು ದೇಶದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿವೆಯೇ ಎಂಬ ಅನುಮಾನ ಮೂಡಿಸಿದೆ.
ಲಕ್ಷಾಂತರ ರೂಪಾಯಿ ವೆಚ್ಚ :
ಪ್ರತಿಭಟನಾ ಸ್ಥಳದಲ್ಲಿ ಪ್ರತಿಭಟನಾಕಾರರಿಗೆ ನಿರಂತರವಾಗಿ ಆಹಾರ, ನೀರು ಮತ್ತು ಇತರ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಪ್ರತಿಭಟನಾಕಾರರಿಗೆ ನೀಡಲಾಗುತ್ತಿರುವ ಒಂದು ಹೊತ್ತಿನ ಊಟದ ವೆಚ್ಚವೇ ಬರೋಬ್ಬರಿ 600 ರೂಪಾಯಿ! ಪ್ರತಿ ದಿನ ನೂರಾರು ಜನರಿಗೆ ಇಷ್ಟೊಂದು ದುಬಾರಿ ಊಟ ಮತ್ತು ಉಪಾಹಾರ ಪೂರೈಸಲು ಕೋಟ್ಯಂತರ ರೂಪಾಯಿ ಎಲ್ಲಿಂದ ಬರುತ್ತಿದೆ? ಇಷ್ಟೊಂದು ಬೃಹತ್ ಮಟ್ಟದಲ್ಲಿ ಹಣ ಸುರಿಯುತ್ತಿರುವ ಸೂತ್ರಧಾರ ಯಾರು? ಎಂಬ ಮೂಲಭೂತ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಉತ್ತರ ಭಾರತದಿಂದ ಬಾಡಿಗೆ ಗೂಂಡಾಗಳ ಆಗಮನ :
ಇಷ್ಟೇ ಅಲ್ಲದೆ, ಹೋರಾಟವನ್ನು ತೀವ್ರಗೊಳಿಸಲು ಮತ್ತು ಸ್ಥಳದಲ್ಲಿ ಗೊಂದಲ ಸೃಷ್ಟಿಸಲು ಉತ್ತರ ಭಾರತದ ವಿವಿಧ ಭಾಗಗಳಿಂದ ಬಾಡಿಗೆ ಗೂಂಡಾಗಳನ್ನು ಕರೆತರಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಸಾಧಾರಣ ವಿದ್ಯಾರ್ಥಿಗಳ ಹೋರಾಟದಂತೆ ಬಿಂಬಿತವಾಗುತ್ತಿದ್ದ ಈ ಪ್ರತಿಭಟನೆಯಲ್ಲಿ, ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಆಯೋಜಿತ ಗುಂಪುಗಳು ಮತ್ತು ಬಾಡಿಗೆ ಆಳುಗಳೇ ಸಕ್ರಿಯರಾಗಿರುವುದು ಅನುಮಾನಗಳನ್ನು ದ್ವಿಗುಣಗೊಳಿಸಿದೆ.
ಈ ಎಲ್ಲಾ ಅಕ್ರಮ ಚಟುವಟಿಕೆಗಳು ಹಾಗೂ ವಿದೇಶಿ ಫಂಡಿಂಗ್ ಜಾಲದ ಸುಳಿವು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಲಭ್ಯವಾಗಿದೆ ಎನ್ನಲಾಗಿದೆ. ದೇಶದ ಶಾಂತಿ ಮತ್ತು ಭದ್ರತೆಗೆ ಭಂಗ ತರುವ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಹೆಸರಿನಲ್ಲಿ ಅಸ್ಥಿರತೆ ಸೃಷ್ಟಿಸುವ ಹುನ್ನಾರ ಇದರ ಹಿಂದಿದೆಯೇ ಎಂಬ ಕೋನದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ರಹಸ್ಯ ತನಿಖೆ ಆರಂಭಿಸಿವೆ.
ಹಿಂದೆಯೂ ಕೂಡ ದೇಶದಲ್ಲಿ ನಡೆದ ಹಲವು ದೊಡ್ಡ ಮಟ್ಟದ ಪ್ರತಿಭಟನೆಗಳ ಹಿಂದೆ ವಿದೇಶಿ ಹಣಕಾಸು ನೆರವು ಮತ್ತು ಟೂಲ್ಕಿಟ್ಗಳ ಕೈವಾಡವಿದ್ದದ್ದು ಸಾಬೀತಾಗಿತ್ತು. ಪ್ರಸ್ತುತ ನೀಟ್ ಹೋರಾಟದಲ್ಲೂ ಅದೇ ಮಾದರಿಯ ಪ್ರಚೋದನಾತಕ ಮತ್ತು ಆಯೋಜಿತ ಶಕ್ತಿಗಳು ಕೆಲಸ ಮಾಡುತ್ತಿವೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ಶೀಘ್ರದಲ್ಲೇ ಬಹಿರಂಗಪಡಿಸುವ ಸಾಧ್ಯತೆಯಿದೆ.
ಹಿಂದಿನ ದಿನಗಳಲ್ಲಿ ನೀಟ್ ಅಕ್ರಮಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ನಡೆಸಿದ ನೈಜ ಹೋರಾಟಗಳಿಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಪರೀಕ್ಷೆಗಳ ಪಾರದರ್ಶಕತೆ ಮತ್ತು ಎನ್ಟಿಎ ವ್ಯಯವಸ್ಥೆಯ ಸುಧಾರಣೆಗೆ ಸರ್ಕಾರವೂ ಹಲವು ಕ್ರಮಗಳನ್ನು ಕೈಗೊಂಡಿತ್ತು.
ಆದರೆ, ನೈಜ ವಿದ್ಯಾರ್ಥಿ ಹೋರಾಟದ ಮರೆಯಲ್ಲಿದ್ದುಕೊಂಡು ತಮದೇ ಆದ ರಾಜಕೀಯ ಹಾಗೂ ವಿಚ್ಛಿದ್ರಕಾರಕ ಅಜೆಂಡಾಗಳನ್ನು ಈಡೇರಿಸಿಕೊಳ್ಳಲು ವಿದೇಶಿ ಹಣದ ಸಹಾಯ ಪಡೆದ ಘಟನೆಗಳು ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿವೆ. ನೀಟ್ ವಿಷಯವನ್ನು ಮುಂದಿಟ್ಟುಕೊಂಡು ದೇಶದ ಶೈಕ್ಷಣಿಕ ವಾತಾವರಣವನ್ನು ಹಾಳುಮಾಡಲು ಯತ್ನಿಸಿದ ಶಕ್ತಿಗಳ ಮುಖವಾಡವನ್ನು ಶೀಘ್ರದಲ್ಲೇ ತನಿಖಾ ಸಂಸ್ಥೆಗಳು ಕಳಚಲಿವೆ.
ನೇಪಾಳ-ಬಾಂಗ್ಲಾದೇಶ ಮಾದರಿಯ ದಂಗೆಗೆ ಯತ್ನ:
ನೆರೆರಾಷ್ಟ್ರಗಳಾದ ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ವಿದ್ಯಾರ್ಥಿ/ಯುವಜನರ ಆಕ್ರೋಶವನ್ನು ಬಳಸಿಕೊಂಡು ಸರ್ಕಾರಗಳ ವಿರುದ್ಧ ದಂಗೆ ಎಬ್ಬಿಸಿ, ಇಡೀ ದೇಶವನ್ನು ಅರಾಜಕತೆಯತ್ತ ತಳ್ಳಲಾಗಿತ್ತು. ಅದೇ ಮಾದರಿಯನ್ನು ಅನುಕರಿಸಿ, ನೀಟ್ ಪರೀಕ್ಷೆಯ ಗೊಂದಲ ಮತ್ತು ವಿದ್ಯಾರ್ಥಿಗಳ ಅಸಮಾಧಾನವನ್ನೇ ದಾಳವಾಗಿ ಬಳಸಿಕೊಂಡು ಭಾರತದಲ್ಲೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಹಾಗೂ ಭಾರಿ ಗಲಭೆ ಸೃಷ್ಟಿಸಲು ಸಂಚು ರೂಪಿಸಲಾಗಿತ್ತು ಎಂಬ ಅನುಮಾನ ಇದೆ.
ಇಂಟರ್ನೆಟ್ ಇಲ್ಲದಿದ್ದರೂ ಮೆಸೇಜಿಂಗ್; ತಂತ್ರಜ್ಞಾನದ ದುರ್ಬಳಕೆ! :
ಗಲಭೆ ಅಥವಾ ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತಾ ದೃಷ್ಟಿಯಿಂದ ಪೊಲೀಸರು ಇಂಟರ್ನೆಟ್ ಸೇವೆ ರದ್ದುಗೊಳಿಸುವುದು ಸಾಮಾನ್ಯ. ಆದರೆ, ಈ ಸಂಚುಕೋರರು ಇಂಟರ್ನೆಟ್ ಇಲ್ಲದಿದ್ದರೂ ಪರಸ್ಪರ ಸಂಪರ್ಕದಲ್ಲಿರಲು ಅತ್ಯಾಧುನಿಕ ಆ್ಯಪ್ಗಳನ್ನು ಬಳಸಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸೈಬರ್ ಜಾಲದಿಂದ ತಪ್ಪಿಸಿಕೊಳ್ಳಲು ಮತ್ತು ಇಂಟರ್ನೆಟ್ ಇಲ್ಲದಿದ್ದರೂ ಕೆಲಸ ಮಾಡುವ ಮೆಶ್ ನೆಟ್ವರ್ಕ್ ತಂತ್ರಜ್ಞಾನವನ್ನು ಬಳಸಲಾಗಿದೆ.ಆನ್ಲೈನ್ ನೆಟ್ವರ್ಕ್ ಅಗತ್ಯಲ್ಲದೇ, ಬ್ಲೂಟೂತ್ ಮತ್ತು ರೇಡಿಯೋ ಫ್ರೀಕ್ವೆನ್ಸಿ ಆಧಾರದ ಮೇಲೆ ಹತ್ತಿರದ ಸಾಧನಗಳ ನಡುವೆ ಸಂದೇಶ ರವಾನಿಸುವ ಈ ಆ್ಯಪ್ಗಳನ್ನು ಗಲಭೆಕೋರರು ಪರಸ್ಪರ ಸಂದೇಶ ಹಾಗೂ ತಂತ್ರ ರೂಪಿಸಲು ದುರ್ಬಳಕೆ ಮಾಡಿಕೊಂಡಿದ್ದಾರೆ.
