Tuesday, October 8, 2024
Homeರಾಜ್ಯಅಶ್ಲೀಲ ಫೋಟೋ ಇದೆ ಎಂದು ಸ್ನೇಹಿತನಿಂದ 65 ಲಕ್ಷರೂ. ಪೀಕಿದ ಆರೋಪಿ ವಶಕ್ಕೆ

ಅಶ್ಲೀಲ ಫೋಟೋ ಇದೆ ಎಂದು ಸ್ನೇಹಿತನಿಂದ 65 ಲಕ್ಷರೂ. ಪೀಕಿದ ಆರೋಪಿ ವಶಕ್ಕೆ

ಬೆಂಗಳೂರು, ಫೆ.5- ಸ್ನೇಹಿತನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು ಆತನಿಂದ ಹಂತ ಹಂತವಾಗಿ 65 ಲಕ್ಷ ಹಣ ಪಡೆದು ವಿಶ್ವಾಸದ್ರೋಹ ಬಗೆದಿದ್ದ ಇಬ್ಬರು ಸಹೋದರರ ಪೈಕಿ ಒಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಮೂಲತಃ ಶಿವಮೊಗ್ಗದ ಮಣಿಕಂಠ ಎಂಬುವವರು ವಿಧಾನಸೌಧ ರಸ್ತೆಯಲ್ಲಿರುವ ಸಾಫ್ಟ್‍ವೇರ್ ಕಂಪೆನಿಯೊಂದರಲ್ಲಿ ಸಾಫ್ಟ್‍ವೇರ್ ಉದ್ಯೋಗಿ.

ಅಕ್ಷಯ್ ಕುಮಾರ್ ಹಾಗೂ ಈತನ ಅಣ್ಣ ಭರತ್ 18 ವರ್ಷಗಳಿಂದ ಮಣಿಕಂಠ ಅವರಿಗೆ ಸ್ನೇಹಿತನಾಗಿದ್ದು, ಸಹೋದರರು ಹಾಗೂ ಮತ್ತಿತರರು ಸೇರಿಕೊಂಡು ವೈಯಕ್ತಿಕ ಫೋಟೋಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ನಿನ್ನ ಮೊಬೈಲ್‍ನಿಂದ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೇಳುತ್ತಿದ್ದು, ನೀನು ಆತನಿಗೆ 12 ಲಕ್ಷ ಕೊಟ್ಟರೆ ಫೋಟೋಗಳನ್ನು ವಾಪಸ್ ಪಡೆದುಕೊಳ್ಳಬಹುದೆಂದು ತಿಳಿಸಿದ್ದಾರೆ.

ಇದರಿಂದ ಹೆದರಿದ ಮಣಿಕಂಠ ಅವರು 11.20 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದು ಅಕ್ಷಯ್‍ಕುಮಾರ್‍ಗೆ ಕೊಟ್ಟಿದ್ದಾನೆ. ಈತನ ಬಳಿ ಸಾಕಷ್ಟು ಹಣವಿದೆ ಎಂದು ಅರಿತು ಮತ್ತೆ ಸಹೋದರರು ಹಾಗೂ ಇನ್ನಿತರರ ಜತೆ ಸೇರಿ ಮತ್ತಷ್ಟು ಹಣ ಕೇಳುತ್ತಿದ್ದಾರೆ ಎಂದು ಒತ್ತಾಯಿಸಿದ್ದರಿಂದ ಮಣಿಕಂಠ ಅವರು ಕೋಟಕ್ ಮಹೀಂದ್ರ ಬ್ಯಾಂಕ್‍ನಿಂದ 10 ಲಕ್ಷ ಹಣವನ್ನು ಸಾಲವಾಗಿ ಪಡೆದು ಕಳೆದ ಏ.25ರಂದು ಕೊಟ್ಟಿದ್ದಾರೆ.

ಯಾವ ಕ್ಷೇತ್ರಕ್ಕೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿಲ್ಲ : ವಿಜಯೇಂದ್ರ ಸ್ಪಷ್ಟನೆ

ತದನಂತರವೂ ಸಹ ಇವರು ಹಣ ಕೇಳುವುದನ್ನು ಮುಂದುವರೆಸಿದ್ದರಿಂದ ಮಾನಕ್ಕೆ ಹೆದರಿ ಸ್ನೇಹಿತರಿಂದ 4 ಲಕ್ಷ , ಅವರ ತಂದೆ ಹಾಗೂ ಅಕ್ಕನಿಂದ 8 ಲಕ್ಷ ಪಡೆದುಕೊಂಡು 12 ಲಕ್ಷ ಹಣವನ್ನು ಹೊಂದಿಸಿಕೊಟ್ಟಿದ್ದಾರೆ. ಈ ನಡುವೆ ಆರೋಪಿ ಅಕ್ಷಯ್‍ಕುಮಾರ್‍ನ ಗೆಳತಿಯೊಬ್ಬರು ಮಣಿಕಂಠ ಅವರಿಗೆ ಮೊಬೈಲ್‍ಗೆ ಕರೆ ಮಾಡಿ ಅಪರಿಚಿತ ವ್ಯಕ್ತಿ ಹಣ ಕೊಡುವಂತೆ ಕೇಳುತ್ತಿದ್ದರಿಂದ ಅಕ್ಷಯ್‍ಕುಮಾರ್ ನನ್ನಿಂದ 5 ಲಕ್ಷ ಲೋನ್ ತೆಗೆಸಿದ್ದು, ನಾವು ಅವರಿಗೆ ಹಣ ಕೊಟ್ಟಿದ್ದಾಗಿ ತಿಳಿಸಿದ್ದಾರೆ.

ಮಣಿಕಂಠ ಅವರು ತನ್ನ ಸ್ನೇಹಿತ ಅಖಿಲೇಶ್ ಅವರಿಂದ 5 ಲಕ್ಷ ಹಣವನ್ನು ಸಾಲವಾಗಿ ಪಡೆದು ಆಕೆಗೆ ಕೊಟ್ಟಿದ್ದಾರೆ. ಇದಲ್ಲದೆ, ಆರೋಪಿ ಅಕ್ಷಯ್‍ಕುಮಾರ್‍ನು ಮಣಿಕಂಠ ಅವರ ಅಕ್ಕನಿಗೆ ಮೆಸೇಜ್ ಮಾಡಿ ನಿಮ್ಮ ತಮ್ಮನಿಗೆ ತೊಂದರೆಯಾಗಿದೆ ಎಂದು ಸುಳ್ಳು ಹೇಳಿ 12.20 ಲಕ್ಷ ಹಣವನ್ನು ತನ್ನ ಸ್ನೇಹಿತ ಪ್ರವೀಣ್ ಖಾತೆಗೆ ಹಾಕಿಸಿಕೊಂಡಿದ್ದಾನೆ.

ಇಷ್ಟಕ್ಕೇ ಸುಮ್ಮನಾಗದ ಅಕ್ಷಯ್‍ಕುಮಾರ್ ಅಪರಿಚಿತ ವ್ಯಕ್ತಿಯು ನಿನ್ನ ಮೊಬೈಲ್ ಸ್ಕ್ಯಾನ್ ಮಾಡಿ ಟ್ರ್ಯಾಪ್ ಮಾಡುತ್ತಿದ್ದಾನೆ. ಅದಕ್ಕೆ 15 ಲಕ್ಷ ಹಣ ಕೊಡುವಂತೆ ಬಲವಂತಪಡಿಸಿದ್ದರಿಂದ ಮಣಿಕಂಠ ಅವರು ತನ್ನ ಅಕ್ಕ, ತಾಯಿ ಹಾಗೂ ಮತ್ತೊಬ್ಬರಿಂದ 15 ಲಕ್ಷ ಹಣವನ್ನು ಹೊಂದಿಸಿಕೊಂಡು ಅಕ್ಷಯ್‍ಕುಮಾರ್‍ಗೆ ಕೊಟ್ಟಿದ್ದಾರೆ. ಇದೇ ರೀತಿ ಹಂತ ಹಂತವಾಗಿ ಅಕ್ಷಯ್‍ಕುಮಾರ್ ಇನ್ನಿತರರೊಂದಿಗೆ ಸೇರಿಕೊಂಡು ಗೆಳೆಯ ಮಣಿಕಂಠ ಅವರಿಗೆ ಪೀಡಿಸಿ ಒಟ್ಟು 65 ಲಕ್ಷ ಹಣ ಪಡೆದುಕೊಂಡಿದ್ದಾನೆ.

ಆಗಾಗ್ಗೆ ಹಣ ಕೇಳುತ್ತಿದ್ದರಿಂದ ಅನುಮಾನಗೊಂಡು ಮಣಿಕಂಠ ಅವರು ತನ್ನ ಸ್ನೇಹಿತರಾದ ಅಕ್ಷಯ್‍ಕುಮಾರ್, ಭರತ್ ಹಾಗೂ ಇನ್ನಿತರರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸಹೋದರರ ಪೈಕಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News