Friday, November 22, 2024
Homeಇದೀಗ ಬಂದ ಸುದ್ದಿಎಸ್‌‍ಐಟಿ ತನಿಖೆಯಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮಗಳ ಸತ್ಯಾಸತ್ಯತೆ ಹೊರಬರಲಿದೆ : ಪರಮೇಶ್ವರ್‌

ಎಸ್‌‍ಐಟಿ ತನಿಖೆಯಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮಗಳ ಸತ್ಯಾಸತ್ಯತೆ ಹೊರಬರಲಿದೆ : ಪರಮೇಶ್ವರ್‌

ಬೆಂಗಳೂರು, ಜೂ.8- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳು ಉಲ್ಲೇಖಿಸಿರುವ ಹೆಸರುಗಳನ್ನು ಎಸ್‌‍ಐಟಿ ಅಧಿಕಾರಿಗಳು ಪರಿಶೀಲಿಸಿ ಸತ್ಯಾಸತ್ಯತೆಯ ತನಿಖೆ ನಡೆಸಲಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತ ಆರೋಪಿಗಳು ಹೇಳಿಕೆ ನೀಡುವಾಗ ಅನೇಕರ ಹೆಸರುಗಳನ್ನು, ಸನ್ನಿವೇಶಗಳನ್ನು ಉಲ್ಲೇಖಿಸಿದ್ದಾರೆ. ತನಿಖಾಧಿಕಾರಿಗಳು ಅದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದರು.ತನಿಖೆಯ ಹಂತದಲ್ಲಿ ನಾವು ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿ, ಶಿಫಾರಸ್ಸು ಮಾಡಲು ಅಥವಾ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ನಾವು ಯಾವುದೇ ರೀತಿಯ ವ್ಯಾಖ್ಯಾನ ಮಾಡುವುದಿಲ್ಲ ಎಂದು ಹೇಳಿದರು.

ಆರೋಪಿಗಳಷ್ಟೇ ಅಲ್ಲ, ಸಾರ್ವಜನಿಕರು ನಾನಾ ರೀತಿಯ ಅಭಿಪ್ರಾಯಗಳನ್ನ ಹೇಳುತ್ತಿರುತ್ತಾರೆ. ಹಗರಣದ ಆರೋಪಿ ಹೇಳಿದಂತೆ ಸಚಿವರ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ಪರಿಶೀಲಿಸುವ ನಿಟ್ಟಿನಲ್ಲಿಯೂ ಎಸ್‌‍ಐಟಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.

ಲೋಕಸಭಾ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದರಿಂದಾಗಿ ಪಿಎಸ್‌‍ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗಿದ್ದವು. ಈಗ ನೀತಿಸಂಹಿತೆ ಪೂರ್ಣಗೊಂಡಿದೆ. ಇನ್ನು ಮುಂದೆ ನೇಮಕಾತಿ ಚುರುಕುಗೊಳ್ಳಲಿದೆ ಎಂದು ಹೇಳಿದರು.

ಪ್ರಧಾನಿಗೆ ಅಭಿನಂದನೆ :
ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರೇ ಹೇಳಿಕೊಂಡಂತೆ ಜವಹರಲಾಲ್‌ನಂತೆ ನರೇಂದ್ರ ಮೋದಿಯವರು ಮೂರನೇ ಬಾರಿ ನಿರಂತರವಾಗಿ ಪ್ರಧಾನಿಯಾಗಲಿದ್ದಾರೆ. ಅವರಿಗೆ ಶುಭವಾಗಲಿ ಎಂದರು.

ಲೋಕಸಭಾ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಚರ್ಚೆಯಾಗಬೇಕು ಮತ್ತು ಸೋಲಿನ ವಿಶ್ಲೇಷಣೆ ನಡೆಯಬೇಕು ಎಂಬುದು ಹೈಕಮಾಂಡ್‌ನ ಆಸಕ್ತಿಯಾಗಿದೆ. ನನ್ನನ್ನೂ ಒಳಗೊಂಡಂತೆ ಹಿನ್ನಡೆಯಾಗಿರುವ ಜಿಲ್ಲೆಗಳ ಸಚಿವರ ಜೊತೆ ಚರ್ಚೆ ನಡೆಯಲಿದೆ. ಸೋಲಿಗೆ ಕಾರಣಗಳನ್ನು ಹುಡುಕುವ ಪ್ರಯತ್ನ ಮಾಡಲಾಗುವುದು. ಹೈಕಮಾಂಡ್‌ ನೀಡುವ ಸಲಹೆ ಸೂಚನೆಗಳನ್ನು ನಾವು ಪಾಲನೆ ಮಾಡುತ್ತೇವೆ ಎಂದು ಹೇಳಿದರು.

ಲೋಕಸಭೆಯಲ್ಲಿ ರಾಹುಲ್‌ಗಾಂಧಿ ವಿರೋಧಪಕ್ಷದ ನಾಯಕರಾಗಬೇಕು ಎಂಬುದು ನಮೆಲ್ಲರ ಆಸೆ. ಅದನ್ನು ಕಾಂಗ್ರೆಸ್‌‍ ಪಕ್ಷ ಮತ್ತು ಇಂಡಿಯಾ ಮೈತ್ರಿಕೂಟ ತೀರ್ಮಾನ ಮಾಡಲಿದೆ. ರಾಹುಲ್‌ಗಾಂಧಿ ದೇಶಾದ್ಯಂತ ಪಾದಯಾತ್ರೆ ಮಾಡಿ ಜನರ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜ್ವಲಂತ ಸಮಸ್ಯೆಗಳನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಲು ರಾಹುಲ್‌ಗಾಂಧಿ ಸಮರ್ಥರಿದ್ದಾರೆ. ಅವರ ಆಯ್ಕೆಯಾದರೆ ಕಾಂಗ್ರೆಸ್‌‍ ಪಕ್ಷಕ್ಕೂ ಒಳ್ಳೆಯದಾಗಲಿದೆ ಎಂದರು.

ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಜೆಂಡಾ ಏನಿದೆಯೋ ಗೊತ್ತಿಲ್ಲ, ಈವರೆಗೂ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ರಾಜ್ಯಸರ್ಕಾರದ ಇಲಾಖೆಗಳನ್ನು ಸಿಬಿಐ ತನಿಖೆಗೆ ಒಳಪಡಿಸುವ ವಿಷಯದ ಚರ್ಚೆ ಕುರಿತು ಯಾವುದೇ ಅಜೆಂಡಾ ನಿಗದಿಯಾಗಿಲ್ಲ ಎಂದು ಹೇಳಿದರು.

RELATED ARTICLES

Latest News