Saturday, July 27, 2024
Homeರಾಜಕೀಯಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌‍ಗೆ ಹಿನ್ನಡೆ : ತಮ್ಮದೇ ಶಾಸಕರ ಮೇಲೆ ಸತೀಶ್‌ ಜಾರಕಿಹೊಳಿ ಅಸಮಾಧಾನ

ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌‍ಗೆ ಹಿನ್ನಡೆ : ತಮ್ಮದೇ ಶಾಸಕರ ಮೇಲೆ ಸತೀಶ್‌ ಜಾರಕಿಹೊಳಿ ಅಸಮಾಧಾನ

ಬೆಂಗಳೂರು, ಜೂ.8- ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದು, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 2 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌‍ಗೆ ಹಿನ್ನಡೆಯಾಗಿದೆ ಎಂಬ ಅಸಮಾಧಾನ ಇದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ಗೆ 70 ಸಾವಿರ ಲೀಡ್‌ ಇತ್ತು. ಈಗ 8 ಸಾವಿರ ಕಡಿಮೆಯಾಗಿದೆ. ಶಶಿಕಲಾ ಜೊಲ್ಲೆ ಕ್ಷೇತ್ರದಲ್ಲಿ 30 ಸಾವಿರ ಲೀಡ್‌ ಸೇರಿದಂತೆ ದುರ್ಬಲ ಕ್ಷೇತ್ರದಲ್ಲೂ ಕಾಂಗ್ರೆಸ್‌‍ ಉತ್ತಮವಾಗಿ ಮತ ಗಳಿಸಿದೆ. ಆದರೆ ಅಥಣಿಯಲ್ಲಿ ಮತ್ತು ಕುಡಚಿಯಲ್ಲಿ ಹಿನ್ನಡೆಯಾಗಿದೆ ಎಂದರು.

ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ಕೆ.ತಮಣ್ಣನವರ್‌ ಮತದಾನಕ್ಕೆ ಎರಡು ದಿನ ಮೊದಲೇ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಎಲ್ಲೋ ಹೋಗಿ ಮಲಗಿದ್ದರು. ನಾನು ಮೂರು ದಿನ ಅದೇ ಕ್ಷೇತ್ರದಲ್ಲಿ ಉಳಿದು ಕೆಲಸ ಮಾಡಬೇಕಾಯಿತು. ಮತದಾನದ ದಿನ ಮತಗಟ್ಟೆಗಳಿಗೆ ಭೇಟಿ ನೀಡುವುದು ಶಾಸಕರ ಕರ್ತವ್ಯ. ಅಂದೂ ಕೂಡ ಮಹೇಂದ್ರ ಅವರು ಪತ್ತೆ ಇರಲಿಲ್ಲ ಎಂದು ಹೇಳಿದರು.

ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌‍ಗೆ ಹಿನ್ನಡೆಯಾಗಲು ಶಾಸಕರುಗಳೇ ಕಾರಣ. ಅವರ ಕಾರ್ಯಕರ್ತರು ಹಾಗೂ ಅನ್ಯಾಯಿಗಳು ಯಾರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಗೊತ್ತಿದೆ. ಇದರ ಹಿಂದೆ ರಾಜ್ಯ ನಾಯಕರಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಹಿನ್ನಡೆಗೆ ಕಾರಣವನ್ನು ಶಾಸಕರು ಹೇಳಿದಾಗ ಮಾತ್ರ ವಿಷಯ ಗೊತ್ತಾಗಲಿದೆ ಎಂದರು.

ಲಕ್ಷ್ಮಣ್‌ ಸವದಿ ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ರಾಜಕೀಯವಾಗಿ ನಮ್ಮ ಜೊತೆ ಮತ್ತಷ್ಟು ಗಟ್ಟಿಗೊಳ್ಳುವ ಅವಕಾಶವಿತ್ತು. ಆದರೆ ಈಗ ಯತಾಸ್ಥಿತಿ ಮುಂದುವರೆದಿದೆ ಎಂದು ಅಸಹನೆ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವ ಕ್ಷೇತ್ರಗಳಲ್ಲಿ ವಿಶ್ಲೇಷಣೆ ನಡೆಯುವುದು ಸಹಜ. ಆದರೆ ಸಚಿವರ ತಲೆದಂಡ ಆಗುವುದಿಲ್ಲ. ಸೋಲು-ಗೆಲುವಿಗೆ ಸಚಿವರನ್ನು ಹೊಣೆ ಮಾಡುವುದಾಗಿಯೂ ಯಾರೂ ಸೂಚನೆ ನೀಡಿರಲಿಲ್ಲ. ಅಂತಹ ಚರ್ಚೆಗಳೂ ನಡೆದಿರಲಿಲ್ಲ. ಮತದಾರರು ರಾಷ್ಟ್ರ ರಾಜಕಾರಣಕ್ಕೆ ಮತ್ತು ರಾಜ್ಯ ರಾಜಕಾರಣಕ್ಕೆ ಬೇರೆಯದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.

ಸಚಿವರ ಪ್ರಗತಿ ಕುರಿತು ವರದಿ ನೀಡಬೇಕು ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್‌ ಜಾರಕಿಹೊಳಿ, ನಾವೇನು ಸರ್ಕಾರಿ ನೌಕರರಲ್ಲ. ಪ್ರಗತಿಪತ್ರ ಅಗತ್ಯವಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌‍ ಕೈ ಹಿಡಿದಿರುವುದರಿಂದಾಗಿಯೇ ಬಿಜೆಪಿಯವರ ಗೆಲುವಿನ ಅಂತರ ಕಡಿಮೆಯಾಗಿದೆ. ಈ ಮೊದಲೆಲ್ಲಾ 2-3 ಲಕ್ಷ ದಅಂತರದಲ್ಲಿ ಫಲಿತಾಂಶ ಬರುತ್ತಿತ್ತು. ಅದು ಕುಸಿದಿದೆ. ಏನೇ ಆದರೂ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಹಾಗಾಗಿ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌‍ -ಬಿಜೆಪಿ ಮೈತ್ರಿ ಕಾಂಗ್ರೆಸ್‌‍ಗೆ ಮುಂದಿನ ದಿನಗಳಲ್ಲಿ ಸವಾಲಾಗಿದ್ದು, ಅದನ್ನು ಎದುರಿಸಲು ಈಗಿನಿಂದಲೇ ಕಾರ್ಯತಂತ್ರ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

RELATED ARTICLES

Latest News