ಶಿವಮೊಗ್ಗ,ಮಾ.20- ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಇಂದು ಇಲ್ಲಿಗೆ ಆಗಮಿಸಿದ್ದು, ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.ನಟ ಡಾ.ಶಿವರಾಜಕುಮಾರ್ ತಮ್ಮ ಪತ್ನಿ ಗೀತಾ ಅವರಿಗೆ ಸಾಥ್ ನೀಡಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಳಿಗ್ಗೆ ಭದ್ರಾವತಿಯ ಕಾರೆಹಳ್ಳಿಗೆ ಆಗಮಿಸಿದ ಗೀತಾ ಶಿವರಾಜಕುಮಾರ್ ಶಿವರಾಜ್ಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಕಾರ್ಯಕರ್ತರು ಬೈಕ್ ರ್ಯಾಲಿಯೊಂದಿಗೆ ಬರಮಾಡಿಕೊಂಡರು. ಕಾರೆಹಳ್ಳಿಯ ದೇವಸ್ಥಾನಕ್ಕೆ ಭೇಟಿ ನೀಡಿದ ಶಿವರಾಜ್ಕುಮಾರ್ ದಂಪತಿ ದೇವರಿಗೆ ಪೂಜೆ ಸಲ್ಲಿಸಿದರು. ಸ್ಥಳೀಯ ಶಾಸಕರಾದ ಬಿ.ಕೆ.ಸಂಗಮೇಶ್, ಬೇಳೂರು ಗೋಪಾಲಕೃಷ್ಣ ಮತ್ತಿತರರು ಜೊತೆಗೂಡಿದ್ದರು. ಕಾರ್ಯಕರ್ತರು, ಅಭಿಮಾನಿಗಳು ಶಿವರಾಜಕುಮಾರ್ ದಂಪತಿಯ ಕಾರಿಗೆ ಮುತ್ತಿಕೊಂಡು ಜಯಘೋಷಗಳನ್ನು ಮೊಳಗಿಸಿದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ನಂತರ ಶಿವಮೊಗ್ಗ ನಗರಕ್ಕೆ ಆಗಮಿಸಿದ ಶಿವರಾಜ್ಕುಮಾರ್ ದಂಪತಿಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಬಳಿಕ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭದ್ರಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾ ಶಿವರಾಜಕುಮಾರ್, ಕಾರ್ಯಕರ್ತರು ಮತ್ತು ಜನರ ಉತ್ಸಾಹ ನೋಡಿದರೆ ಮನಸ್ಸಿಗೆ ನೆಮ್ಮದಿಯಾಗುತ್ತದೆ.
ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದಲೇ ಸ್ಪರ್ಧೆ ಮಾಡಿದ್ದೇನೆ. ಜನರ ಪ್ರತಿಕ್ರಿಯೆ ನೋಡಿದರೆ ನಮ್ಮ ವಿಶ್ವಾಸ ಹೆಚ್ಚುತ್ತಿದೆ ಎಂದರು.ಶಿವರಾಜ್ಕುಮಾರ್ ಮಾತನಾಡಿ, ಇಂದಿನಿಂದಲೇ ಪ್ರಚಾರ ಆರಂಭಿಸುತ್ತೇವೆ. ಮಾ.24 ರಿಂದ ನಿರಂತರವಾಗಿ ಪ್ರಚಾರಗಳು ಜರುಗಲಿವೆ. ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ನಾನು ಗೀತಾ ಅವರ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.
2019 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ಕುಮಾರ್ ಸ್ಪರ್ಧೆ ಮಾಡಿದ್ದರು. ಅವರ ಸಹೋದರ ಮಧು ಬಂಗಾರಪ್ಪ ಆಗ ಜೆಡಿಎಸ್ನ ಶಾಸಕರಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷ ಸೇರಿದ್ದು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾಗಿದ್ದಾರೆ. ಅವರ ಬೆನ್ನಲ್ಲೇ ಗೀತಾ ಶಿವರಾಜಕುಮಾರ್ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಾ.8 ರಂದು ಕಾಂಗ್ರೆಸ್ ಪ್ರಕಟಿಸಿದ 7 ಕ್ಷೇತ್ರಗಳ ಮೊದಲ ಪಟ್ಟಿಯಲ್ಲಿ ಗೀತಾ ಶಿವರಾಜಕುಮಾರ್ ಗೆ ಶಿವಮೊಗ್ಗದಲ್ಲಿ ಸ್ರ್ಪಧಿಸಲು ಅವಕಾಶ ನೀಡಿತ್ತು. ಮೊನ್ನೆ ಬೆಂಗಳೂರಿನಲ್ಲಿ ಚಲನಚಿತ್ರ ನಿರ್ಮಾಪಕರನ್ನು ಭೇಟಿ ಮಾಡಿದ್ದ ಶಿವರಾಜ್ಕುಮಾರ್ ದಂಪತಿ ಇಂದು ಕ್ಷೇತ್ರಕ್ಕೆ ಭೇಟಿ ನೀಡಿದರು.
ಶಿವಮೊಗ್ಗ ಕ್ಷೇತ್ರಕ್ಕೆ 2ನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏ.12 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಶಿವರಾಜ್ಕುಮಾರ್ ದಂಪತಿ ಈ ಬಾರಿ ಶಿವಮೊಗ್ಗದಲ್ಲಿ ಗೆಲುವು ಸಾಧಿಸಬೇಕೆಂಬ ಪಣ ತೊಟ್ಟಿದ್ದು, ಪ್ರಚಾರಕ್ಕೆ ಧುಮುಕಿದ್ದಾರೆ.ಜಿಲ್ಲೆಯ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದು, ಗೀತಾ ಶಿವರಾಜ್ಕುಮಾರ್ರನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದು, ಮರು ಆಯ್ಕೆಯನ್ನು ಬಯಸಿ ಸ್ಪರ್ಧಿಸುತ್ತಿದ್ದಾರೆ. ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳ ಪೈಕಿ ಶಿವಮೊಗ್ಗ ಗಮನ ಸೆಳೆದಿದೆ.