ಬೆಂಗಳೂರು, ಜ.17- ಹಣದಾಸೆಗೆ ಹಾಗೂ ಸಾಲ ತೀರಿಸಲು ಅಡ್ಡ ದಾರಿ ಹಿಡಿದು ಆಯುರ್ವೇದಿಕ್ ಸೆಂಟರ್‍ಗೆ ನುಗ್ಗಿ ಹಾಡಹಗಲೇ ಸ್ನೇಹಿತೆಯ ಕೈಕಾಲು ಕಟ್ಟಿ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ ದಂಪತಿ ಸೇರಿದಂತೆ ಐದು ಮಂದಿಯನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುರು- ರೇಣುಕಾ ದಂಪತಿ ಹಾಗೂ ರುದ್ರೇಶ್, ಸಂದೀಪ್ ಮತ್ತು ಪ್ರಭಾವತಿ ಬಂಧಿತ ಆರೋಪಿಗಳು.
ಕೊಡಿಗೇಹಳ್ಳಿ ಸಮೀಪದ ತಿಂಡ್ಲು ಸರ್ಕಲ್‍ನಲ್ಲಿ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್ ಇದೆ. ರೇಣುಕಾ ಹಣದ ಆಸೆಗೆ ಬಿದ್ದು ತನ್ನ ಸ್ನೇಹಿತೆ ಮಸಾಜ್ ಸೆಂಟರ್ ನಡೆಸುವ ಅನುಶ್ರೀ ಅವರಿಂದ ಹಣ, ಆಭರಣ ದೋಚಲು ತನ್ನ ಗ್ಯಾಂಗ್‍ನೊಂದಿಗೆ ಸೇರಿಕೊಂಡು ಸಂಚು ರೂಪಿಸಿದ್ದಾಳೆ.
ಈ ಹಿಂದೆ ರೇಣುಕಾ ಸಹ ಅನುಶ್ರೀ ಜೊತೆ ಥೆರಫಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಹಾಗಾಗಿ ಅನುಶ್ರೀ ಅವರ ಬಳಿ ಹೆಚ್ಚಿನ ಹಣ ಇರುವುದನ್ನು ಗಮನಿಸಿ ಹಣದಾಸೆಗೆ ಬಿದ್ದು ಸ್ನೇಹಿತೆ ಬಳಿಯೇ ಹಣ ದೋಚಲು ಸಂಚು ರೂಪಿಸಿದ್ದಾಳೆ. ರೇಣುಕಾ ಗ್ಯಾಂಗ್‍ನಲ್ಲಿದ್ದ ಪ್ರಭಾವತಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ರೇಣುಕಾ ಜೊತೆ ಅಡ್ಡದಾರಿ ಹಿಡಿದು ಹಣದೋಚಲು ಸಹಾಯ ಮಾಡಿದ್ದಾಳೆ.
ನಮ್ಮದು ರಾಜನೀತಿ ಅಲ್ಲ ಧರ್ಮನೀತಿ : ಆಚಾರ್ಯ ಸತ್ಯೇಂದ್ರ ದಾಸ್
ಜನವರಿ 14ರಂದು ಬೆಳಗ್ಗೆ 9.20ರ ಸುಮಾರಿನಲ್ಲಿ ಗುರು, ಪ್ರಭಾವತಿ, ರುದ್ರೇಶ್, ಸಂದೀಪ್ ಎರಡು ಪಲ್ಸರ್ ಬೈಕ್‍ಗಳಲ್ಲಿ ಬಂದು ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್ ಬಳಿ ಪಾರ್ಕಿಂಗ್ ಮಾಡಿದ್ದಾರೆ.
ಅಂದು ರೇಣುಕಾ ಬಂದಿರಲಿಲ್ಲ. ಮೊದಲು ಪ್ರಭಾವತಿ ಒಳಗೆ ಹೋಗಿ ಮಸಾಜ್ ಬಗ್ಗೆ ಮಾಹಿತಿ ಪಡೆದು ಅನುಶ್ರೀ ಅವರು ಒಬ್ಬರೇ ಇರುವುದನ್ನು ಖಚಿತ ಪಡಿಸಿಕೊಂಡು ನನ್ನ ಗಂಡ ಬಂದು ಹಣ ಕೊಡುತ್ತಾರೆಂದು ಹೇಳಿ ಗುರುನನ್ನು ಒಳಗೆ ಕರೆಸಿಕೊಂಡಿದ್ದಾಳೆ.
ಆನ್‍ಲೈನ್ ಪೇಮೆಂಟ್ ಮಾಡುವುದಾಗಿ ಗುರು ಹೇಳಿ ಜೇಬಿನಿಂದ ಮೊಬೈಲ್ ತೆಗೆದುಕೊಳ್ಳುವಂತೆ ನಟಿಸಿ ಕೆಮಿಕಲ್ ಇದ್ದ ಕರ್ಚೀಪ್‍ನಿಂದ ಅನುಶ್ರೀ ಮುಖಕ್ಕೆ ಇಟ್ಟು ಪ್ರಜ್ಞೆ ತಪ್ಪಿಸಿ ಅವರ ಕೈಕಾಲು ಕಟ್ಟಿಹಾಕಿ ಮೈಮೇಲಿದ್ದ ಚಿನ್ನದ ಸರ ದೋಚಿದ್ದಾರೆ. ಕೆಲ ಸಮಯದ ಬಳಿಕ ಅನುಶ್ರೀ ಅವರಿಗೆ ಎಚ್ಚರವಾಗಿ ಸರ ದರೋಡೆಯಾಗಿರುವುದು ಗಮನಿಸಿ ತಕ್ಷಣ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮಸಾಜ್ ಸೆಂಟರ್‍ನ ಅಕ್ಕ-ಪಕ್ಕ ರಸ್ತೆಯಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ದಂಪತಿ ಸೇರಿದಂತೆ ಐದು ಮಂದಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.