Friday, October 11, 2024
Homeರಾಜ್ಯನಂದಿನಿ ಹೊರತುಪಡಿಸಿ ಎಲ್ಲಾ ಬ್ರ್ಯಾಂಡ್‌ಗಳ ತುಪ್ಪ ಪರಿಶೀಲನೆಗೆ ಸರ್ಕಾರ ಆದೇಶ

ನಂದಿನಿ ಹೊರತುಪಡಿಸಿ ಎಲ್ಲಾ ಬ್ರ್ಯಾಂಡ್‌ಗಳ ತುಪ್ಪ ಪರಿಶೀಲನೆಗೆ ಸರ್ಕಾರ ಆದೇಶ

Govt orders ghee inspection of all brands except Nandini

ಬೆಂಗಳೂರು,ಸೆ.25- ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಜನ್ಯ ಕೊಬ್ಬು ಬಳಕೆ ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೆಎಂಎಫ್‌ ನಂದಿನಿ ತುಪ್ಪವನ್ನು ಹೊರತುಪಡಿಸಿ ಉಳಿದ ಎಲ್ಲಾ ಬ್ರ್ಯಾಂಡ್‌ಗಳ ತುಪ್ಪ ಪರಿಶೀಲನೆಗೆ ಆದೇಶ ನೀಡಿದೆ.

ರಾಜ್ಯದಲ್ಲಿ ಕೆಎಂಎಫ್‌ ನಂದಿನಿ ತುಪ್ಪ ಹೊರತುಪಡಿಸಿ ಉಳಿದ ಬ್ರ್ಯಾಂಡ್‌ಗಳ ತುಪ್ಪ ಪರಿಶೀಲನೆ ನಡೆಸುವಂತೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಮಾರಾಟ ಆಗುತ್ತಿರುವ ನಂದಿನಿ ತುಪ್ಪವನ್ನು ಹೊರತುಪಡಿಸಿ ಉಳಿದ ಎಲ್ಲಾ ತುಪ್ಪಗಳ ಮಾದರಿ ಸಂಗ್ರಹಿಸಿ, ಪರಿಶೀಲಿಸಿ ಗುಣಮಟ್ಟ ಕಾಪಾಡಲು ಸೂಚಿಸಲಾಗಿದೆ. ದೇವಸ್ಥಾನಗಳಲ್ಲಿ ಕೊಡುವ ಪ್ರಸಾದಗಳ ಮಾದರಿ ಪರೀಕ್ಷಿಸುವ ಬದಲು, ಬಳಸುವ ತುಪ್ಪದ ಪರಿಶೀಲನೆ ಕೈಗೊಳ್ಳುವಂತೆ ಇಲಾಖೆಗೆ ಸೂಚನೆ ನೀಡಲಾಗಿದೆ.

ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ತುಪ್ಪ ಪೂರೈಕೆ ಆಗುತ್ತಿದೆ. ಈ ಎಲ್ಲ ತುಪ್ಪಗಳ ಮಾದರಿ ಸಂಗ್ರಹಿಸಿ ಪರಿಶೀಲಿಸಲು ಸೂಚಿಸಲಾಗಿದೆ. ತಿರುಪತಿ ಲಡ್ಡು ವಿಚಾರದಲ್ಲಿ ಜನರಲ್ಲಿ ಬಹಳ ಗೊಂದಲ ಆರಂಭವಾಗಿರುವುದು ಆಘಾತಕಾರಿ. ಹೀಗಾಗಿ, ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

ಆರಂಭಿಕ ಪರೀಕ್ಷೆಗಳನ್ನು ನಡೆಸಲಾಗುವುದು. ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕಂಡುಬಂದಲ್ಲಿ, ತಯಾರಕರಿಂದ ಹೆಚ್ಚುವರಿ ಮಾದರಿಗಳನ್ನು ಪಡೆಯಲಾಗುವುದು. ಪರೀಕ್ಷಾ ಫಲಿತಾಂಶಗಳ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ತುಪ್ಪ ಉತ್ಪಾದನೆಯ ಮೇಲೆ ನಿಷೇಧವನ್ನೂ ಹೇರಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಆಹಾರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಪ್ರಸಾದ ತಯಾರಿಸಲು ಎಲ್ಲಾ ಸರ್ಕಾರಿ ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನು ಮಾತ್ರ ಬಳಸಬೇಕೆಂದು ಆದೇಶಿಸಿತ್ತು.

RELATED ARTICLES

Latest News