Friday, December 13, 2024
Homeರಾಜ್ಯವಾಟರ್ ಟ್ಯಾಂಕರ್‌ಗಳಿಗೆ ಜಿಪಿಎಸ್ ಟ್ರಾಕರ್ ಅಳವಡಿಸುವಂತೆ ಆರ್.ಅಶೋಕ್ ಒತ್ತಾಯ

ವಾಟರ್ ಟ್ಯಾಂಕರ್‌ಗಳಿಗೆ ಜಿಪಿಎಸ್ ಟ್ರಾಕರ್ ಅಳವಡಿಸುವಂತೆ ಆರ್.ಅಶೋಕ್ ಒತ್ತಾಯ

ಬೆಂಗಳೂರು,ಮಾ.17- ಅಕ್ರಮ ತಡೆಯಲು ನೀರು ಸರಬರಾಜು ಮಾಡುವ ಟ್ಯಾಂಕರ್‍ಗಳಿಗೆ ಜಿಪಿಎಸ್ ಟ್ರಾಕರ್ ಅಳವಡಿಸಬೇಕು. ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನೋಂದಣಿಗೊಂಡಿರುವ ಖಾಸಗಿ ಟ್ಯಾಂಕರ್‍ಗಳಿಗೆ ವಿಶೇಷ ಸಂಖ್ಯೆ ನೀಡಿ, ಗುರುತಿನಚೀಟಿ ಅಂಟಿಸಬೇಕು. ಜಿಲ್ಲಾಡಳಿತ ನೀಡಿರುವ ದರ ಪಟ್ಟಿ ಹಾಗೂ ದೂರು ಸಂಖ್ಯೆಯನ್ನು ಟ್ಯಾಂಕರ್‍ಗಳ ಮೇಲೆ ಕಡ್ಡಾಯವಾಗಿ ನಮೂದಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಬೆಂಗಳೂರಿನ ನೀರಿನ ಸಮಸ್ಯೆ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ಸಂಬಂಧಪಟ್ಟವರ ಸಭೆ ಕರೆದಿದ್ದಾರೆ. ಬರಗಾಲವಿದೆ ಎಂದು ಗೊತ್ತಿದ್ದರೂ ಕಳೆದ ಆರೇಳು ತಿಂಗಳಿಂದ ಯಾವುದೇ ಮುಂಜಾಗ್ರತೆ ವಹಿಸದೆ, ಪೂರ್ವಸಿದ್ಧತೆ ಮಾಡಿಕೊಳ್ಳದೆ, ಪರ್ಯಾಯ ಮಾರ್ಗಗಳನ್ನು ಹುಡುಕದೆ ಕಾಲಹರಣ ಮಾಡಿದ ಸಿದ್ದರಾಮಯ್ಯನವರ ಸರ್ಕಾರದ ಬೇಜವಾಬ್ದಾರಿ, ನಿರ್ಲಕ್ಷ್ಯ ಧೋರಣೆಯೇ ನೀರಿನ ಸಮಸ್ಯೆಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

ನಾಳೆ ಕರೆದಿರುವ ಸಭೆಯೂ ಸಹ ಕೇವಲ ಕಾಟಾಚಾರಕ್ಕೆ ನಡೆಯುವ ಮತ್ತೊಂದು ನಾಮಕಾವಸ್ತೆ ಸಭೆ ಆಗದಿರಲಿ ಎನ್ನುವ ಉದ್ದೇಶದಿಂದ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡುತ್ತಿರುವುದಾಗಿ ಹೇಳಿದ್ದಾರೆ.

ಟ್ಯಾಂಕರ್‍ಗಳ ನೋಂದಣಿಗೆ ನೀಡಲಾಗಿದ್ದು ಗಡುವು ಮುಕ್ತಾಯವಾಗಿ ಎರಡು ದಿನಗಳು ಕಳೆದಿದ್ದರೂ, ಇನ್ನೂ ಟ್ಯಾಂಕರ್ ಗಳ ನೋಂದಣಿ ಪೂರ್ತಿಯಾಗಿಲ್ಲ. ಬೆಂಗಳೂರಲ್ಲಿ 3,500ಕ್ಕೂ ಹೆಚ್ಚು ಖಾಸಗಿ ಟ್ಯಾಂಕರ್‍ಗಳಿವೆ. ಆದರೆ ನೋಂದಣಿ ಆಗಿರುವುದು ಕೇವಲ 1,700 ಮಾತ್ರ. ಅಂದರೆ ಶೇ.50ಕ್ಕೂ ಹೆಚ್ಚು ಟ್ಯಾಂಕರ್‍ಗಳು ಇನ್ನೂ ನೋಂದಣಿ ಆಗಿಲ್ಲ. ಟ್ಯಾಂಕರ್ ಮಾಫಿಯಾ, ಸುಲಿಗೆಗೆ ಕಡಿವಾಣ ಹಾಕಬೇಕಾದರೆ ಕಡ್ಡಾಯವಾಗಿ ಯಾವುದೇ ಮುಲಾಜಿಲ್ಲದೆ ಎಲ್ಲಾ ಟ್ಯಾಂಕರ್‍ಗಳ ನೋಂದಣಿ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಲಮಂಡಳಿ ವತಿಯಿಂದ ಉಚಿತವಾಗಿ ನೀರು ಸರಬರಾಜು ಮಾಡುವ ಟ್ಯಾಂಕರ್‍ಗಳ ಮೇಲೆ ಸ್ಟಿಕ್ಕರ್ ಅಂಟಿಸುವುದು ಕಡ್ಡಾಯ ಎಂಬ ನಿಯಮ ಇದ್ದರೂ ಇನ್ನೂ ಹಲವಾರು ಕಡೆ ಸ್ಟಿಕ್ಕರ್ ಅಂಟಿಸಿಲ್ಲ. ಸ್ಟಿಕ್ಕರ್ ಇಲ್ಲದಿದ್ದರೆ ನೀರಿನ ದುರ್ಬಳಕೆಯಾಗುವ ಸಾಧ್ಯತೆ ಇದ್ದು, ಅಕಾರಿಗಳು ಕಡ್ಡಾಯವಾಗಿ ಸ್ಟಿಕ್ಕರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು.

ಸಾರ್ವಜನಿಕರಿಗೆ ನೀಡಿರುವ ಜಲಮಂಡಳಿ/ ಬಿಬಿಎಂಪಿ ಸಹಾಯವಾಣಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿದ್ದು, ಖಾಸಗಿ ಕಾಲ್ ಸೆಂಟರ್ ತೆರೆಯುವ ಮೂಲಕ ಜಲಮಂಡಳಿ ಸಹಾಯವಾಣಿಯನ್ನು ಜನಸ್ನೇಹಿ ಮಾಡಲು ಕ್ರಮಕೈಗೊಳ್ಳಬೇಕು. ಕೇವಲ ಬೆಂಗಳೂರಿನ ಹೃದಯ ಭಾಗ ಮತ್ತು ಪ್ರತಿಷ್ಠಿತ ಬಡಾವಣೆಗಳಲ್ಲಿ ಮಾತ್ರವಲ್ಲದೆ ಬಿಬಿಎಂಪಿ ಹೊರವಲಯ ವ್ಯಾಪ್ತಿಯ 35 ವಾರ್ಡ್‍ಗಳಲ್ಲಿನ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಕೂಡ ವಿಶೇಷ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ಸಮರೋಪಾದಿಯಲ್ಲಿ ಈ ಮೇಲಿನ ಕ್ರಮಗಳನ್ನು ಜಾರಿ ಮಾಡಿದರೆ ಮಾತ್ರ ನಾಳಿನ ಸಭೆಯಲ್ಲಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿ, ಗುರಿ ಹಾಗೂ ಕಾಲಮಿತಿ ನಿಗದಿ ಮಾಡಲು ಸಾಧ್ಯ. ಇಲ್ಲವಾದರೆ ಇದು ಮತ್ತೊಂದು ಕಾಟಾಚಾರದ ಸಭೆ ಆಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ.

RELATED ARTICLES

Latest News