ಪಾವಗಡ,ಫೆ.17– ಬೆಂಗಳೂರಿನಲ್ಲಿ ನೆಲೆಸಿದ್ದ ಮಗಳನ್ನು ಕೊಂದು ಬ್ಯಾಡನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಾವಗಡ ತಾಲೂಕಿನ ಬ್ಯಾಡನೂರು ಗ್ರಾಮ ಪಂಚಾಯಿತಿಯ ಹಾಲಿ ಅಧ್ಯಕ್ಷೆ ಶೃತಿ ಎಂಬುವರೇ ತಮ್ಮ ನಾಲ್ಕು ವರ್ಷದ ರೋಷಣಿ ಎನ್ನುವ ಮಗುವನ್ನು ಕೊಂದು ಆತ್ಮಹತ್ಯೆಗೆ
ಶರಣಾದವರು. ಶೃತಿ ಅವರ ತವರು ಮನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಳಿಗೆನಹಳ್ಳಿ. ಶೃತಿಯನ್ನು ಪಾವಗಡ ತಾಲೂಕಿನ ಗುಂಡಾರಲಾಹಳ್ಳಿ ಗ್ರಾಮದ ಜಿ.ಕೃಷ್ಣ ಎನ್ನುವರಿಗೆ ಮದುವೆ ಮಾಡಿಕೊಳ್ಳಲಾಗಿತ್ತು. ದಂಪತಿಗೆ ಒಬ್ಬ ಮಗಳು ಇದ್ದಳು. ಬೆಂಗಳೂರಿನ 8 ನೇ ಮೈಲಿಯಲ್ಲಿ ಈ ಕುಟುಂಬ ನೆಲೆಸಿದೆ.
ಶೃತಿ ಅವರು ಬ್ಯಾಡನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದರು. ಹಾಗಾಗಿ ಅವರು ಆಗಾಗ್ಗೆ ಬ್ಯಾಡನೂರು ಗ್ರಾಮಕ್ಕೆ ಹೋಗಿ ಬರುತ್ತಿದ್ದರು. ಈ ನಡುವೆ ಶೃತಿ ಅವರ ಕುಟುಂಬದಲ್ಲಿ ಯಾವ ಸಮಸ್ಯೆಯಿತ್ತೋ ಗೊತ್ತಿಲ್ಲ. ಬೆಂಗಳೂರಿನ ನಿವಾಸದಲ್ಲಿ ನಿನ್ನೆ ಸಂಜೆ 5ಗಂಟೆ ಸುಮಾರಿಗೆ ಏಕಾಏಕಿ ತಮ್ಮ ನಾಲ್ಕು ವರ್ಷದ ರೋಷಣಿ ಎನ್ನುವ ಮಗುವನ್ನು ಕೊಂದು ನಂತರ ತಾಯಿ ಶೃತಿ ಸಹ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವಿಷಯ ತಿಳಿದು ಶೃತಿ ಅವರ ತಂದೆ ಹಾಗೂ ಸಂಬಂಧಿಕರು ಇವರ ಮನೆ ಬಳಿ ಆಗಮಿಸಿದ್ದಾರೆ. ಸುದ್ದಿ ತಿಳಿದು ಬಾಗಲಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಶ್ರುತಿ ಅವರ ತಂದೆ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನಲ್ಲಿ ತಮ್ಮ ಅಳಿಯನ ಅಕ್ರಮ ಸಂಬಂಧವೇ ಮಗಳ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಮಹಿಳೆಯ ಹೆಸರು ಒಂದು ಪ್ರಕರಣದಲ್ಲಿ ತಳುಕು ಹಾಕಿಕೊಳ್ಳುತ್ತಿರುವುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಿದೆ.
ಸದ್ಯ ಇಬ್ಬರ ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಒಳಪಡಿಸಿ, ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಪತಿಗೆ ಅಪಘಾತ: ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದಂತೆ ಬೆಂಗಳೂರಿಗೆ ಶೃತಿ ಅವರ ಪತಿ ಆಡಿಟರ್ ಕೃಷ್ಣ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಅವರೂ ಸಹ ಗಂಭೀರ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಸಹ ಲಭ್ಯವಾಗಿದೆ.