ಬೆಂಗಳೂರು,ಏ.23- ಹೆರಿಗೆ ಸಂದರ್ಭದಲ್ಲಿ ಇಬ್ಬರು ಮಹಿಳೆಯರ ಸಾವಿಗೆ ಕಾರಣವಾದ ಸ್ತ್ರೀರೋಗ ತಜ್ಞೆ ಡಾ.ಪರಿಮಳ ದೇಸಾಯಿ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಮಾನತುಗೊಳಿಸಿದೆ.
ಬಳ್ಳಾರಿ ಜಿಲ್ಲೆಯ ಮೋಕ ಸಮುದಾಯ ಆರೋಗ್ಯ ಕೇಂದ್ರ ತಜ್ಞೆಯಾಗಿ ಕೆಲಸ ಮಾಡುತ್ತಿರುವ ಡಾ.ಪರಿಮಳ ದೇಸಾಯಿಯವರು ಮಾ.6 ರಂದು ಸಿಂಧುವಾಳ ನಗರದ ರಾಜಮ್ಮ(23) ಅವರಿಗೆ ಹೆರಿಗೆ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದರು. ಮಾ.7 ರಂದು ನ್ಯೂಮೋಕ ವಾಸಿ ಭಾಗ್ಯಮ್ಮ(23) ಎಂಬುವರಿಗೂ ಶಸ್ತ್ರಚಿಕಿತ್ಸೆ ಮಾಡಿದ್ದರು. ಈ ಇಬ್ಬರೂ ಮಹಿಳೆಯರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಶಸ್ತ್ರಚಿಕಿತ್ಸೆಯ ಲೋಪ ಕಂಡುಬಂದಿದೆ. ಬೇಜವಾಬ್ದಾರಿತನ, ಕರ್ತವ್ಯ ನಿರ್ಲಕ್ಷ್ಯತೆ, ಮೇಲುಸ್ತುವಾರಿ ನಿಗಾ ವಹಿಸದೇ ಇರುವುದು, ಮೇಲಧಿಕಾರಿಗಳು ಸಕಾಲಕ್ಕೆ ವರದಿ ಸಲ್ಲಿಸದೇ ಇರುವ ಕಾರಣಕ್ಕಾಗಿ ಡಾ.ಪರಿಮಳ ದೇಸಾಯಿ ಅವರನ್ನು ಶಿಸ್ತುಕ್ರಮ ಬಾಕಿ ಇರಿಸಿ ಅಮಾನತುಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ್ ಆದೇಶಿಸಿದ್ದಾರೆ.