ಬೆಂಗಳೂರು,ಫೆ.14- ವಿದ್ಯುತ್ ಮಗ್ಗಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕಡಿತಗೊಳಿಸಿರುವುದನ್ನು ಪುನರ್ ಪರಿಶೀಲಿಸಬೇಕೆಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಸರ್ಕಾರಕ್ಕೆ ಮನವಿ ಮಾಡಿದೆ. ಈ ಹಿಂದೆ ವಿದ್ಯುತ್ ಮಗ್ಗಗಳಿಗೆ ಪ್ರತಿ ಯೂನಿಟ್‍ಗೆ 1.25 ರೂ.ಗಳಂತೆ ದರ ವಿಧಿಸಿ ವಿದ್ಯುತ್ ನೀಡಲಾಗುತ್ತಿತ್ತು ಆದರೆ ಇತ್ತೀಚೆಗೆ ಕಳೆದ ಅಕ್ಟೋಬರ್ 20, 2023ರಲ್ಲಿ ವಿದ್ಯುತ್ ಬಳಕೆಯ ಮಿತಿಯನ್ನು ಹೇರಿ 500 ಯುನಿಟ್‍ಗೆ ನಿಗದಿಪಡಿಸಿ ಆದೇಶಿಸಲಾಗಿದೆ. ಇದರಿಂದ ನೇಕಾರರಿಗೆ ಮತ್ತೆ ಆರ್ಥಿಕ ಹೊರೆ ಬೀಳುತ್ತಿದೆ.
ಹಿಂದೆ ಇದ್ದಂತೆ ಸಬ್ಸಿಡಿ ದರದಲ್ಲಿ ಯಾವುದೇ ಮಿತಿಯಿಲ್ಲದೆ ವಿದ್ಯುತ್ ಪೂರೈಕೆ ಮಾಡಬೇಕು. 10.1 ರಿಂದ 20 ಹೆಚ್‍ಪಿ ವರೆಗೆ ನೀಡುತ್ತಿದ್ದ ಸವಲತ್ತುಗಳನ್ನು ಮುಂದುವರಿಸಬೇಕೆಂದು ಮನವಿ ಮಾಡಲಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ನೇಕಾರರು ಮತ್ತೆ ಸಮಸ್ಯೆಗೆ ಸಿಲುಕುವ ಸಾಧ್ಯತೆಯಿರುವುದರಿಂದ ಸರ್ಕಾರ ಮಾನವೀಯ ಆಧಾರದ ಮೇಲೆ ಯಾವುದೇ ಮಿತಿಯಿಲ್ಲದೆ ಪ್ರತಿ ಯುನಿಟ್‍ಗೆ 1.25 ರೂ.ಗಳಂತೆ ವಿದ್ಯುತ್ ಒದಗಿಸಬೇಕೆಂದು ಮನವಿ ಮಾಡಲಾಗಿದೆ.
ಅಬುಧಾಬಿಯಲ್ಲಿ ನಿರ್ಮಾಣವಾದ ಮೊದಲ ಹಿಂದೂ ದೇವಾಲಯದ ವಿಶೇಷತೆಗಳೇನು ಗೊತ್ತೇ..?
ಈಗಾಗಲೇ ಅನೇಕ ಕೈಮಗ್ಗಗಳು, ವಿದ್ಯುತ್ ಮಗ್ಗಗಳಾಗಿ ಪರಿವರ್ತನೆಗೊಂಡಿದೆ. ಇದರಲ್ಲಿ ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ವಿದ್ಯುತ್ ಹೊರೆ ಹೆಚ್ಚಿದರೆ ಅವರು ಬೀದಿಗೆ ಬೀಳುವ ಪರಿಸ್ಥಿತಿ ಉದ್ಭವಾಗುತ್ತದೆ. ಗುಣಮಟ್ಟದ ನೇಯ್ದ ಬಟ್ಟೆಗಳನ್ನು ನೀಡಿ ಇಡೀ ದೇಶಕ್ಕೆ ಹಿರಿಮೆಯನ್ನು ತಂದಿರುವ ಕರ್ನಾಟಕದ ನೇಕಾರರನ್ನು ಸಂಕಷ್ಟದ ಪರಿಸ್ಥಿತಿಯಲ್ಲಿ ಕೈ ಹಿಡಿಯುವ ಜವಾಬ್ದಾರಿ ಸರ್ಕಾರದ್ದಾಗಿದೆ.
ಆದರೆ ನಮ್ಮ ಮನವಿಯನ್ನು ಯಾರೂ ಕೇಳುತ್ತಿಲ್ಲ ಎಂದು ಕೆಲ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಹೊರೆಯಿಂದಲೇ ಅನೇಕ ಕೈಮಗ್ಗಗಳು ನಶಿಸಿಹೋಗುತ್ತಿದೆ. ತಲತಲಾಂತರಗಳಿಂದ ಈ ಉದ್ಯಮಿಗಳನ್ನು ನಂಬಿಕೊಂಡು ಬಂದಿದ್ದ ಸುಮಾರು 20 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪರಿಸ್ಥಿತಿ ಹದಗೆಡುತ್ತಿದೆ. ಸುಮಾರು 3 ಲಕ್ಷಕ್ಕೂ ಹೆಚ್ಚು ವಿದ್ಯುತ್ ಮಗ್ಗಗಳು ಮುಚ್ಚುವ ಹಂತ ತಲುಪಿದೆ. ಸರ್ಕಾರ ಕೂಡಲೇ ಇವರ ನೆರವಿಗೆ ಬರಬೇಕು ಎಂದು ಉದ್ಯಮಿಗಳು ಕೂಡ ಮನವಿ ಮಾಡಿದ್ದಾರೆ.