Thursday, December 12, 2024
Homeರಾಜ್ಯಚನ್ನಪಟ್ಟಣ ಉಪಕದನಕ್ಕೆ ನಾಳೆ ದೊಡ್ಡ ಗೌಡರು ಎಂಟ್ರಿ

ಚನ್ನಪಟ್ಟಣ ಉಪಕದನಕ್ಕೆ ನಾಳೆ ದೊಡ್ಡ ಗೌಡರು ಎಂಟ್ರಿ

ಬೆಂಗಳೂರು, ನ.4-ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಖಾಡಕ್ಕೆ ಇಳಿಯಲಿದ್ದಾರೆ. ನವೆಂಬರ್ 5 ರಿಂದ ಬಹಿರಂಗ ಪ್ರಚಾರ ಮುಗಿಯವವರೆಗೂ ಕ್ಷೇತ್ರದಲ್ಲಿ ಗೌಡರು ಪ್ರಚಾರ ನಡೆಸಲಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಗೌಡರು ಪ್ರಚಾರ ಕೈಗೊಂಡು ಮತಯಾಚನೆ ಮಾಡಲಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಮೂಲಕ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಉತ್ಸಾಹ ತುಂಬಲಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿರುವ ತಮ ಮೊಮಗ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಗೌಡರು ಚನ್ನಪಟ್ಟಣ ಕ್ಷೇತ್ರದ ಗ್ರಾಮ ಪಂಚಾಯ್ತಿವಾರು ಪ್ರಚಾರ ನಡೆಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಇಂದಿನಿಂದ ಗೌಡರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಕಾರ್ಯಕ್ರಮವಿತ್ತು. ಆರೋಗ್ಯ ಕಾರಣಕ್ಕಾಗಿ ಚುನಾವಣಾ ಪ್ರಚಾರವನ್ನು ಮುಂದೂಡಲಾಗಿದೆ.

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ನಂತರ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಪ್ರಚಾರದಲ್ಲಿ ನಿರತರಾಗಿದ್ದಾರೆ.
ಆರಂಭದಲ್ಲಿ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಜಿಲ್ಲಾ ಪಂಚಾಯ್ತಿ ಕ್ಷೇತ್ರವಾರು ಪ್ರಚಾರ ನಡೆಸಲಿದ್ದಾರೆ. ಕೆಲವೆಡೆ ಬಹಿರಂಗ ಸಭೆಯಲ್ಲೂ ಮಾತನಾಡಲಿದ್ದಾರೆ. ಚುನಾವಣಾ ಮತದಾನದ ದಿನ ಸಮೀಪಿಸಿದಂತೆ ರೋಡ್ಶೋನಲ್ಲಿ ದೇವೇಗೌಡರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ದೇವೇಗೌಡರು ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಕಾಂಗ್ರೆಸ್ ನಾಯಕರು ನೀಡಿದ್ದ ಹೇಳಿಕೆ ಕುರಿತಂತೆ ಜೆಡಿಎಸ್ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಳ್ಳಬೇಕು. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಈ ಉಪ ಚುನಾವಣೆಯಲ್ಲಿ ಶಕ್ತಿ ಮೀರಿ ಶ್ರಮ ವಹಿಸಬೇಕು.

ಯಾವ ರೀತಿ ಚುನಾವಣಾ ಪ್ರಚಾರದ ವೈಖರಿ ಇರಬೇಕು, ಮತದಾರರ ಮನವೊಲಿಕೆ ಹೇಗೆ ಮಾಡಬೇಕು, ಪಕ್ಷ ಅಧಿಕಾರದಲ್ಲಿದ್ದಾಗ ಕ್ಷೇತ್ರ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟು ಜನರ ವಿಶ್ವಾಸ ಪಡೆಯಲು ಪ್ರಯತ್ನಿಸಬೇಕು ಎಂಬ ಮಾರ್ಗದರ್ಶನ ಮತ್ತು ಸಲಹೆಗಳನ್ನು ಅವರು ಈಗಾಗಲೇ ನೀಡಿದ್ದಾರೆ.

RELATED ARTICLES

Latest News