Friday, November 22, 2024
Homeರಾಜಕೀಯ | Politicsಜೆಡಿಎಸ್ ಸಾಮರ್ಥ್ಯ ತೋರಿಸುವ ಶಕ್ತಿ ನಮಗಿದೆ : ದೇವೇಗೌಡರು

ಜೆಡಿಎಸ್ ಸಾಮರ್ಥ್ಯ ತೋರಿಸುವ ಶಕ್ತಿ ನಮಗಿದೆ : ದೇವೇಗೌಡರು

ಬೆಂಗಳೂರು,ಮಾ.29- ಜೆಡಿಎಸ್ ಎಲ್ಲಿದೆ ಎಂಬುದನ್ನು ತೋರಿಸುವ ಸಾಮರ್ಥ್ಯ ನಮಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದಿಲ್ಲಿ ಗುಡುಗಿದರು. ಖಾಸಗಿ ಹೋಟೆಲ್ನಲ್ಲಿಂದು ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರದ ಮದದಿಂದ ಜೆಡಿಎಸ್ ಎಲ್ಲಿದೆ ಎಂದು ಹೇಳುತ್ತಿದ್ದಾರೆ. ಅದಕ್ಕೂ ಸಾಮಥ್ರ್ಯವಿದೆ ಎಂದರು.

ಮೈಸೂರು, ಚಾಮರಾಜನಗರ ಕ್ಷೇತ್ರಗಳನ್ನು ಗೆಲ್ಲಿಸುವ ಶಕ್ತಿ ಮಾಜಿ ಸಚಿವ ಜಿ.ಟಿ.ದೇವೇಗೌಡರಿಗಿದ್ದು, ಸಿದ್ದರಾಮಯ್ಯ ನವರ ಗರ್ವ ಭಂಗ ಆಗಬೇಕು. ಅದಕ್ಕಾಗಿ ನಾವೆಲ್ಲರೂ ಛಲದಿಂದ ಒಟ್ಟಾಗಿ ಹೋಗಬೇಕಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಸ್ತುವಾರಿಯನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೋಡಿಕೊಳ್ಳುತ್ತಿದ್ದಾರೆ. ನನ್ನನ್ನು ಕರೆದರೆ ಕ್ಷೇತ್ರದಲ್ಲಿ ಬಂದು ಭಾಷಣ ಮಾಡುತ್ತೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತರನ್ನೂ ಕಡೆಗಣಿಸದೆ ಈ ಚುನಾವಣೆಯಲ್ಲಿ ಹೋರಾಟ ಮಾಡೋಣ ಎಂದು ಅವರು ಕರೆ ಕೊಟ್ಟರು.

ಒಂದು ರಾಜ್ಯದ ಸಿಎಂ ಗಟ್ಟಿಯಾಗಿರಬೇಕಂತೆ, ದೇಶದ ಪ್ರಧಾನಿ ಬಹಳ ದುರ್ಬಲವಾಗಿರಬೇಕಂತೆ ಎಂದು ವ್ಯಂಗ್ಯವಾಡಿದ ಅವರು, ಪ್ರಧಾನಿ ವಿರುದ್ಧ ಕೋರ್ಟಿಗೆ ಹೋಗಿದ್ದಾರೆ ಎಂದು ಗೌಡರು ನಸುನಕ್ಕಿದರು. ರೈತರ ಸಾಲದ ಮೇಲೆ ಬಡ್ಡಿ ಮನ್ನಾ ಮಾಡಿ ಅಂದರೆ ಇಲ್ಲವೆಂದರು. ಇದೆಲ್ಲಾ ಗೊತ್ತಿದ್ದರೂ ಸಿದ್ದರಾಮಯ್ಯ ಅವರೇ ಕೋರ್ಟಿಗೆ ಅರ್ಜಿ ಹಾಕಿದ್ದಾರೆ. ಸ್ಟ್ರಾಂಗೆಸ್ಟ್ ಮುಖ್ಯಮಂತ್ರಿ, ವೀಕೆಸ್ಟ್ ಪ್ರಧಾನಮಂತ್ರಿ ಎಂದು ಹೇಳುವ ಮುಖ್ಯಮಂತ್ರಿ ನಮ್ಮ ರಾಜ್ಯದಲ್ಲಿದ್ದಾರೆ. ಆ ಮಹಾನುಭಾವರಿಗೆ ನಮೋ ನಮಃ ಎಂದು ಟೀಕಿಸಿದರು.

ಲೋಕಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳ ನಡುವೆ ಸಮನ್ವಯ ಸಾಧಿಸಬೇಕು. ಹಿಂದೆ ಆಗಿರುವ ಕಹಿ ವಿಚಾರಗಳನ್ನು ಮರೆತು ನಾವೆಲ್ಲಾ ಒಂದುಗೂಡಬೇಕು. ಚುನಾವಣೆಯಲ್ಲಿ ಕೇವಲ ಪ್ರಧಾನಿ ನರೇಂದ್ರಮೋದಿ ಹೆಸರು ಪ್ರಸ್ತಾಪಿಸಿದರೆ ಸಾಲದು ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಬೇಕು ಎಂದರು.

ರಾಜ್ಯದ 28 ಕ್ಷೇತ್ರಗಳಲ್ಲೂ ಎನ್ಡಿಎ ಅಭ್ಯರ್ಥಿಗಳು ಗೆಲ್ಲಬೇಕು. ಹಲವು ಕ್ಷೇತ್ರಗಳಲ್ಲಿ ನಮ್ಮ ಪರವಾದ ವಾತಾವರಣವಿದೆ. ಸಮಯ ಅವಕಾಶ ಕಡಿಮೆ ಇದೆ. ಕಾಂಗ್ರೆಸ್ನಲ್ಲಿ ಸಂಪನ್ಮೂಲ ಹೆಚ್ಚಾಗಿದೆ. ಅಕ್ರಮವಾಗಿ ಸಂಪನ್ಮೂಲ ಸಂಗ್ರಹ ಮಾಡಿ ಬೇರೆ ರಾಜ್ಯಗಳಿಗೂ ಸಾಗಿಸಿದ್ದಾರೆ ಎಂದು ದೂರಿದರು.

ಈ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಸಬಹುದು. ಆದರೆ ಕಾಂಗ್ರೆಸ್ ನಮ್ಮನ್ನು ಸೋಲಿಸುವುದು ಸುಲಭವಲ್ಲ. ಏಕೆಂದರೆ ನಾಡಿನ ಜನರು ನಮ್ಮ ಪರವಾಗಿದ್ದಾರೆ ಎಂದು ಗೌಡರು ಹೇಳಿದರು.

RELATED ARTICLES

Latest News