ಹಾಸನ, ಡಿ.10- ತೆಂಗು ಬೆಳೆಗಾರರ ಸಮಸ್ಯೆಗಳ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಣ್ಣು ತೆರೆಸಲು ಅರಸೀಕರೆಯಿಂದ ತುಮಕೂರಿನವರೆಗೂ ಪಾದಯಾತ್ರೆ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಜೆಡಿಎಸ್ ಹೋರಾಟ ನಡೆಸಲಿದ್ದು, ಜನವರಿಯಲ್ಲಿ ಪಾದಯಾತ್ರೆ ನಡೆಸುವುದಾಗಿ ಹೇಳಿದರು. ತೀವ್ರವಾದ ಬರಗಾಲದಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೊಬ್ಬರಿ ಬೆಲೆ ಕುಸಿತವಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಒಂದು ವೇಳೆ ನಾನು ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದರೆ ಕೊಬ್ಬರಿ ಖರೀದಿಯ ಬೆಂಬಲ ಬೆಲೆಯನ್ನು ಕ್ವಿಂಟಾಲ್‍ಗೆ 15000 ರೂ. ನಿಗದಿ ಮಾಡುತ್ತಿದ್ದೆ ಎಂದರು.
ಭಾರತ-ಪ್ಯಾಲೇಸ್ತೀನ್ ದೀರ್ಘಕಾಲದ ಸಂಬಂಧ ಮುಂದುವರೆಯಲಿದೆ : ಜೈಶಂಕರ್
ಬರ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ 35 ಸಾವಿರ ಕೋಟಿ ರೂ.ನಷ್ಟು ಬೆಳೆ ನಷ್ಟವಾಗಿದೆ. 18 ಸಾವಿರ ಕೋಟಿ ರೂ. ಬೆಳೆ ಹಾನಿಯ ಬಗ್ಗೆ ವರದಿ ಸಲ್ಲಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ಪರಿಹಾರ ಕೊಡಲು ಸಾಧ್ಯವಾಗುವುದಿಲ್ಲ. ಬರ ಪರಿಹಾರ ನೀಡಲು ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇದೆ. ಆದರೆ, ಹೊಸ ಕಾರು ಖರೀದಿ, ಮನೆ ನವೀಕರಣಕ್ಕೆ ಹಣದ ಕೊರತೆ ಇಲ್ಲ ಎಂದು ಟೀಕಿಸಿದರು.
ಕಳೆದ ಆರು ತಿಂಗಳಿಂದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜಪ ಮಾಡುತ್ತಿದೆ. ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಸರ್ಕಾರದ ಸಾಧನೆಯ ಪ್ರಚಾರಕ್ಕೆ ನೀಡಿದ ಜಾಹೀರಾತು 140 ಕೋಟಿ ರೂ. ಬಿಡುಗಡೆ ಮಾಡಿಲ್ಲ. ರೈತರಿಗೆ ನೆರವು ನೀಡಲು ಸರ್ಕಾರ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.