Thursday, May 2, 2024
Homeರಾಜ್ಯಈಡಿಗ ಸಮುದಾಯ ಒಡೆಯುವ ಹುನ್ನಾರ ನಡೆಯುತ್ತಿದೆ : ಹರಿಪ್ರಸಾದ್ ಆಕ್ರೋಶ

ಈಡಿಗ ಸಮುದಾಯ ಒಡೆಯುವ ಹುನ್ನಾರ ನಡೆಯುತ್ತಿದೆ : ಹರಿಪ್ರಸಾದ್ ಆಕ್ರೋಶ

ಬೆಂಗಳೂರು,ಡಿ.10- ಆರ್ಯ ಈಡಿಗರ ಸಂಘದ ವತಿಯಿಂದ ನಡೆಯುತ್ತಿರುವ ಸುವರ್ಣ ಮಹೋತ್ಸವ ಹಾಗೂ ಸ್ವಾಭಿಮಾನ ಸಮಾವೇಶದಿಂದ ತಮ್ಮನ್ನು ದೂರ ಇಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಸಮುದಾಯದ ಮುಖಂಡ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರ ನೇತೃತ್ವದಲ್ಲಿಂದು ನಗರದಲ್ಲಿ ಆರ್ಯ ಈಡಿಗರ ಸಂಘದ ವತಿಯಿಂದ ಈಡಿಗ, ಬಿಲ್ಲವ, ನಾಮದಾರಿ ಸೇರಿದಂತೆ 26 ಉಪಪಂಗಡಗಳ ಸ್ವಾಭಿಮಾನಿ ಸಮಾವೇಶ ನಡೆದಿತ್ತು. ಆದರೆ ಉದ್ದೇಶಪೂರ್ವಕವಾಗಿಯೇ ಬಿ.ಕೆ.ಹರಿಪ್ರಸಾದ್ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ಹರಿಪ್ರಸಾದ್, ಇದು ರಾಜಕೀಯಪ್ರೇರಿತ ಸಮಾವೇಶ. ಆರ್ಯ ಈಡಿಗ ಸಂಘ ಸಮುದಾಯವನ್ನು ಒಳಗೊಳ್ಳುವುದಿಲ್ಲ ಎಂದಿದ್ದಾರೆ.

26 ಉಪಪಂಗಡಗಳಿರುವ ಸುಮಾರು 50ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ ಆರ್ಯ ಈಡಿಗ ಸಂಘದಲ್ಲಿ 12 ಸದಸ್ಯರು ಮಾತ್ರ. ಹೀಗಾಗಿ ಸಂಘ ಸಮುದಾಯದ ಪ್ರತಿನಿಧಿಗಳು ಅಲ್ಲ ಎಂದು ತಿರುಗೇಟು ನೀಡಿದ್ದಾರೆ. ತಮ್ಮನ್ನು ಉದ್ದೇಶಪೂರ್ವಕವಾಗಿ ಸಮಾವೇಶದಿಂದ ದೂರ ಇಡಲಾಗಿದೆ. ಅದೇ ರೀತಿ ಸಮಾಜದಲ್ಲಿ ಐದು ಮಂದಿ ಸ್ವಾಮೀಜಿಗಳಿದ್ದಾರೆ. ಅವರಲ್ಲಿ ಪ್ರಣವಾನಂದ ಸ್ವಾಮೀಜಿಯವರನ್ನು ಹೊರಗಿಡಲಾಗಿದೆ.

ಇದೇ ಸಂಘದವರೇ ಅವರನ್ನು ಕರೆತಂದು ಸ್ವಾಮೀಜಿ ಮಾಡಿದರು. ಅವರು ಉಗ್ರ ಹಿಂದುತ್ವವಾದಿಯಾಗಿದ್ದರು. ಹಿಂದುಳಿದ ಬಿಲ್ಲವ ಸಮುದಾಯದ ವಿಷಯದಲ್ಲಿ ಆ ರೀತಿಯ ಸಿದ್ದಾಂತಗಳು ಸೂಕ್ತವಲ್ಲ ಎಂದು ಸಲಹೆ ನೀಡಿ ಸ್ವಾಮೀಜಿಗಳು ಸುಧಾರಿಸುವ ಹಂತದಲ್ಲಿ ಅವರನ್ನು ದೂರ ಇಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಕಳೆದ ಸೆಪ್ಟೆಂಬರ್ 9ರಂದು ತಾವು ಹಿಂದುಳಿದ ವರ್ಗಗಳು ಹಾಗೂ ಬಿಲ್ಲವರ ಸಮಾವೇಶ ನಡೆಸಿದ ಬಳಿಕ ರಾಜ್ಯದಲ್ಲಿ ಅಹಿಂದ ಸಮಾವೇಶಗಳು ಹೆಚ್ಚಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ತತ್ವದಲ್ಲಿ ನಂಬಿಕೆ ಇಟ್ಟಿರಬಹುದು. ಆದರೆ ಕಾಂಗ್ರೆಸ್ ಸಿದ್ದಾಂತವನ್ನು ಪಾಲಿಸುತ್ತೇನೆ.

ಹಿಂದುಳಿದ, ದಲಿತ, ಅಲ್ಪಸಂಖ್ಯಾತ, ಮೇಲ್ವರ್ಗ ಸೇರಿದಂತೆ ಎಲ್ಲರನ್ನೂ ಒಳಗೊಳ್ಳುವುದು ಕಾಂಗ್ರೆಸ್‍ನ ಸಿದ್ದಾಂತ. ತಾವು ಅದರ ಪರವಾಗಿರುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಹರಿಪ್ರಸಾದ್ ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಹರಿಪ್ರಸಾದ್ ಅವರನ್ನು ಸಂಪುಟದಿಂದ ದೂರ ಇರಿಸಿದ್ದಾರೆ. ಮಧುಬಂಗಾರಪ್ಪ ಅವರಿಗೆ ಹೆಚ್ಚಿನ ಮಣೆ ಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.ಕಳೆದ ಸೆಪ್ಟೆಂಬರ್‍ನಲ್ಲಿ ನಡೆಸಿದ್ದ ಸಮಾವೇಶದಲ್ಲಿ ಬಿ.ಕೆ.ಹರಿಪ್ರಸಾದ್ ಸಿದ್ದರಾಮಯ್ಯ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದರು. ಇದಕ್ಕೆ ತಿರುಗೇಟು ನೀಡಲೆಂದೇ ಮಧುಬಂಗಾರಪ್ಪ ನೇತೃತ್ವದಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ಭಾರತ-ಪ್ಯಾಲೇಸ್ತೀನ್‍ ದೀರ್ಘಕಾಲದ ಸಂಬಂಧ ಮುಂದುವರೆಯಲಿದೆ : ಜೈಶಂಕರ್

ಇದನ್ನು ಪುಷ್ಟೀಕರಿಸಿರುವ ಸಮುದಾಯದ ಪ್ರಣವಾನಂದ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿ.ಕೆ.ಹರಿಪ್ರಸಾದ್ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಸಲುವಾಗಿಯೇ ಸಂಚು ರೂಪಿಸಿದ್ದಾರೆ. ಈ ಹಿಂದೆ ಲಿಂಗಾಯಿತ-ವೀರಶೈವ ಸಮುದಾಯವನ್ನು ಒಡೆಯಲು ಇದೇ ರೀತಿಯ ಸಂಚು ನಡೆದಿತ್ತು. ಈಗ ಬಿಲ್ಲವ, ಈಡಿಗ ಸಮುದಾಯದವರ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮುದಾಯದ ಪ್ರಮುಖ ನಾಯಕರಾದ ಬಿ.ಕೆ.ಹರಿಪ್ರಸಾದ್ ಇಂದಿನ ಸಮಾವೇಶದಲ್ಲಿ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಜೆಟ್‍ನಲ್ಲಿ ತಮಗೆ ಬೇಕಾದ ಜಾತಿಗಳಿಗೆ ನೂರಾರು ಕೋಟಿ ರೂ.ಗಳನ್ನು ಹಂಚಿಕೆ ಮಾಡುತ್ತಾರೆ. ಅದೇ ಕೋಟಿ ಚೆನ್ನಯ್ಯ ಪ್ರತಿಷ್ಠಾನಕ್ಕೆ ಮತ್ತು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಲ್ಲವರ ಅಧ್ಯಯನ ಪೀಠಕ್ಕೆ 6 ಕೋಟಿ ರೂ.ಗಳ ನೀಡಲು ಸರ್ಕಾರದ ಬಳಿ ಹಣ ಇಲ್ಲ. ಸಮುದಾಯಗಳೆಂದರೆ ಅಷ್ಟು ಕೀಳೇ ಎಂದು ಪ್ರಶ್ನಿಸಿದರು.

ಟ್ರಕ್‍ಗೆ ಅಪ್ಪಳಿಸಿ ಹೊತ್ತಿ ಉರಿದ ಕಾರು, 8 ಮಂದಿ ಸಜೀವ ದಹನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದಕ್ಕಾಗಿ ಹಿಂದುಳಿದ ವರ್ಗದವನು ಎಂಬ ಕಾರಣಕ್ಕೆ ನನಗೆ ನೋಟಿಸ್ ನೀಡಲಾಯಿತು. ಆದರೆ ಹೈಕಮಾಂಡ್‍ನನ್ನು ಪ್ರಶ್ನಿಸಿದ ಹಲವು ನಾಯಕರ ವಿರುದ್ಧ ಕ್ರಮಗಳಾಗಿಲ್ಲ. ನಾನು ಹೈಕಮಾಂಡ್‍ನನ್ನು ಪ್ರಶ್ನಿಸುವುದಿಲ್ಲ. ರಾಜ್ಯದ ಕೆಲವು ನಾಯಕರು ಈ ರೀತಿಯ ತಾರತಮ್ಯ ಮಾಡುತ್ತಿದ್ದಾರೆ. ಪಕ್ಷದಲ್ಲಿ ಮನಸ್ಸಿಗೆ ಬಂದಂತೆ ನಡೆದುಕೊಳ್ಳಲು ಅವಕಾಶ ಇಲ್ಲ.

ನನಗೆ ಕೊಟ್ಟ ನೋಟಿಸ್‍ಗೆ ಉತ್ತರ ನೀಡಿದ್ದೇನೆ. ಅದರ ನಂತರ ರಾಷ್ಟ್ರೀಯ ಕಾರ್ಯಕಾರಣಿಯ ಎರಡು ಸಭೆಗಳಲ್ಲೂ ಭಾಗವಹಿಸಿದ್ದೇನೆ. ಹೀಗಾಗಿ ನನಗೆ ಪಕ್ಷದ ಶಿಸ್ತಿನ ಬಗ್ಗೆ ಹೆಚ್ಚಿನ ಆತಂಕ ಇಲ್ಲ ಎಂದು ಹೇಳಿದರು.

RELATED ARTICLES

Latest News