Sunday, May 19, 2024
Homeರಾಜ್ಯBIG NEWS : ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣಗೆ ಜಾಮೀನು ಮಂಜೂರು

BIG NEWS : ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣಗೆ ಜಾಮೀನು ಮಂಜೂರು

ಬೆಂಗಳೂರು, ಮೇ 13- ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

ಸಾಕ್ಷ್ಯ ನಾಶ ಪಡಿಸಬಾರದು, ವಿದೇಶ ಸೇರಿದಂತೆ ನಿಗೂಢ ಸ್ಥಳಕ್ಕೆ ತೆರಳಬಾರದು. 5 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ನ ಭದ್ರತೆ ಒದಗಿಸಬೇಕು ಎಂಬವು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಜಾಮೀನು ಮಂಜೂರು ಮಾಡಿದ್ದಾರೆ.

ಹಾಸನದ ಪೆನ್ ಡ್ರೈವ್ ಪ್ರಕರಣ ಬಯಲಿಗೆ ಬಂದ ಬಳಿಕ ಮಹಿಳೆಯ ಪುತ್ರ ಮೈಸೂರಿನ ಕೆ.ಅರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿ, ತಮ್ಮ ತಾಯಿ ಅಪಹರಣವಾಗಿದ್ದಾರೆ ಎಂದು ಆರೋಪಿಸಿದರು. ಈ ಸಂಬಂಧ ತನಿಖೆ ನಡೆಸಿದ ಕೆ.ಅರ್.ನಗರ ಹಾಗೂ ವಿಶೇಷ ತನಿಖಾ ದಳದ ಅಧಿಕಾರಿಗಳು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಅವರ ಆಪ್ತ ಸತೀಶ್ ಬಾಬು ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ರೇವಣ್ಣ ಜಾಮೀನಿಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಮುಂದೆ ಹೆಚ್.ಡಿ.ರೇವಣ್ಣ ಅವರ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು. ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರ ಪಾತ್ರವಿಲ್ಲ ಎಂದರು. ಐಪಿಸಿ ಸೆಕ್ಷನ್ 364 ಎ ಮತ್ತು 365ರ ಅಡಿ ಅಪಹರಣ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್ ಬಳಕೆ ಸಂಪೂರ್ಣ ಕಾನೂನು ಬಾಹಿರವಾಗಿದೆ. ಅಪಹರಣ ಪ್ರಕರಣದಲ್ಲಿ ಒತ್ತೆಯಾಳನ್ನು ಬಿಡುಗಡೆ ಮಾಡಲು ಬೇಡಿಕೆ ಇಟ್ಟಿರಬೇಕು, ಕೊಲ್ಲುವುದಾಗಿ ಬೆದರಿಕೆ ಹಾಕಿರಬೇಕು. ಹಲ್ಲೆ ಮಾಡಿರಬೇಕು, ಈ ಎಲ್ಲಾ ಆರೋಪಗಳಿಗೆ ಪೂರಕ ಸಾಕ್ಷ್ಯಗಳಿರಬೇಕು. ಅಪಹರಣ ಮಾಡಿದವರನ್ನು ಒತ್ತೆಯಲ್ಲಿಡುವುದು ಅಪರಾಧ ಹೌದಾದರೂ, ಇಲ್ಲಿ ಪ್ರತಿವಾದಿ ಹೆಚ್.ಡಿ.ರೇವಣ್ಣ ಮಹಿಳೆಯನ್ನು ಅಪಹರಣ ಮಾಡಿಲ್ಲ, ಆಕೆಯನ್ನು ಒತ್ತೆಯಾಳಾಗಿಸಿರಿಕೊಂಡಿಲ್ಲ. ಆಕೆಯನ್ನು ಬಿಡುಗಡೆ ಮಾಡಲು ಯಾವುದೇ ಬೇಡಿಕೆಯನ್ನೂ ಇಟ್ಟಿಲ್ಲ ಎಂದು ವಾದಿಸಿದ್ದಾರೆ.

ದೂರು ನೀಡಿರುವ ಮಹಿಳೆಯ ಪುತ್ರ, ತನ್ನ ತಾಯಿ ಅಪಹರಣವಾಗಿದ್ಧಾರೆ, ತನ್ನ ತಾಯಿಯನ್ನು ಅಪಹರಣ ಮಾಡಿ ಒತ್ತೆಯಾಳಾಗಿಸಿಕೊಂಡಿದ್ದಾರೆ ಎಂದು ಊಹೆ ಮಾಡಿಕೊಂಡಿದ್ದಾರೆ. ದೂರು ನೀಡಲು ಕೂಡ ಸಾಕಷ್ಟು ವಿಳಂಬವಾಗಿದೆ. ದೂರು ನೀಡುವ ಮೊದಲು ದೂರುದಾರರು ತನ್ನ ತಾಯಿಯನ್ನು ಹುಡುಕುವ ಪ್ರಯತ್ನ ಮಾಡಿಲ್ಲ. ಪೆನ್ಡ್ರೈವ್ ಬಹಿರಂಗಗೊಂಡ ಬಳಿಕ ದೂರು ನೀಡಲಾಗಿದೆ. ಮಹಿಳೆ ರೇವಣ್ಣ ಅವರ ಮನೆಯಲ್ಲಿ 10 ವರ್ಷ ಕೆಲಸ ಮಾಡಿದ್ದರು ಎಂದೆಲ್ಲಾ ವಿವರಿಸಿದರು.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಸತೀಶ್ ಬಾಬು ದ್ವಿಚಕ್ರವಾಹನದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಿದ್ದರು. ಚುನಾವಣೆಯ ದಿನ ಮಹಿಳೆಯನ್ನು ಮತ್ತೆ ಕರೆ ತಂದು ವಾಪಾಸ್ ಬಿಟ್ಟಿದ್ದಾರೆ. ಮಹಿಳೆ ತಮ್ಮ ಮತ ಚಲಾಯಿಸಿದ್ದಾರೆ. ಇದನ್ನು ಹೇಗೆ ಅಪಹರಣ ಪ್ರಕರಣ ಎಂದು ಪರಿಗಣಿಸಲು ಸಾಧ್ಯ ಎಂದು ನಾಗೇಶ್ ವಾದಿಸಿದ್ದರು.

ಜೀವಾವಧಿ ಶಿಕ್ಷೆಗೆ ಅರ್ಹವಾದ ಸಾಧ್ಯತೆಗಳಿದ್ದರೆ ಮಾತ್ರ ಜಾಮೀನು ನಿರಾಕರಿಸಬಹುದು. ಆದರೆ ಈ ಪ್ರಕರಣದಲ್ಲಿ ರೇವಣ್ಣನವರ ವಿರುದ್ಧ ಕೇಸು ದಾಖಲಿಸಲು ಸೂಕ್ತ ಸಾಕ್ಷ್ಯಗಳೇ ಇಲ್ಲ. ಮಹಿಳೆ ಪತ್ತೆಯಾದ ಬಳಿಕ ಆರು ದಿನಗಳಾದರೂ ಹೇಳಿಕೆ ದಾಖಲಿಸಿಲ್ಲ. ಸಾಕ್ಷ್ಯ ಸಂಗ್ರಹಿಸಲು ವಿಳಂಬ ಮಾಡಲಾಗಿದೆ. ಮಹಿಳೆ ಸ್ವಯಿಚ್ಚೆಯಿಂದ ಹೋಗಿದ್ದಾರೆ. ಹಾಗಾಗಿ ಪೊಲೀಸರು ರೇವಣ್ಣನವರ ವಿರುದ್ಧ ಐಪಿಸಿ 364 ಎ ಮತ್ತು 365 ಅಡಿ ಪ್ರಕರಣ ದಾಖಲಿಸಿರುವುದು ಕಾನೂನು ಬಾಹಿರ ಎಂದು ವಾದಿಸಿದರು.

ಸರ್ಕಾರದ ಪರವಾಗಿ ವಾದಿಸಿದ ವಿಶೇಷ ಅಭಿಯೋಜಕ ಜಯ್ನಾ ಕೊಠಾರಿ, ಮಹಿಳೆಯ ಅಪಹರಣದ ಹಿಂದೆ ಸಾಕ್ಷ್ಯ ನಾಶ ಪಡಿಸುವ ಉದ್ದೇಶ ಇದೆ. ಹಾಸನದಲ್ಲಿ ಸಿಕ್ಕ ಪೆನ್ಡ್ರೈವ್ ಪ್ರಕರಣದಲ್ಲಿ ಅಪಹರಣಕ್ಕೆ ಒಳಗಾದ ಮಹಿಳೆ ಸಂತ್ರಸ್ಥೆಯಾಗಿದ್ದಾರೆ. ಹಾಗಾಗಿ ಆಕೆಯನ್ನು ಮರೆ ಮಾಚುವ ಮೂಲಕ ಸಾಕ್ಷ್ಯ ನಾಶ ಪಡಿಸುವ ದುರುದ್ದೇಶ ಹೊಂದಿದ್ದರು ಎಂದು ಪ್ರತಿವಾದಿಸಿದರು. ಎಸ್ಐಟಿ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್‌ ನಾಯ್ಕ್‌ ಅವರು “ಎಚ್‌ ಡಿ ರೇವಣ್ಣ ಪ್ರಭಾವಶಾಲಿಯಾಗಿರುವ ಕಾರಣ, ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶ ಪಡಿಸುವ ಸಾಧ್ಯತೆ ಇದೆ. ಮಹಿಳೆಯರು ಹೇಳಿಕೆ ನೀಡುವಿದಿಲ್ಲ, ಹಾಗೂ ಈವರೆಗಿನ ವಿಚಾರಣೆಯಲ್ಲಿ ರೇವಣ್ಣ ಅಗತ್ಯ ಸಹಕಾರ ನೀಡಿಲ್ಲ ಎಂದು ಬಲವಾಗಿ ವಾದಿಸಿದರು. ವಾದಿಸಿದರು.

RELATED ARTICLES

Latest News