Tuesday, May 28, 2024
Homeರಾಷ್ಟ್ರೀಯನಾಲ್ಕನೇ ಹಂತದ ಲೋಕಸಭಾ ಚುನಾವಣೆ, ಬಿರುಸಿನ ಮತದಾನ

ನಾಲ್ಕನೇ ಹಂತದ ಲೋಕಸಭಾ ಚುನಾವಣೆ, ಬಿರುಸಿನ ಮತದಾನ

ನವದೆಹಲಿ,ಮೇ 13- ಜಿದ್ದಾಜಿದ್ದಿನ ಕಣವಾಗಿರುವ 96 ಲೋಕಸಭಾ ಕ್ಷೇತ್ರಗಳಲ್ಲಿ ಹಾಗೂ ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಕಡೆ ಹಿಂಸಾಚಾರ, ಸಣ್ಣಪುಟ್ಟ ಗೊಂದಲದ ನಡುವೆಯೇ ಬಿರುಸಿನ ಮತದಾನ ನಡೆದಿದೆ.

ಹಿಂಸಾಚಾರಕ್ಕೆ ಕುಖ್ಯಾತಿ ಪಡೆದಿರುವ ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್‌ ಸ್ಪೋಟಗೊಂಡು ತೃಣಮೂಲ ಕಾಂಗ್ರೆಸ್‌‍ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾನೆ.ಪುರ್ಬಾಬರ್ಧಮಾನ ಜಿಲ್ಲೆಯ ಬೋಲ್ಪುರ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಎಸೆದ ಕಚ್ಚಾತೈಲ ಬಾಂಬ್‌ನಿಂದ ಟಿಎಂಸಿ ಕಾರ್ಯಕರ್ತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ನಂತರ ದುರ್ಗಾಪುರ ಮತ್ತಿತರೆಡೆ ಗಲಭೆ ನಡೆದಿರುವ ಬಗ್ಗೆ ವರದಿಯಾಗಿದೆ.

ಟಿಎಂಸಿ ಕಾರ್ಯಕರ್ತನ ಸಾವಿಗೆ ಬಿಜೆಪಿ ಕಾರಣ ಎಂದು ಆ ಪಕ್ಷದ ಕಾರ್ಯಕರ್ತರು ದಾಂಧಲೆ ಎಬ್ಬಿಸಿದ್ದಾರೆ. ಮತದಾನ ನಡೆಯುತ್ತಿದ್ದ ವೇಳೆಯೇ ಎರಡೂ ಕಡೆ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು.

ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮತದಾನ ನಡೆಯುತ್ತಿರುವ ಎಲ್ಲಾ ಕಡೆ ಪೊಲೀಸರು ಮತ್ತು ಅರೆಸೇನಾಪಡೆ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಉಳಿದಂತೆ ಲೋಕಸಭಾ ಚುನಾವಣೆ ನಡೆಯುತ್ತಿರುವ ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ, ಜಮು-ಕಾಶೀರ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಹೆಚ್ಚಿನ ಪ್ರಮಾಣದ ಮತದಾನ ನಡೆದಿದೆ.

ಭಯೋತ್ಪಾದನೆ ಚಟುವಟಿಕೆಗಳಿಂದಲೇ ಮತದಾನದ ವೇಳೆ ಬಹಿಷ್ಕಾರ ಕಾಣುತ್ತಿದ್ದ ಕಣಿವೆ ರಾಜ್ಯದಲ್ಲಿ ಮೊದಲ ಬಾರಿಗೆ ವ್ಯಾಪಕ ಪ್ರಮಾಣದ ಮತದಾನವಾಗಿರುವುದು ಈ ಚುನಾವಣೆಯ ವಿಶೇಷತೆ.

ಪ್ರತಿ ಚುನಾವಣೆಯಲ್ಲೂ ಭಯೋತ್ಪಾದಕ ಸಂಘಟನೆಗಳ ಬೆದರಿಕೆಯಿಂದ ಮತದಾರರು ಮನೆಯಿಂದ ಆಚೆ ಬರದೆ ಮತದಾನದಿಂದಲೇ ದೂರ ಉಳಿಯುತ್ತಿದ್ದರು. ಮೂರು ದಶಕಗಳ ನಂತರ ಕಣಿವೆ ರಾಜ್ಯದ ಎಲ್ಲಾ ಬಹುತೇಕ ಮತಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ತಮ ಹಕ್ಕು ಚಲಾಯಿಸಿದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ಎನ್‌ಸಿ ಮುಖ್ಯಸ್ಥರಾದ ಫಾರುಖ್‌ ಅಬ್ದುಲ್ಲಾ, ಒಮರ್‌ ಅಬ್ದುಲ್ಲಾ, ಪಿಡಿಪಿಯ ಸಯ್ಯದ್‌ ಮುಫ್ತಿ ಸೇರಿ ಹಲವರು ಹಕ್ಕು ಚಲಾಯಿಸಿದರು. ರಾಜಧಾನಿ ಶ್ರೀನಗರದ ಅನೇಕ ಮತಕೇಂದ್ರಗಳಲ್ಲಿ ಮತದಾರರು ಬೆಳಗ್ಗೆ 7 ಗಂಟೆಯಿಂದಲೇ ಉತ್ಸುಕರಾಗಿ ಮತದಾನ ಮಾಡಿದರು. ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಮತದಾರರ ಉತ್ಸಾಹಕ್ಕೆ ಚುನಾವಣಾ ಆಯೋಗವೇ ಮೆಚ್ಚುಗೆ ವ್ಯಕ್ತಪಡಿಸಿದೆ.

ಜಿದ್ದಾಜಿದ್ದಿನ ಸಮರಕ್ಕೆ ಹೆಸರುವಾಸಿಯಾಗಿರುವ ಆಂಧ್ರಪ್ರದೇಶದಲ್ಲಿ ಟಿಡಿಪಿ ಮತ್ತು ವೈಎಸ್‌‍ಆರ್‌ಸಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ನಮ ಪಕ್ಷದ ಕಾರ್ಯಕರ್ತರನ್ನು ವೈಎಸ್‌‍ಆರ್‌ಸಿಯವರು ಅಪಹರಿಸಿದ್ದಾರೆ ಎಂದು ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಕಾರ್ಯಕರ್ತರು ದಾಂಧಲೆ ಎಬ್ಬಿಸಿದ್ದಾರೆ.

ಚುನಾವಣೆಯಲ್ಲಿ ಸೋಲಿನ ಮುಖಭಂಗವನ್ನು ತಪ್ಪಿಸಿಕೊಳ್ಳಲು ಟಿಡಿಪಿ ನಮ ಮೇಲೆ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಸಿಎಂ ಜಗನ್‌ಮೋಹನ್‌ರೆಡ್ಡಿ ನೇತೃತ್ದಲ್ಲಿ ವೈಎಸ್‌‍ಆರ್‌ಸಿ ತಿರುಗೇಟು ಕೊಟ್ಟಿದೆ.ಆಂಧ್ರಪ್ರದೇಶದಾದ್ಯಂತ ವ್ಯಾಪಕವಾದ ಭದ್ರತೆಯನ್ನು ಕೈಗೊಂಡಿದ್ದು, ಮುಕ್ತ ಮತ್ತು ನ್ಯಾಯಸಮತ ಮತದಾನಕ್ಕೆ ಆಯೋಗ ಸರ್ಪಗಾವಲು ಹಾಕಿದೆ.

ಪ್ರಮುಖರಾದ ಜಗಮೋಹನರೆಡ್ಡಿ, ಚಂದ್ರಬಾಬು ನಾಯ್ಡು, ಚಿರಂಜೀವಿ, ಅಲ್ಲು ಅರ್ಜುನ್‌, ಪವನ್‌ಕಲ್ಯಾಣ್‌, ಶರ್ಮಿಳಾ , ಪುರಂದರೇಶ್ವರಿ ತಮ ಹಕ್ಕು ಚಲಾಯಿಸಿದರು. ಇತ್ತ ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತರೆಡ್ಡಿ, ಮಾಜಿ ಸಿಎಂ ಚಂದ್ರಶೇಖರ ರಾವ್‌, ಪ್ರಮುಖರಾದ ಅಸಾದುದ್ದೀನ್‌ ಓವೈಸಿ, ಅಕ್ಬರುದ್ದೀನ್‌ ಓವೈಸಿ ಸೇರಿ ಹಲವು ಗಣ್ಯರು ಮತದಾನ ಮಾಡಿದ್ದಾರೆ.ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಶಾಂತಿಯುತ ಮತದಾನ ನಡೆದಿದೆ.

RELATED ARTICLES

Latest News